ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ರುವ ಗೌರಿಬಿದನೂರಿನ ಎಚ್.ವಿ.ಮಂಜುನಾಥರವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಬೆಂಬಲಿತ ಜಿಪಂ ಸದಸ್ಯರ ತಂಡಕ್ಕೆ ಸದ್ಯ ಹಿನ್ನಡೆಯಾಗಿದ್ದು, ಲೋಕಸಬಾ ಚುನಾವಣೆ ಬಳಿಕ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸುವ ಬಗ್ಗೆ ಶನಿವಾರ ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಜಿಪಂ ಅಧ್ಯಕ್ಷ ಮಂಜುನಾಥ ತಮ್ಮ ಅಧ್ಯಕ್ಷತೆಯಲ್ಲಿ ಕರೆದಿದ್ದ ಜಿಪಂ ಸಾಮಾನ್ಯ ಸಭೆಗೆ ಶಾಸಕ ಡಾ.ಕೆ.ಸುಧಾಕರ್ ಬೆಂಬಲಿತ ಜಿಪಂ ಸದಸ್ಯರು ಬಿಜೆಪಿ, ಜೆಡಿಎಸ್ ಹಾಗೂ ಸಿಪಿಎಂ ಸದಸ್ಯರು ಗೈರು ಹಾಜರಿಯಾಗಿದ್ದರು. ಇದರಿಂದ ಬಹುಮತದ ಕೊರತೆಯಿಂದ ಅಧ್ಯಕ್ಷರು ದಿಢೀರನೆ ಸಾಮಾನ್ಯ ಸಭೆಯನ್ನು ರದ್ದುಪಡಿಸಿ ಮುಂದೂಡಿದ್ದರು.
ಈ ಸಂಬಂಧ ಶನಿವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವ ಬಗ್ಗೆ ನಿರ್ಧರಿಸಿದೆ.
ಸಭೆಯಲ್ಲಿ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ, ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ, ಶಾಸಕರಾದ ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್, ಬಾಗೇ ಪಲ್ಲಿಯ ಎಸ್.ಎನ್.ಸುಬ್ಟಾರೆಡ್ಡಿ ಸೇರಿದಂತೆ ಜಿಲ್ಲಾ ಉಸ್ತುವಾರಿಗಳು ಪಾಲ್ಗೊಂಡಿದ್ದರು.
ಈ ವೇಳೆ ಲೋಕಸಭಾ ಚುನಾವಣೆ ಇರುವುದರಿಂದ ಸದ್ಯಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಬದಲಾವಣೆ ಬೇಡ ಎಂದು ಉಸ್ತುವಾರಿ ಸಚಿವರು ಪಕ್ಷದ ಅಧ್ಯಕ್ಷರ ಮುಂದೆ ಪ್ರಸ್ತಾಪಿಸಿದ್ದು, ಇದಕ್ಕೆ ಸಂಸದಎಂ. ವೀರಪ್ಪ ಮೊಯ್ಲಿ ಕೂಡಬೆಂಬಲ ವ್ಯಕ್ತಪಡಿಸಿದ್ದರಿಂದ ಸಹಮತ ವ್ಯಕ್ತವಾಗಿದೆ.