Advertisement

ಸದೃಢ ಭಾರತಕ್ಕೆ “ಫಿಟ್‌ ಇಂಡಿಯಾ’!

10:25 AM Aug 31, 2019 | mahesh |

ಮೋದಿ ಸರ್ಕಾರದ ಎರಡನೇ ಅವಧಿಯ ಮಹತ್ವಾಕಾಂಕ್ಷಿ ಕಾರ್ಯಕ್ರಮ “ಫಿಟ್‌ ಇಂಡಿಯಾ’ಗೆ ಚಾಲನೆ ದೊರೆತಿದೆ. ದೇಶವನ್ನು ಸ್ವಸ್ಥ-ಸದೃಢಗೊಳಿಸಬೇಕೆಂಬ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಈ ಆಂದೋಲನವು ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್‌ 29ರಂದು ಚಾಲನೆ ಪಡೆದಿರುವುದು ವಿಶೇಷ. ಸ್ವಚ್ಛ ಭಾರತ ಯೋಜನೆಯ ರೀತಿಯಲ್ಲಿಯೇ ಭಾರತದಾದ್ಯಂತ ಈ ಆಂದೋಲನವನ್ನು ವೇಗವಾಗಿ ವಿಸ್ತರಿಸಬೇಕು ಎಂಬ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದ್ದು, ಕ್ರೀಡಾಪಟುಗಳು, ಸಿನೆಮಾ ತಾರೆಯರು ಸೇರಿದಂತೆ ಹಲವು ಕ್ಷೇತ್ರಗಳ ಘಟಾನುಘಟಿಗಳ‌ು ಈ ಆಂದೋಲನವನ್ನು ಮುನ್ನಡೆಸಲಿದ್ದಾರೆ.

Advertisement

ಸರ್ಕಾರದ ಪ್ರಾಯೋಜಕತ್ವದಲ್ಲಿ, ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಹಾಗೂ ಜನರ ಸ್ವಯಂಪ್ರೇರಣೆಯಿಂದ ದೇಶಾದ್ಯಂತ ನಿರಂತರವಾಗಿ ವಾಕಥಾನ್‌ಗಳು, ಸೈಕಲ್‌ ರ್ಯಾಲಿಗಳು, ಆರೋಗ್ಯ ತಪಾಸಣಾ ಶಿಬಿರಗಳು ಆಯೋಜನೆಯಾಗಬೇಕು, ಒಟ್ಟಲ್ಲಿ ಜನರು ತಮ್ಮ ನಿತ್ಯ ಬದುಕಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳನ್ನು ಮಿಳಿತಗೊಳಿಸಬೇಕು ಎಂಬ ಇರಾದೆ ಕೇಂದ್ರ ಸರ್ಕಾರಕ್ಕೆ ಇದೆ. ಯುಜಿಸಿಯು ತನ್ನ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಪ್ರತಿನಿತ್ಯ ಕನಿಷ್ಠ 10 ಸಾವಿರ ಹೆಜ್ಜೆ ಹಾಕಬೇಕೆಂದು ಸಲಹೆ ನೀಡಿದೆ. ಫಿಟ್‌ ಇಂಡಿಯಾ ಪ್ರಸ್ತಾವನೆಯನ್ನು ಕ್ರೀಡಾ ಸಚಿವಾಲಯ ಸಿದ್ಧಪಡಿಸಿದ್ದು, ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರ ಮಹ ತ್ವಾ ಕಾಂಕ್ಷಿ ಪರಿಕಲ್ಪನೆ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

ಫಿಟ್‌ ಇಂಡಿಯಾ ಸಲಹಾ ಸಮಿತಿ
ಫಿಟ್‌ ಇಂಡಿಯಾ ಆಂದೋಲನಕ್ಕೆ ಸ್ಪಷ್ಟ ರೂಪ ಕೊಟ್ಟು, ಅದನ್ನು ಮುನ್ನಡೆಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಷನ್‌ ಸದಸ್ಯರು, ಖಾಸಗಿ ಸಂಸ್ಥೆಗಳು, ಫಿಟ್ನೆಸ್‌ ತರಬೇತುದಾರರು-ಪ್ರಮೋಟರ್‌ಗಳು, ಕ್ರೀಡಾ ಪ್ರಾಧಿಕಾರಗಳು, ಚಿತ್ರನಟರು(ಶಿಲ್ಪಾ ಶೆಟ್ಟಿ, ಮಿಲಿಂದ್‌ ಸೋಮನ್‌ ಇತರೆ..) ಮತ್ತು ಕ್ರೀಡಾಪಟುಗಳನ್ನೊಳಗೊಂಡ 28 ಸದಸ್ಯರು ಇರಲಿದ್ದಾರೆ. ಈ ತಂಡದ ನೇತೃತ್ವವನ್ನು ಕ್ರೀಡಾ ಸಚಿವ ಕಿರಣ್‌ ರಿಜಿಜು ವಹಿಸಿಕೊಂಡಿದ್ದಾರೆ. ಕಿರಣ್‌ ರಿಜಿಜು ತಮ್ಮ ಫಿಟ್ನೆಸ್‌ನಿಂದಾಗಿ ಪ್ರಖ್ಯಾತಿಪಡೆದಿರುವುದು ಇಲ್ಲಿ ಉಲ್ಲೇಖಾರ್ಹ. ಹಿಂದಿನ ಕ್ರೀಡಾ ಸಚಿವ ರಾಜ್ಯವರ್ಧನ್‌ ರಾಥೋಡ್‌ ಕೂಡ ,”ಹಮ್‌ ಫಿಟ್‌ ಹೇ ತೋ ಇಂಡಿಯಾ ಫಿಟ್‌’ ಎಂಬ ಸೋಷಿಯಲ್‌ ಮೀಡಿಯಾ ಆಂದೋಲನ ಆರಂಭಿಸಿ, ಜನರು ತಮ್ಮ ಫಿಟ್ನೆಸ್‌ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಳ್ಳಬೇಕೆಂದು ಕರೆ ನೀಡಿದ್ದರು. ಹಮ್‌ ಫಿಟ್‌ ಹೇ ತೋ ಇಂಡಿಯಾ ಫಿಟ್‌ ತುಂಬಾ ಪ್ರಖ್ಯಾತಿ ಪಡೆದಿತ್ತು.

ಮಾನಸಿಕ ಸದೃಢತೆಯೂ ಮುಖ್ಯ
ದೈಹಿಕ ಆರೋಗ್ಯವಷ್ಟೇ ಅಲ್ಲದೆ, ಉತ್ತಮ ಮಾನಸಿಕ ಆರೋಗ್ಯ, ಆರೋಗ್ಯಕರ ಜೀವನಶೈಲಿಯೂ ಫಿಟ್‌ ಇಂಡಿಯಾ ಉದ್ದೇಶವನ್ನು ಈಡೇರಿಸಬಲ್ಲವು. ಕಳೆದ ಕೆಲವು ವರ್ಷಗಳಿಂದ ಭಾರತದ ಮನೋದೈಹಿಕ ಸ್ವಾಸ್ಥ್ಯದ ಕುರಿತು ನಿರಾಶಾದಾಯಕ ವರದಿಗಳೇ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಆಂದೋಲನದ ಅಗತ್ಯವಿದೆ ಎನ್ನುತ್ತಾರೆ ತಜ್ಞರು. ಕಳೆದ ಒಂದು ದಶಕದಲ್ಲಿ ಭಾರತದ ಜಿಡಿಪಿಯು ಅಜಮಾಸು ದ್ವಿಗುಣಗೊಂಡಿದ್ದರೂ, ಭಾರತೀಯರ ಮನೋಸ್ವಾಸ್ಥ್ಯದಲ್ಲಿ ಮಾತ್ರ ಆಶಾದಾಯಕ ಬದಲಾವಣೆ ಆಗಿಲ್ಲ. ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಬಿಡುಗಡೆ ಯಾದ ವಿಶ್ವ ಸಂತೋಷ ಸೂಚ್ಯಂಕ ವರದಿಯು, “ಭಾರತೀಯರು ಸಂತೋಷವಾಗಿಲ್ಲ’ ಎಂದು ಸಾರಿತ್ತು. 2018ರ‌ “ಸಂತೋಷ ಸೂಚ್ಯಂಕ’ದಲ್ಲಿ 133ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ  140ನೇ ಸ್ಥಾನಕ್ಕೆ ಕುಸಿದಿದೆ. ಇನ್ನೊಂದೆಡೆ ಪಾಕಿಸ್ತಾನ 67ನೇ ಸ್ಥಾನದಲ್ಲಿದ್ದು, ಭಾರತೀಯರಿಗೆ ಹೋಲಿಸಿದರೆ ಪಾಕಿಸ್ತಾನಿಯರು ಸಂತೋಷದಿಂದಿದ್ದಾರೆ! ಈ ವರದಿ ಕೂಡ ಭಾರತದ ಮಾನಸಿಕ ಫಿಟ್ನೆಸ್‌ ಉತ್ತಮಪಡಿಸುವ ಅಗತ್ಯವನ್ನು ಸಾರುತ್ತಿದೆ. ಮಾನಸಿಕ ಆರೋಗ್ಯವಷ್ಟೇ ಅಲ್ಲದೇ ದೈಹಿಕ ಆರೋಗ್ಯದಲ್ಲೂ ಭಾರತ ಅಸಮಾಧಾನಕರ ಸ್ಥಿತಿಯಲ್ಲೇ ಇದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಪರಸ್ಪರ ಬೆಸೆದುಕೊಂಡಿದ್ದು, ವ್ಯಾಯಾಮ ಮಾಡುವುದರಿಂದ ಮಾನಸಿಕ ಆರೋಗ್ಯವೂ ಉತ್ತಮವಾಗುತ್ತದೆ ಎಂದು ವೈದ್ಯಲೋಕ ಮೊದಲಿನಿಂದಲೂ ಹೇಳುತ್ತಲೇ ಬಂದಿದೆಯಾದರೂ, ಭಾರತದಲ್ಲಿ ಈ ವಿಚಾರದಲ್ಲಿ ಪೂರ್ಣ ಜಾಗೃತಿ ಮೂಡಿಲ್ಲ.

ಫಿಟ್ನೆಸ್ಸಾ…ಅದೇನು?
ದೇಶಾದ್ಯಂತ ಜಿಮ್‌ಗಳು, ಫಿಟ್ನೆಸ್‌ ಸೆಂಟರ್‌ಗಳು, ಫಿಟ್ನೆಸ್‌ ಸಂಬಂಧಿ ಆ್ಯಪ್‌ಗ್ಳು ದಂಡಿಯಾಗಿ ಸೃಷ್ಟಿಯಾಗುತ್ತಿದ್ದರೂ, ಯೋಗದಿನಾಚರಣೆಯಂಥ ಜಾಗೃತಿ ಕಾರ್ಯಕ್ರಮಗಳು ಸದ್ದು ಮಾಡುತ್ತಿದ್ದರೂ ದೇಶದ ಶೇ.64 ಭಾರತೀಯರು ವ್ಯಾಯಾಮ ಮಾಡುವುದೇ ಇಲ್ಲ ಎಂದು ಒಂದು ವರದಿ ಹೇಳುತ್ತದೆ. ಅದರಲ್ಲೂ ಜಿಮ್‌, ಫಿಟ್ನೆಸ್‌ ಸೆಂಟರ್‌ಗಳು, ವಾಕಥಾನ್‌, ಮ್ಯಾರಥಾನ್‌ ಜನಪ್ರಿಯತೆ ನಗರಪ್ರದೇಶಗಳಲ್ಲಿ ಅಧಿಕವಿದ್ದರೂ, ದೈಹಿಕವಾಗಿ ಹೆಚ್ಚು ಅನ್‌ಫಿಟ್‌ ಜನರು ಇರುವುದು ಇವೇ ಪ್ರದೇಶಗಳಲ್ಲಿ ಎನ್ನುತ್ತವೆ ಹಲವು ವರದಿಗಳು. ಜಿಮ್‌ಪಿಕ್‌ ಎನ್ನುವ ಸಂಸ್ಥೆ ಇತ್ತೀಚೆಗೆ ದೆಹಲಿ, ಬೆಂಗಳೂರು, ಮುಂಬೈ ಮತ್ತು ಹೈದ್ರಾಬಾದ್‌ನಲ್ಲಿ ಫಿಟ್ನೆನೆಸ್‌ ಜಾಗೃತಿಯ ಕುರಿತು ಬಿಡುಗಡೆ ಮಾಡಿರುವ ವರದಿಯಲ್ಲಿ ಗಮನಾರ್ಹ ಅಂಶಗಳಿವೆ. 53 ಪ್ರತಿಶತ ನಗರವಾಸಿಗಳು ತಮಗೆ ವ್ಯಾಯಾಮ ಮಾಡಲು ಮನಸ್ಸಿದೆಯಾದರೂ, ಅದಕ್ಕೆ ಅಗತ್ಯವಿರುವ ಶಿಸ್ತು-ಸಮಯ ಇಲ್ಲ ಎಂದಿದ್ದಾರೆ. ಆದರೂ ಸಮಾಧಾನಕರ ಸಂಗತಿಯೆಂದರೆ, ಫಿಟ್ನೆಸ್‌ ವಿಷಯದಲ್ಲಿ ಈ ನಗರಗಳನ್ನು ಹಿಂದಿಕ್ಕಿ ಬೆಂಗಳೂರು ಮೊದಲ ಸ್ಥಾನದಲ್ಲಿ ಇದೆ ಎನ್ನುವುದು. ಬೆಂಗಳೂರಿನ ಪ್ರತಿ ಬಡಾವಣೆಗಳಲ್ಲೂ ಇರುವ ಪಾರ್ಕುಗಳು, ಸೈಕ್ಲಿಂಗ್‌ ಏರಿಯಾಗಳು ಇದಕ್ಕೆ ಕಾರಣ ಎನ್ನಲಾಗುತ್ತದೆ.

Advertisement

ತರಕಾರಿ ತಿನ್ನುತ್ತಿಲ್ಲ ಹೆಣ್ಮಕ್ಕಳು
ದೈಹಿಕ ಆರೋಗ್ಯಕ್ಕೆ ಸಮತೋಲಿತ ಪೌಷ್ಟಿಕ ಆಹಾರ ಸೇವನೆ ಮುಖ್ಯವಾದದ್ದು. ಸಮತೋಲಿತ ಆಹಾರವು ಸಾಕಷ್ಟು ಪ್ರೋಟೀನ್‌, ಕೊಬ್ಬು, ಕಾಬೋಹೈಡ್ರೇಟ್‌ಗಳು, ವಿಟಮಿನ್‌ಗಳು ಮತ್ತು ಮಿನರಲ್‌ಗಳನ್ನು ಒಳಗೊಂಡಿರಬೇಕು. ಆದರೆ ಭಾರತದಲ್ಲಿ ಅರ್ಧದಷ್ಟು ಜನ ಸಂಖ್ಯೆ, ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳು ಆರೋಗ್ಯಕರ ಜೀವನಕ್ಕೆ ಕಾರಣವಾಗುವ ಸಮತೋಲಿತ ಆಹಾರವನ್ನು ಸೇವಿಸುತ್ತಿಲ್ಲ(ಹಣ್ಣು, ತರಕಾರಿ, ಬೇಳೆಕಾಳು, ಮಾಂಸ, ಹಾಲು)ಎನ್ನುತ್ತದೆ ಎನ್‌ಎಫ್ಎಚ್‌ಎಸ್‌ ವರದಿ. 47 ಪ್ರತಿಶತಕ್ಕಿಂತ ಕಡಿಮೆ ಮಹಿಳೆಯರಷ್ಟೇ ನಿತ್ಯ ಹಸಿರು ತರಕಾರಿ ಸೇವಿಸಿದರೆ, 38 ಪ್ರತಿ ಶತ ಮಹಿಳೆಯರು ವಾರಕ್ಕೊಮ್ಮೆ ಹಸಿರು ತರಕಾರಿ ಸೇವಿಸುತ್ತಾರಂತೆ. ಗ್ರಾಮೀಣರಲ್ಲಿ ಅಸಮತೋಲಿತ ಆಹಾರ ಸೇವೆನೆಗೆ ಬಡ ತನವೇ ಕಾರಣ ಎನ್ನುತ್ತಾರೆ ಸೆಂಟರ್‌ ಫಾರ್‌ ಸೋಷಿಯಲ್‌ರಿಸರ್ಚ್‌ನ ರಂಜನಾ ಕುಮಾರಿ. “ಅಲ್ಲದೇ, ನಗರಗಳಲ್ಲಿ ಆಹಾರ ಸೇವನೆ ಪದ್ಧತಿಯು ಬದಲಾಗುತ್ತಿದ್ದು, ಮಾರುಕಟ್ಟೆಯು ಜಂಕ್‌ ಫ‌ುಡ್‌ ಸೇವನೆಗೆ ಒತ್ತು ನೀಡುತ್ತಿದೆ. ನಗರ ಪ್ರದೇಶಗಳ ಮಹಿಳೆಯರು, ಅದರಲ್ಲೂ ಯುವತಿಯರು ಅನಾರೋಗ್ಯಕರ ಆಹಾರ ಸೇವಿಸುತ್ತಿದ್ದಾರೆ’ ಎನ್ನುತ್ತಾರವರು.

ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ
ಪ್ರತಿ ವಯೋಮಾನದವರೂ ಆರೋಗ್ಯಯುತವಾಗಿ ಇರಲು ಇಂತಿಷ್ಟು ಸಮಯ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡುತ್ತದೆ

5-17 ವರ್ಷ
ಈ ವಯೋಮಾನದ ಮಕ್ಕಳು ಪ್ರತಿ ನಿತ್ಯ ಕನಿಷ್ಠ 1 ಗಂಟೆ ಯಾದರೂ ಮಧ್ಯಮ ಮತ್ತು ಹುರುಪಿನಿಂದ ದೂಡಿ  ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಆಟವಾಡುವುದು, ವಾಕಿಂಗ್‌, ಜಾಗಿಂಗ್‌, ಸ್ವಿಮ್ಮಿಂಗ್‌, ಸೈಕ್ಲಿಂಗ್‌ ಮಾಡಬಹುದು.

18-64 ವರ್ಷ
ಮಕ್ಕಳಿಗೆ ಹೋಲಿಸಿದರೆ ಈ ವಯೋಮಾನದವರಲ್ಲಿ ಅನೇಕ ಕಾರಣಗಳಿಂದಾಗಿ ದೈಹಿಕ ಚಟುವಟಿಕೆ ತಗ್ಗುವ ಸಾಧ್ಯತೆ ಹೆಚ್ಚು. ಆದರೂ ಈ ವಯೋಮಾನದವರು ವಾರಕ್ಕೆ ಕನಿಷ್ಠ 150 ನಿಮಿಷಗಳಷ್ಟಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗಲೇಬೇಕು. (ವಾಕಿಂಗ್‌, ಸೈಕ್ಲಿಂಗ್‌, ಯೋಗ, ಸ್ವಿಮಿಂಗ್‌ ಇತ್ಯಾದಿ). ಸಮಯ ಕಳೆದಂತೆ, ದೈಹಿಕ ಚಟುವಟಿಕೆಯನ್ನು 300 ನಿಮಿಷದವರೆಗೂ ಏರಿಸುವುದು ಉತ್ತ ಮ ಎಂದು ಸಲಹೆ ನೀಡುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

ನಗರ ವಾಸಿಗಳಿಗೇ ಹೆಚ್ಚು ಬೊಜ್ಜು
ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಸ್ಥೂಲ ಕಾಯ ಪುರುಷರು ಮತ್ತು ಮಹಿಳೆಯರ ಸಂಖ್ಯೆ ಮಹಾನಗರಗಳಲ್ಲೇ ಅಧಿಕವಿದೆ. ಮುಂಬೈನಲ್ಲಿ ಅತಿ ಹೆಚ್ಚು ಸ್ಥೂಲ ಕಾಯ ಮಹಿಳೆಯರಿದ್ದರೆ, ನಂತರದ ಸ್ಥಾನದಲ್ಲಿ ಚೆನ್ನೈ, ದೆಹಲಿ ಮತ್ತು ಬೆಂಗಳೂರಿನ ಮಹಿಳೆಯರಿದ್ದಾರೆ. ಇನ್ನು ಪುರುಷರಲ್ಲೂ ಮುಂಬೈ ವಾಸಿಗಳೇ ಹೆಚ್ಚು ಸ್ಥೂಲ ಕಾಯರಿದ್ದು, ನಂತರದ ಸ್ಥಾನದಲ್ಲಿ ಚೆನ್ನೈ, ಬೆಂಗಳೂರು ಮತ್ತು ದೆಹಲಿ ವಾಸಿಗಳಿದ್ದಾರೆ. ಸಿರಿವಂತ, ಮಧ್ಯಮ ವರ್ಗದ ಮಹಿಳೆಯರಲ್ಲೇ ಹೆಚ್ಚು ಸ್ಥೂಲ ಕಾಯರು ಇದ್ದಾರೆ ಎನ್ನುವುದು ಗಮನಾರ್ಹ. 30 ವಯೋಮಾನ ದಾಟಿದ ಮಹಿಳೆಯರ ತೂಕ ಅದೇ ವಯೋಮಾನದ ಗಂಡಸರಿಗಿಂತ ಬಹಳ ವೇಗವಾಗಿ ಹೆಚ್ಚಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next