ರಾಜ್ಯಪಾಲರುಗಳು ಕರಡು ಸಮಿತಿಯ ಕುರುಡು ಕೂಸೇ? ಇದೊಂದು ವಿಷಯ ಸಂವಿಧಾನ ಅಳವಡಿಸಿಕೊಂಡು ಬಂದ ಸಮಯದಿಂದ ನಡೆದುಕೊಂಡು ಬರುತ್ತಿದ್ದ ಬಹು ಚರ್ಚಿತ ವಿಷಯ. ಸಂವಿಧಾನ ರಚನಾ ಸಮಿತಿಯಲ್ಲೂ ಕೂಡಾ ಬಹು ಚರ್ಚೆಗೊಳಗಾದ ಹುದ್ದೆಯೂ ಇದೆ ಆಗಿತ್ತು. ರಾಜ್ಯಪಾಲರ ಹುದ್ದೆ ಬೇಕೇ? ಬೇಡವೇ? ಬೇಕಾದರೆ ಹೇಗೆ ನೇಮಿಸ ಬೇಕು ಯಾರು ನೇಮಿಸ ಬೇಕು.ಅಂತೂ ನಮ್ಮ ಒಕ್ಕೂಟ ವ್ಯವಸ್ಥೆ ಗಟ್ಟಿಯಾಗಿ ನಿಲ್ಲಬೇಕಾದರೆ ಒಬ್ಬ ರಾಜ್ಯಪಾಲ ರಾಜ್ಯಕ್ಕೆ ಬೇಕಾಗುತ್ತದೆ. ಆದರೆ ಇವರನ್ನು ಯಾರು ನೇಮಿಸಬೇಕು ಅನ್ನುವ ಪ್ರಶ್ನೆ ಬಂದಾಗ ಕೇಂದ್ರ ಸರ್ಕಾರವೇ ನೇಮಿಸಿ ರಾಜ್ಯಗಳಿಗೆ ಕಳುಹಿಸಿಕೊಡುವುದು ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಅನಿವಾರ್ಯ ಅನ್ನುವ ತೀರ್ಮಾನಕ್ಕೆ ಸಂವಿಧಾನ ಸಮಿತಿ ಒಪ್ಪಿಗೆ ನೀಡಿತ್ತು.
ಅಂದು ಈ ಎಲ್ಲಾ ರಾಜ್ಯಗಳನ್ನು ಒಗ್ಗೂಡಿಸುವುದೇ ದೊಡ್ಡ ಸವಾಲಾಗಿ ಬಂದ ಕಾರಣ..ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರವೇ ಬಲಿಷ್ಠವಾಗಿರಬೇಕು..ಹಾಗಾಗಿ ಈ ಎಲ್ಲಾ ರಾಜ್ಯಗಳನ್ನು ಒಗ್ಗೂಡಿಸಿ ನಡೆಸಿಕೊಂಡು ಹೇೂಗ ಬೇಕಾದರೆ ಕೇಂದ್ರದಿಂದ ನೇಮಕಗೊಳ್ಳುವ ರಾಜ್ಯಪಾಲ ಆಡಳಿತಾತ್ಮಕ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಡೆಸ ಬೇಕು.. ಅನ್ನುವ ರೀತಿಯಲ್ಲಿ ಈ ರಾಜ್ಯಪಾಲರುಗಳ ಹುದ್ದೆ ಸೃಷ್ಟಿಯಾಯಿತು.
ಪ್ರಾರಂಭಿಕ ಅವಧಿಯಲ್ಲಿ ಈ ರಾಜ್ಯಪಾಲರುಗಳ ಹುದ್ದೆ ಹೆಚ್ಚೇನೂ ಚರ್ಚೆ ತರ್ಕಕ್ಕೂ ಎಡೆ ಮಾಡಿಕೊಡಲಿಲ್ಲ.ಅದಕ್ಕೆ ಮುಖ್ಯ ಕಾರಣ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಅಧಿಕಾರವಿದ್ದಾಗ ಯಾವುದೇ ಆಡಳಿತಾತ್ಮಕ ರಾಜಕೀಯ ವಿಚಾರಗಳು ಸಂಘಷ೯ಕ್ಕೆ ಎಡೆ ಮಾಡಿಕೊಡಲೇ ಇಲ್ಲ.ರಾಜ್ಯಪಾಲರುಗಳು ಆಯಾಯ ರಾಜ್ಯಗಳಲ್ಲಿ ಸುಖವಾಗಿ ನಿದ್ರೆ ಮಾಡ ಬಹುದಾದ ಕಾಲ ಅದಾಗಿತ್ತು..ಆದರೆ 70ರ ದಶಕದ ಅನಂತರದಲ್ಲಿ ರಾಷ್ಟ್ರದ ರಾಜಕೀಯ ಪರಿಸ್ಥಿತಿ ಬದಲಾಗುತ್ತಾ ಬಂದಾಗ ಕೇಂದ್ರದಲ್ಲಿ ಒಂದು ಪಕ್ಷದ ಸರ್ಕಾರ ರಾಜ್ಯಗಳಲ್ಲಿ ಇನ್ನೊಂದು ಪಕ್ಷದ ಸರ್ಕಾರ ..ಇಲ್ಲಿಂದಲೇ ಶುರುವಾಯಿತು ರಾಜ್ಯಪಾಲರುಗಳಿಗೆ ಸುಖ ನಿದ್ರೆ ಬಾರದ ಕಾಲ. ಕೇಂದ್ರ ರಾಜ್ಯಗಳ ನಡುವೆ ಸಂಘರ್ಷ ಬಂದಾಗಲೆಲ್ಲಾ ಮೊದಲು ಟಾರ್ಗೆಟ್ ಆಗುವುದು ರಾಜ್ಯ ಪಾಲರು. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ತರದಲ್ಲಿ ರಾಜ್ಯಪಾಲರುಗಳು ಬಡವಾಗ ಬೇಕಾದ ಪರಿಸ್ಥಿತಿ.
ಆ ಕಡೆಯಿಂದ ತಮ್ಮನ್ನು ನೇಮಿಸಿ ಕಳುಹಿಸಿದ ಕೇಂದ್ರ ಸರ್ಕಾರದ ಮಾತು ಕೇಳಬೇಕು..ಈ ಕಡೆಯಿಂದ ತಾನು ಬಂದು ಕೂತ ರಾಜ್ಯ ಸರ್ಕಾರದ ಮಾತನ್ನು ಕೇಳಬೇಕು.ಇಲ್ಲಿ ತನ್ನ ಪೂರ್ತಿ ವಿವೇಚನೆ ಬಳಸಿ ನಿಷ್ಪಕ್ಷಪಾತವಾಗಿ ಅಧಿಕಾರ ಚಲಾಯಿಸುವ ಹಾಗೆಯೂ ಇಲ್ಲ..ಒಟ್ಟಿನಲ್ಲಿ ಅಡ ಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿ ರಾಜ್ಯ ಪಾಲರುಗಳದ್ದು.ಅದಕ್ಕಾಗಿಯೇ ವಿಜಯಲಕ್ಷ್ಮೀ ಪಂಡಿತ್ ಒಂದುಕಡೆ ಹೇಳಿದ ಮಾತು ನೆನಪಾಗುತ್ತದೆ.”ರಾಜ್ಯಪಾಲರುಗಳಿಗಿಂತ ರಾಜ್ಯ ಪಾಲರುಗಳ ಹೆಂಡತಿಯೇ ಫವರ್ ಪೂಲ್ ..ಆದರೆ ನಾನು. ಹೆಂಗಸಿನ ಸ್ಥಾನದಲ್ಲಿ ಕೂತಿದ್ದೇನೆ.”..ಅನ್ನುವ ಅವರ ತಮಾಷೆಯ ಹೇಳಿಕೆ ವಾಸ್ತವಿಕವಾಗಿ ಸತ್ಯ.
ಒಂದು ರಾಜ್ಯದ ಮೇಲೆ ರಾಷ್ಟ್ರಪತಿ ಅಧಿಕಾರ ಹೇರುವ ಸಂದರ್ಭದಲ್ಲಿ ಕೂಡ ರಾಜ್ಯ ಪಾಲರುಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗುವುದು. ಆಡಳಿತ ರೂಢ ಪಕ್ಷವನ್ನು ಬರ್ಕಾಸ್ತುಗೊಳಿಸುವ ಸಂದರ್ಭದಲ್ಲಿ ರಾಜ್ಯ ಪಾಲರುಗಳು ಯಾವ ರೀತಿಯಲ್ಲಿ ನಿಧಾ೯ರ ತೆಗೆದುಕೊಳ್ಳ ಬೇಕು ಅನ್ನುವ ವಿಚಾರದಲ್ಲಿ ಸುಪ್ರೀಂ ಕೇೂರ್ಟ್ ಕೊಟ್ಟ ಬೊಮ್ಮಾಯಿ ಕೇಸ್ ತೀಪು೯ ಇಂದಿಗೂ ಎಲ್ಲಾ ರಾಜ್ಯಪಾಲರುಗಳ ವಿವೇಚನಾಧಿಕಾರಕ್ಕೆ ಕಡಿವಾಣ ಹಾಕಿದೆ.
ಈ ಹಿಂದೆ ಕರ್ನಾಟಕದಲ್ಲಿ ನಡೆದ ರಾಜಕೀಯ ಅಧಿಕಾರದ ಮೇಲಾಟದ ಸಂದರ್ಭದಲ್ಲೂ ನ್ಯಾಯಾಂಗದ ಕಡೆ ಮುಖ ಮಾಡಿದ ಸಂದರ್ಭ ಖಂಡಿತವಾಗಿಯೂ ಮರೆಯಲು ಸಾಧ್ಯವಿಲ್ಲ. ಈಗ ಮತ್ತೆ ರಾಜ್ಯದಲ್ಲಿ ರಾಜ್ಯ ಪಾಲರುಗಳ ತೀಮಾ೯ನದ ಬಗ್ಗೆ ಕೋರ್ಟ್ ನ ಕಡೆ ಮುಖಮಾಡುವ ಪರಿಸ್ಥಿತಿ ನಿಮಾ೯ಣ ಮಾಡಿದೆ.
ಕೇಂದ್ರ ರಾಜ್ಯಗಳ ನಡುವಿನ ಆಡಳಿತಾತ್ಮಕ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಸಕಾ೯ರಿಯಾ ಸಮಿತಿಯ ವರದಿಯನ್ನು 80ರ ದಶಕದ ಕಾಲದಲ್ಲಿಯೇ ನೀಡಿತು.ಆದರೆ ಮುಂದೆ ಯಾವ ಸರ್ಕಾರ ಕೂಡಾ ಇದನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಇಚ್ಛಾ ಶಕ್ತಿ ತೇೂರಲೇ ಇಲ್ಲ. ಪ್ರಮುಖವಾಗಿ ಕೊಟ್ಟ ಸಲಹೆ ಅಂದರೆ ರಾಜ್ಯಪಾಲರುಗಳನ್ನು ನೇಮಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆಯಾಯ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಬೇಕು.
ರಾಜಕೀಯವಾಗಿ ಹೆಚ್ಚು ಸಕ್ರಿಯವಾಗಿರುವವರನ್ನು ರಾಜ್ಯ ಪಾಲರಾಗಿ ನೇಮಿಸ ಬಾರದು; ರಾಜ್ಯ ಪಾಲರುಗಳಿಗೆ ಆಯಾಯ ರಾಜ್ಯದ ಪರಿಸ್ಥಿತಿಯನ್ನು ನೋಡಿ ನಿಣ೯ಯ ತೆಗೆದುಕೊಳ್ಳುವ ವಿವೇಚನಾಧಿಕಾರ ನೀಡ ಬೇಕು…ಆದರೆ ಇದ್ಯಾವುದನ್ನು ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಗಂಭೀರವಾಗಿ ಪರಿಗಣಿಸಲೇ ಇಲ್ಲ..ಆದಷ್ಟು ಮಟ್ಟದಲ್ಲಿ ರಾಜ್ಯಗಳನ್ನು ತಮ್ಮ ಅಧಿಕಾರದ ಕಪಿಮುಷ್ಟಿಗೆ ತರುವ ಪ್ರಯತ್ನ ಮಾಡಿದ್ದಾವೆ ಬಿಟ್ಟರೆ ಒಕ್ಕೂಟ ವ್ಯವಸ್ಥೆ ಗಟ್ಟಿಗೊಳಿಸುವ ಕಾರ್ಯ ಮಾಡಲೇ ಇಲ್ಲ..ಈ ಎಲ್ಲಾ ಪರಿಸ್ಥಿತಿ ಸಂದರ್ಭಗಳು ಘನವೆತ್ತ ರಾಜ್ಯಪಾಲರುಗಳನ್ನು ಕರಡು ಸಮಿತಿಯ ಕುರುಡುಕೂಸು ಅನ್ನುವ ತರದಲ್ಲಿ ಕೈಗೊಂಬೆಯಾಗಿ ನಡೆಸಿಕೊಂಡು ಬಂದಿರುವುದೇ ಜಾಸ್ತಿ..ಈ ನಿಟ್ಟಿನಲ್ಲಿ ರಾಷ್ಟ್ರ ರಾಜಕಾರಣದಲ್ಲಿ ರಾಷ್ಟ್ರಪತಿಗಳಾಗಲಿ ರಾಜ್ಯದಲ್ಲಿ ರಾಜ್ಯ ಪಾಲರುಗಳಾಗಲಿ ರಾಜಕೀಯೇತರವಾಗಿ, ಸ್ವತಂತ್ರವಾಗಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸಲು ಸಾಧ್ಯ ಎಂಬುದೇ ಪ್ರಶ್ನೆಯಾಗಿದೆ!
*ವಿಶ್ಲೇಷಣೆ:ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ