Advertisement
ತುಂಗಭದ್ರಾ ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ಪ್ರಮಾಣ ಹೆಚ್ಚುತ್ತಿದ್ದು, ನೀರು ಸಂಗ್ರಹ ಪ್ರಮಾಣ ಕಡಿಮೆ ಆಗುತ್ತಿದೆ. ಈ ಹಿಂದೆ ಎರಡು ಬೆಳೆಗಳಿಗೆ ದೊರೆಯುತ್ತಿದ್ದ ನೀರು, ಇದೀಗ ಒಂದು ಬೆಳೆಗೂ ಸಮರ್ಪಕ ರೀತಿಯಲ್ಲಿ ನೀಡದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಪರ್ಯಾಯವಾಗಿ ಸಮಾನಾಂತರ ಜಲಾಶಯ, ಫ್ಲಡ್‌ಫ್ಲೋ ಕೆನಾಲ್ ನಿರ್ಮಾಣ ಯೋಜನೆ ಪ್ರಸ್ತಾಪ ಹಂತದಲ್ಲೇ ಸಾಗುತ್ತಿದೆ.
Related Articles
Advertisement
ತುಂಗಭದ್ರಾ ಜಲಾಶಯ ಎಡ-ಬಲದಂಡೆ ನಾಲೆ, ವಿಜಯನಗರ ಕಾಲುವೆಗಳ ಮೂಲಕ ಲಕ್ಷಾಂತರ ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯ ಪಡೆದಿದೆ. ಆಂಧ್ರಪ್ರದೇಶದ ಹಲವು ಜಿಲ್ಲೆಗಳು ಇದೇ ಜಲಾಶಯದ ನೀರು ಅವಲಂಬಿಸಿವೆ. ತುಂಗಭದ್ರಾ ಜಲಾಶಯ ನೀರನ್ನು ವಿಶೇಷವಾಗಿ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು ಅವಲಂಬಿಸಿವೆ. ಹೇಳಿಕೊಳ್ಳುವುದಕ್ಕೆ, ಕರ ಪಾವತಿಗೆ ನೀರಾವರಿ ಜಮೀನು. ಆದರೆ ಹನಿ ನೀರು ಹೊಲಕ್ಕೆ ಹರಿಯದ ಸ್ಥಿತಿಯನ್ನು ಕೊನೆ ಭಾಗದ ರೈತರು ಹಲವು ವರ್ಷಗಳಿಂದ ಅನುಭವಿಸುತ್ತಿದ್ದು, ಇದೀಗ ಮಧ್ಯ ಭಾಗದ ರೈತರಿಗೂ ನೀರಿನ ಕೊರತೆ ಉಂಟಾಗುವಂತಾಗಿದೆ.
ಬೇಡಿಕೆಗೆ ಸಮರ್ಥ ಕ್ರಮವಿಲ್ಲ: ತುಂಗಭದ್ರಾ ಜಲಾಶಯದಲ್ಲಿ ಹೂಳು ಪ್ರಮಾಣ ಹೆಚ್ಚಳ, ನೀರು ಸಂಗ್ರಹ ಕಡಿಮೆಯಾಗುತ್ತಿರುವುದನ್ನು ಕಂಡು 80ರ ದಶಕದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರು ಸಮಾನಾಂತರ ಜಲಾಶಯ, ಫ್ಲಡ್‌ಫ್ಲೋ ಕೆನಾಲ್ ಪ್ರಸ್ತಾಪವನ್ನು ರಾಜ್ಯದ ಮುಂದಿರಿಸಿದ್ದರು. ರಾಜ್ಯ ಸರಕಾರ ಅತ್ತ ಆಸಕ್ತಿ ತೋರಿರಲಿಲ್ಲ.
ಜಲಾಶಯದಲ್ಲಿ ಸಂಗ್ರಹಗೊಂಡ ಸುಮಾರು 33-34 ಟಿಎಂಸಿ ಅಡಿ ಹೂಳು ತೆಗೆಯಲು ಕನಿಷ್ಟ 15-20 ಸಾವಿರ ಕೋಟಿ ಬೇಕಾಗಿದ್ದು, ತೆಗೆದು ಹೂಳು ಸಂಗ್ರಹಕ್ಕೆ 66 ಸಾವಿರ ಎಕರೆ ಭೂಮಿ ಬೇಕಾಗಿದೆ. ಅದೂ ಅಂದಾಜು 15 ಅಡಿ ಎತ್ತರಷ್ಟು ಹೂಳು ಸಂಗ್ರಹಗೊಳ್ಳಲಿದೆಯಂತೆ.
ಅನುಷ್ಠಾನಗೊಳ್ಳಬೇಕಿದೆ ಸಮಾನಾಂತರ ಜಲಾಶಯ: ತುಂಗಭದ್ರಾ ಜಲಾಶಯದಲ್ಲಿನ ಹೂಳು ತಡೆಗೆ ಕೊಪ್ಪಳ ಬಳಿ ಹಿರೇಹಳ್ಳ ಜಲಾಶಯ ನಿರ್ಮಾಣ ಮಾಡಲಾಗಿದೆಯಾದರೂ, ಸಮಸ್ಯೆ ಪರಿಣಾಮಕಾರಿ ತಡೆ ಸಾಧ್ಯವಾಗಿಲ್ಲ. ಇದಕ್ಕಾಗಿಯೇ ರಾಜ್ಯ ಸರಕಾರ ಕೊಪ್ಪಳ ಜಿಲ್ಲೆ ನವಲಿ ಬಳಿ 18 ಸಾವಿರ ಎಕರೆ ಪ್ರದೇಶದಲ್ಲಿ ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆಗೆ ಮುಂದಾಗಿತ್ತು. ಇಲ್ಲಿ ಅಂದಾಜು 5,600 ಕೋಟಿ ವೆಚ್ಚದಲ್ಲಿ ಸುಮಾರು 35 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದಾಗಿದೆ. ಯೋಜನೆಯ ಡಿಪಿಆರ್ ಆಗಿದ್ದು, ಸರಕಾರ ಅದಕ್ಕೆ ಅನುಮೋದನೆ ನೀಡಿದ್ದರೂ ಅನುಷ್ಠಾನ ಆರಂಭ ವಿಶ್ವಾಸ ಮೂಡಿಸುವ ಸ್ಥಿತಿಗೆ ಇನ್ನೂ ಬಂದಿಲ್ಲ.
ಇದೀಗ ಜಲಾಶಯಕ್ಕೆ ನೀರಿನ ಕೊರತೆ ಹಿನ್ನೆಲೆಯಲ್ಲಿ ಸಮಾನಾಂತರ ಜಲಾಶಯದ ಜತೆಗೆ ಪಶ್ಚಿಮ ನದಿಗಳ ಜೋಡಣೆ ವಿಚಾರವೂ ಚರ್ಚೆಗೆ ಬಂದಿದೆ. ಇದೇ ವಿಷಯವಾಗಿ ಶನಿವಾರ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಮೂರು ಜಿಲ್ಲೆಗಳ ಸಂಸದರು, ಶಾಸಕರು ಮಹತ್ವದ ಚರ್ಚೆ ನಡೆಸಲಿದ್ದಾರೆ. ಆದರೆ ನದಿಗಳ ಜೋಡಣೆ ಸುಲಭ ಸಾಧ್ಯವಿಲ್ಲ. ಇದಕ್ಕೆ ಅನೇಕ ತಕರಾರು, ತಾಂತ್ರಿಕ ಅಡ್ಡಿಗಳು ಎದುರಾಗುತ್ತವೆ. ನದಿಗಳ ಜೋಡಣೆ ಚರ್ಚೆಯ ಜತೆಗೆ ಸಮಾನಾಂತರ ಜಲಾಶಯ ನಿರ್ಮಾಣ ಕಾರ್ಯ ತ್ವರಿತ ಕಾರ್ಯಾರಂಭ ನಿಟ್ಟಿನಲ್ಲಿ ಏನೆಲ್ಲಾ ಸಾಧ್ಯವೋ ಆ ಎಲ್ಲ ಕ್ರಮಗಳ ಬಗ್ಗೆ ಸ್ಪಷ್ಟ ನಿಲುವು ಕೈಗೊಳ್ಳುವ ಅನಿವಾರ್ಯತೆ ಇದೆ. ಉತ್ತಮ ಮಳೆ ಬಿದ್ದರೆ ಜಲಾಶಯದಲ್ಲಿ ಹೂಳಿನ ಪರಿಣಾಮ ಸಂಗ್ರಹವಾಗದೇ ಸಮುದ್ರ ಸೇರುವ ನೀರನ್ನಾದರೂ ಸಮನಾಂತರ ಜಲಾಶಯದಲ್ಲಿ ಸಂಗ್ರಹಿಸಿಕೊಳ್ಳಬಹುದಾಗಿದೆ.
•ಅಮರೇಗೌಡ ಗೋನವಾರ