Advertisement

ಜಲಮಂಡಳಿ ಖಾಸಗೀಕರಣಕ್ಕೆ ಹುನ್ನಾರ?

11:03 AM Dec 07, 2019 | Suhan S |

ಬೆಂಗಳೂರು: ಸರ್ಕಾರವು ಜಲಮಂಡಳಿಯಲ್ಲಿ ಕಾಯಂ ನೌಕರರ ನೇಮಕಾತಿಗೆ ಮಂಜೂರಾತಿ ನೀಡದೆ ಬಹುಪಾಲು ಹೊರಗುತ್ತಿಗೆ ಪದ್ಧತಿಯನ್ನು ಪ್ರೋತ್ಸಾಹಿಸುತ್ತಿದೆ. ಆ ಮೂಲಕ ಭವಿಷ್ಯದಲ್ಲಿ ಜಲಮಂಡಳಿಯನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜಲಮಂಡಳಿಗೆ 3,500 ಕಾಯಂ ಹುದ್ದೆಗಳು ಮಂಜೂರಾಗಿದ್ದರೂ, ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಕಾಯಂ ಸಿಬ್ಬಂದಿ (1900) ಕಾರ್ಯನಿರ್ವಹಿಸುತ್ತಿದ್ದಾರೆ. ಬಾಕಿ ಇರುವ ಖಾಲಿ ಹುದ್ದೆಯಲ್ಲಿ ಬಹುಪಾಲು ಗುತ್ತಿಗೆ ನೌಕರರೇ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಜತೆಗೆ ಅನೇಕ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದು, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹುದ್ದೆಗಳನ್ನು ದೀರ್ಘಾವಧಿಗೆ ಗುತ್ತಿಗೆ ನೀಡಲು ಸರ್ಕಾರ ಹಾಗೂ ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದ್ದು, ಈ ನಡೆ ವಿರೋಧಿಸಿ ಜಲಮಂಡಳಿ ನೌಕರರ ಸಂಘವು ಪ್ರತಿಭಟನೆಗೆ ಸಿದ್ಧತೆ ನಡೆಸಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯು 250 ಚದರ ಕಿ.ಮೀ.ಯಿಂದ 800 ಚದರ ಕೀ.ಮಿಗೆ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಜಲಮಂಡಳಿಗೆ 2,700 ಹುದ್ದೆಗಳನ್ನು ನೀಡುವಂತೆ 2018ರಲ್ಲಿ ಸರ್ಕಾರರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪೈಕಿ ಪುನಃ ಸಭೆ ನಡೆಸಿ 1,000 ಹುದ್ದೆಗಳನ್ನು ಕಡಿತಗೊಳಿಸಿ ಕನಿಷ್ಠ 1,700 ಹುದ್ದೆಗಳನ್ನಾದರೂ ನೀಡುವಂತೆ ಕೋರಲಾಯಿತು. ಆದರೆ, ಸರ್ಕಾರ ಹಾಗೂ ಜಲಮಂಡಳಿ ಆಡಳಿತ 1,081 ಹುದ್ದೆಗಳಿಗೆ ಮಾತ್ರ ಅನುಮೋದನೆ ನೀಡಿ, ಬಾಕಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ.

ಅಲ್ಲದೇ 1,081 ಹುದ್ದೆಗಳ ಪೈಕಿ ಸದ್ಯ 350 ಹುದ್ದೆಗಳನ್ನು ಮಾತ್ರ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಜಲಮಂಡಳಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಹೊಸದಾಗಿ ಕಾಯಂ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸಾಕಷ್ಟು ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸದಿರುವುದು ನೌಕರರ ಸಂಘದ ಕೆಂಗಣ್ಣಿಗೆ ಗುರಿಯಾಗಿದೆ.

ಗುತ್ತಿಗೆ ಮುಂದುವರಿಸಿ: ಜಲಮಂಡಳಿಯ ದೈನಂದಿನ ಕ್ಷೇತ್ರಕಾರ್ಯಗಳ ಸುಗಮ ನಿರ್ವಹಣೆಗೆ ಅಗತ್ಯವಿರುವ 203 ಸಹಾಯಕರು, 43 ಚಾಲಕರು ಮತ್ತು 127 ನೈರ್ಮಲೀಕರಣ ಕೆಲಸಗಾರರು ಸೇರಿ ಒಟ್ಟು 373 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಕೋರಿ ನಗರಾಭಿವೃದ್ಧಿ ಇಲಾಖೆಗೆ 2019ರ ಫೆ.28 ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ, ಕಾಯಂ ಸಿಬ್ಬಂದಿ ನೇಮಕಕ್ಕೆ ಅನುಮತಿ ನಿರಾಕರಿಸಿದ ಸರ್ಕಾರ, ಸದರಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಮುಂದುವರಿಸುವಂತೆ ಸೂಚಿಸಿದೆ. ಇದಕ್ಕಾಗಿ ಖಾಸಗಿ ಕಂಪನಿಗಳ ಜತೆ 7ರಿಂದ 10 ವರ್ಷಗಳ ಅವಧಿಗೆ ಹೊರಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಈ ನಡೆ ಖಾಸಗೀಕರಣಕ್ಕೆ ಎಡೆಮಾಡಿಕೊಟ್ಟಂತಿದೆ ಎಂದು ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಡಿ.20ರಂದು ಪ್ರತಿಭಟನೆ: ಖಾಸಗೀಕರಣ ನಡೆ ವಿರೋಧಿಸಿ ಜಲಮಂಡಳಿ ನೌಕರರ ಸಂಘವು ಡಿ.20ರಂದು ಕಾವೇರಿ ಭವನದ ಮುಂಭಾಗ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದೇ ವೇಳೆ ಮಂಡಳಿಗೆ ತನ್ನದೇ ಆದ ಪಿಂಚಣಿ ನಿಧಿ ಸ್ಥಾಪಿಸಬೇಕು, ಪ್ರತಿ ವರ್ಷ 100ರಿಂದ 150 ಹುದ್ದೆಗಳು ನಿವೃತ್ತಿಯಿಂದ ಖಾಲಿಯಾಗುತ್ತಿದ್ದು, ಅವುಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಲು ಸಂಘ ತೀರ್ಮಾನಿಸಿದೆ.

 

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next