Advertisement
ಸಾಮಾನ್ಯ ಮನುಷ್ಯನೊಬ್ಬ ಒಂದು ದಿನದಲ್ಲಿ ಶೇ.50ರಿಂದ ಶೇ.70 ಭಾಗವನ್ನು ಇತರರೊಂದಿಗೆ ಸಂಭಾಷಣೆಯಲ್ಲಿ ಕಳೆಯುತ್ತಾನೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಈಗ ನಾವು ಸಂವಹನ ನಡೆಸಲು ಅಶಕ್ತರಾದರೆ ಎಷ್ಟು ಏಕಾಂಗಿತನ ಮತ್ತು ಪ್ರತಿಕೂಲ ಪರಿಣಾಮವನ್ನು ಅನುಭವಿಸಬೇಕಾದೀತು ಎಂಬುದನ್ನು ಕಲ್ಪಿಸಿಕೊಳ್ಳಿ. ಮನುಷ್ಯನಿಗೆ ಸಾಮಾಜಿಕವಾಗಿ ಜೀವಿಸುವುದಕ್ಕೆ ಮಾತು ಮತ್ತು ಭಾಷಿಕ ಕೌಶಲಗಳು ಅತ್ಯಂತ ಮೂಲಭೂತ ಅಗತ್ಯಗಳಾಗಿವೆ. ಮನುಷ್ಯನ ಭಾಷೆ ಮತ್ತು ಮಾತುಕತೆಯ ಕೌಶಲಗಳಲ್ಲಿ ಪ್ರಮುಖ ಭಾಗವು ಜೀವಿತದ ಆರಂಭಿಕ ಕಾಲಘಟ್ಟದಲ್ಲಿ, ಅಂದರೆ ಜನನದಿಂದ 5 ವರ್ಷಗಳ ವರೆಗಿನ ಅವಧಿಯಲ್ಲಿ ಬೆಳವಣಿಗೆ ಕಾಣುತ್ತವೆ. ಹೀಗಾಗಿ ಈ ಐದು ವರ್ಷಗಳನ್ನು “ನಿರ್ಣಾಯಕ ಕಾಲಘಟ್ಟ’ ಎಂಬುದಾಗಿ ಕರೆಯುತ್ತಾರೆ. ಈ ನಿರ್ಣಾಯಕ ಕಾಲಘಟ್ಟದಲ್ಲಿ ಮೆದುಳು ಅತ್ಯದ್ಭುತ ಗ್ರಹಣ ಸಾಮರ್ಥ್ಯ ಮತ್ತು ನಮನೀಯತೆಯನ್ನು ಹೊಂದಿರುವುದರಿಂದ ಮಕ್ಕಳು ಈ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಭಾಷಿಕ ಪ್ರಗತಿಯನ್ನು ಅನುಭವಿಸುತ್ತಾರೆ. ಇದೊಂದು ಪುಟ್ಟ ಕಿಟಕಿಯಂತಹ ಕಾಲಾವಧಿಯಾಗಿದ್ದು, ಈ ಅವಧಿಯಲ್ಲಿ ಮಕ್ಕಳ ಮಾತು ಮತ್ತು ಭಾಷಿಕ ಬೆಳವಣಿಗೆ ಚೆನ್ನಾಗಿ ನಡೆಯುವುದಕ್ಕಾಗಿ ಶ್ರವಣ, ದೃಶ್ಯ ಮತ್ತು ಅನುಭವ (ಸ್ಪರ್ಶ) ವಿಚಾರದಲ್ಲಿ ಸಮೃದ್ಧ ವಾತಾವರಣವನ್ನು ಅವರಿಗೆ ನಾವು ಕಲ್ಪಿಸಿಕೊಡಬೇಕಾಗಿದೆ. ಐದು ವರ್ಷಗಳ ಬಳಿಕ ಏನಾಗುತ್ತದೆ? ಮಕ್ಕಳು ಕಲಿಯುವುದನ್ನು ನಿಲ್ಲಿಸುತ್ತಾರೆಯೇ? ಖಂಡಿತ ಇಲ್ಲ. ಆದರೆ ಮಕ್ಕಳು ಭಾಷೆ ಮತ್ತು ಮಾತನ್ನು ಗ್ರಹಿಸುವ ಸಾಮರ್ಥ್ಯ ಐದು ವರ್ಷಗಳ ಬಳಿಕ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.
Related Articles
Advertisement
ನೀವು ಮಾಡಬಹುದಾದದ್ದು :
- ನಿಮ್ಮ ಮಗುವಿನ ಶ್ರವಣ, ಭಾಷೆ ಮತ್ತು ಮಾತಿನ ಬೆಳವಣಿಗೆಯ ಮೇಲೆ ನಿಗಾ ಇರಿಸದೆ ಇರುವುದು.
- “ನಿಮ್ಮ ಮಗು ಐದು ವರ್ಷಗಳಲ್ಲಿ ತಾನಾಗಿ ಮಾತನಾಡಲು ಆರಂಭಿಸುತ್ತದೆ’ ಎಂಬ ಯಾರದೋ ಉಪದೇಶವನ್ನು ನಂಬಿ ಮಗು ಇಂದಲ್ಲ ನಾಳೆ ಮಾತನಾಡಬಹುದು ಎಂದು ಕಾಯುತ್ತಿರುವುದು.
- ಮನೆಗೆಲಸ/ ಉದ್ಯೋಗಕ್ಕೆ ಅತಿಯಾಗಿ ಸಮಯ ವ್ಯಯಿಸಿ ಮಗುವಿನ ಕಡೆಗೆ ಗುಣಾತ್ಮಕ ಸಮಯವನ್ನು ವಿನಿಯೋಗಿಸದೆ ಇರುವುದು.
- ನೈಜ ವ್ಯಕ್ತಿಗಳ ಜತೆಗೆ ಮಾತುಕತೆ ಮತ್ತು ನೈಜ ವಸ್ತುಗಳನ್ನು ಭೌತಿಕವಾಗಿ ಅನುಭವಿಸುವ ಬದಲು ಡಿಜಿಟಲ್ ಗ್ಯಾಜೆಟ್ (ಟಿವಿ/ ಮೊಬೈಲ್) ನೋಡುತ್ತ ವ್ಯರ್ಥವಾಗಿ ಕಾಲ ಕಳೆಯುವುದಕ್ಕೆ ಅನುಮತಿ ನೀಡುವುದು.
- ಹೊಸ ವಿಚಾರಗಳನ್ನು, ಸಂಗತಿಗಳನ್ನು ಅನುಭವಿಸುವುದರಿಂದ ಮಗುವನ್ನು ಅತಿಯಾಗಿ ರಕ್ಷಿಸುವುದು, ನಿರ್ಬಂಧಿಸುವುದು.
- ನಿಮ್ಮ ಮಗುವಿಗೆ ಸಂವಹನ ನಡೆಸಲು ಅವಕಾಶ ನೀಡದೆ ನೀವಾಗಿಯೇ ಎಲ್ಲವನ್ನೂ ಒದಗಿಸಿಕೊಡುವುದು.
- ಮಗುವಿನ ಜತೆಗೆ ಹಿರಿಯರಂತೆ ಮಾತನಾಡುವುದು ಅಥವಾ ಬೆಳೆದ ಮಗುವಿನ ಜತೆಗೆ ಮಕ್ಕಳಂತೆ ಮಾತನಾಡುವುದು.
- ಮಾತನಾಡಲು ಮಗುವಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸದೆ ಇರುವುದು.
- ಅತಿಯಾಗಿ ಪ್ರತಿಕ್ರಿಯಿಸುವುದು ಮತ್ತು ನಿಮ್ಮ ಮಗುವನ್ನು ಇತರರ ಮಕ್ಕಳ ಜತೆಗೆ ಹೋಲಿಸುವುದು.
- ಮಗುವಿನ ಭಾಷೆ, ಶ್ರವಣ, ಮಾತಿನ ಬೆಳವಣಿಗೆಯ ಜತೆಗೆ ಚಲನೆಯ ಮೈಲಿಗಲ್ಲುಗಳ ಬಗ್ಗೆಯೂ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
- ಭಾಷಿಕ ಮತ್ತು ಮಾತಿನ ಮೈಲಿಗಲ್ಲುಗಳ ಅನುಸಾರವಾಗಿ ನಿಮ್ಮ ಮಗು ಕೌಶಲಗಳನ್ನು ಸಾಧಿಸದೆ ಇದ್ದರೆ ತಡಮಾಡದೆ ಅದರ ಸಾಮರ್ಥ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಈ ನಿರ್ಣಾಯಕ ಅವಧಿ ಕೈತಪ್ಪದಂತೆ ಎಚ್ಚರಿಕೆ ವಹಿಸಿ.
- ಮಗುವಿನ ಜತೆಗೆ ಕುಟುಂಬವಿಡೀ ಆಟವಾಡುವ ಸಮಯವನ್ನು ನಿಗದಿಪಡಿಸಿ, ಅರ್ಥವತ್ತಾದ ಆಟಗಳನ್ನು ಆಡುವುದು.
- ಅತಿ ರಕ್ಷಣೆ, ನಿರ್ಬಂಧಗಳ ಬದಲಿಗೆ ಮಗುವಿಗೆ ಕಾರಣ ಮತ್ತು ಪರಿಣಾಮಗಳ ಬಗ್ಗೆ ತಿಳಿಸಿಕೊಡಿ.
- ಡಿಜಿಟಲ್ ಗ್ಯಾಜೆಟ್‌ಗಳಲ್ಲಿ ಕಳೆಯುವ ಸಮಯಕ್ಕೆ ಮಿತಿ ಹಾಕಿ ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ. ಇದು ಮಗು ಮತ್ತು ಹೆತ್ತವರಿಗೆ ಸಮಾನವಾಗಿ ಅನ್ವಯಿಸಲಿ.
- ಮಗು ತನಗೇನು ಬೇಕು ಎಂಬುದನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವುದನ್ನು ರೂಢಿಸಿಕೊಳ್ಳಿ. ಮಗುವಿಗೆ ಅದು ಸಾಧ್ಯವಾಗದೆ ಇದ್ದರೆ ಆಯ್ಕೆಗಳನ್ನು ಒದಗಿಸಿ.
- ನಿಮ್ಮ ಮಗು ಪರಿಣಾಮಕಾರಿಯಾಗಿ ಮಾತನಾಡಲು ಸಮರ್ಥವಾಗುವಂತೆ ಮಾಡುವ ಗುರಿಯನ್ನು ಗಮನದಲ್ಲಿ ಇರಿಸಿಕೊಂಡು ಮಗುವಿನ ಜತೆಗೆ ಸಂಭಾಷಿಸಿ.
- ಮಗು ಅರ್ಥವಿಲ್ಲದ ಮಾತುಗಳನ್ನು ಆಡಿದರೂ ಅದು ಹೇಳಲು ಬಯಸುತ್ತಿರುವುದು ಏನನ್ನು ಎಂಬುದಕ್ಕೆ ಗಮನ ನೀಡಿ.
- ಮಗು ತನ್ನ ಇನ್ನಷ್ಟು ಬೆಳವಣಿಗೆಯ ಅಗತ್ಯವನ್ನು ಮನದಟ್ಟು ಮಾಡಿಕೊಳ್ಳುವುದಕ್ಕಾಗಿ ಮತ್ತು ಆ ನಿಟ್ಟಿನಲ್ಲಿ ಮಗುವಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅದು ಪ್ರದರ್ಶಿಸುವ ಪ್ರತೀ ಉತ್ತಮ ನಡತೆಯನ್ನೂ ಪುರಸ್ಕರಿಸಿ.