Advertisement

ಇಂದ್ರಾಣಿ ಹೂಳೆತ್ತುವ ಕಾಮಗಾರಿ ಕಾಟಾಚಾರಕ್ಕೆ ಸೀಮಿತವೇ?

10:20 PM May 31, 2020 | Sriram |

ಉಡುಪಿ: ನಗರಸಭೆ ವ್ಯಾಪ್ತಿಯ ಕಲ್ಸಂಕದ ಮಾರ್ಗದಲ್ಲಿ ಹಾದು ಹೋಗುವ ಇಂದ್ರಾಣಿ ನದಿಯ ಹೂಳೆತ್ತುವ ಕಾಮಗಾರಿಯನ್ನು ಗುತ್ತಿಗೆದಾರರು ಕೇವಲ ಕಾಟಾಚಾರಕ್ಕೆ ಮಾಡಿ ಮುಗಿಸಿದ್ದಾರೆ ಎನ್ನುವ ಆರೋಪಗಳು ಸ್ಥಳೀಯವಾಗಿ ಕೇಳಿ ಬರುತ್ತಿವೆ.

Advertisement

36 ಲ.ರೂ. ವೆಚ್ಚದ ಕಾಮಗಾರಿ
ನಗರಸಭೆ ಸುಮಾರು 36 ಲ.ರೂ. ವೆಚ್ಚದಲ್ಲಿ ಕಲ್ಸಂಕ, ಮಠದ ಬೆಟ್ಟು, ನಿಟ್ಟೂರು ಶಾರದ ಇಂಟರ್‌ ನ್ಯಾಶನಲ್‌ ಹೊಟೇಲ್‌, ಮೂಡುಬೆಟ್ಟು, ಕೊಡವೂರು, ಕೊಡಂಕೂರು, ಪುತ್ತೂರು, ಸಾಯಿಬಾಬಾ ಮಂದಿರ ಪ್ರದೇಶದಲ್ಲಿ ಹರಿಯುವ ಇಂದ್ರಾಣಿಯ ಹೂಳೆತ್ತುವ ಕಾಮಗಾರಿಗೆ ಟೆಂಡರ್‌ ಮಂಜೂರಾಗಿದೆ. ಕಾಮಗಾರಿ 2020 ಜನವರಿಯ‌ಲ್ಲಿ ಪ್ರಾರಂಭಗೊಂಡಿತ್ತು. ಮೂರು ತಿಂಗಳ ಅವಧಿ ನೀಡಲಾಗಿತ್ತು.

ಹೂಳು ದಂಡೆ ಮೇಲಿದೆ!
ಕಲ್ಸಂಕದಿಂದ ಸಾಯಿಬಾಬಾ ಮಂದಿರದ ವರೆಗಿನ 8 ಕಿ.ಮೀ. ವ್ಯಾಪ್ತಿಯಲ್ಲಿ ಇಂದ್ರಾಣಿ ನದಿಯ ಹೂಳು ಎತ್ತಲಾಗಿದೆ. ಜನರು ಓಡಾಟ ಮಾಡುವ ಮುಖ್ಯ ಪ್ರದೇಶವಾದ ಸಾಯಿಬಾಬಾ ಮಂದಿರ, ಮಠದಬೆಟ್ಟು ಸೇರಿದಂತೆ ಪ್ರಮುಖ ಕೇಂದ್ರದಲ್ಲಿ ಮಾತ್ರ ಉತ್ತಮ ರೀತಿಯಲ್ಲಿ ಹೂಳು ತೆಗೆದು ಬೇರೆ ಕಡೆಗೆ ವಿಲೇವಾರಿ ಮಾಡಿದ್ದಾರೆ. ಉಳಿದ ಕಡೆಯಲ್ಲಿ ತೆಗೆಯಲಾದ ಹೂಳನ್ನು ದಂಡೆಗೆ ಹಾಕಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ತೆಗೆಯಲಾದ ಹೂಳು ಮತ್ತೆ ಇಂದ್ರಾಣಿಯನ್ನು ಸೇರಲಿದೆ.

ಹೂಳು ತುಂಬಿ ನೆರೆ
ಕಿನ್ನಿಮೂಲ್ಕಿ, ಕಲ್ಸಂಕ, ಮೂಡುಬೆಟ್ಟು, ಮಠದಬೆಟ್ಟು, ಕೊಡವೂರು, ಬೈಲಕೆರೆ, ಗುಂಡಿಬೈಲು, ಕಂಬಳಕಟ್ಟು ಸಹಿತ ಹಲವೆಡೆ ಮಳೆಗಾಲದಲ್ಲಿ ತೋಡು ಉಕ್ಕಿ ಹರಿಯುತ್ತದೆ.ಎಲ್ಲೆಡೆ ಹೂಳು ತುಂಬಿಯೂ ಸಮಸ್ಯೆ ಹೆಚ್ಚಿದೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿ ಕಟ್ಟಿದ ಮನೆಗಳಿಗೆ ನೀರು ನುಗ್ಗುತ್ತಿದೆ.

ಎಲ್ಲೆಲ್ಲಿ ಪೂರ್ಣ? ಅಪೂರ್ಣ?
ಕಲ್ಸಂಕ, ಮಠದಬೆಟ್ಟು, ನಿಟೂರು ಶಾರದಾ ಇಂಟರ್‌ ನ್ಯಾಶನಲ್‌ ಹೊಟೇಲ್‌, ಮೂಡುಬೆಟ್ಟು, ಕೊಡವೂರು ಕೊಡಂಕೂರು, ಪುತ್ತೂರು, ಸಾಯಿಬಾಬಾ ಮಂದಿರ ಪ್ರದೇಶದ ಹೂಳು ತೆಗೆಯಲಾಗಿದೆ ಎಂದು ಗುತ್ತಿಗೆದಾರರು ನಗರಸಭೆಗೆ ವರದಿ ನೀಡಿದ್ದಾರೆ. ಆದರೆ ಈ ಮಾರ್ಗದ ಕೆಲವೆಡೆಯಲ್ಲಿ ಗಿಡಗಳ ಕ್ರಾಸ್‌ ಕಟ್ಟಿಂಗ್‌ ಬಿಟ್ಟರೆ ಅಲ್ಪ ಪ್ರಮಾಣದ ಹೂಳು ತೆಗೆಯಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಲಿವೆೆ ಎನ್ನುವ ಆತಂಕದಲ್ಲಿ ಸ್ಥಳೀಯರು ಇದ್ದಾರೆ.

Advertisement

ಬೇಸಾಯ ಹಾಳು
ಸಾಯಿಬಾಬಾ ಮಂದಿರದಿಂದ ಕಂಬಳಕಟ್ಟದ ವರೆಗೆ ತೆಗೆಯಲಾದ ಹೂಳನ್ನು ದಂಡೆ ಬದಿ ಹಾಕಲಾಗಿದೆ. ಒಂದು ಮಳೆ ಬಂದರೆ ಸಾಕು ಮತ್ತೆ ಇಂದ್ರಾಣಿ ನದಿ ಸೇರುತ್ತದೆ. ಕಾಮಗಾರಿ ಸಂದರ್ಭದಲ್ಲಿ ಸಂಪೂರ್ಣವಾಗಿ ಎರಡು ಕಡೆಗಳ ಹೂಳು ತೆಗೆದಿಲ್ಲ. ಇದರಿಂದ ಮಳೆಗಾಲದಲ್ಲಿ ನೆರೆಯ ನೀರು ಗದ್ದೆಗಳಿಗೆ ನುಗ್ಗಿ ವ್ಯವಸಾಯ ಹಾಳು ಮಾಡುತ್ತದೆ.
– ದಿನೇಶ್‌
ಕಂಬಳಕಟ್ಟು ನಿವಾಸಿ

ಸೂಚನೆ ನೀಡಲಾಗಿದೆ
ಗುತ್ತಿಗೆದಾರರಿಗೆ ಮೊದಲ ಹಂತದ ಹಣ ಮಾತ್ರ ಬಿಡುಗಡೆಯಾಗಿದೆ. ಕೆಲಸದಲ್ಲಿ ಲೋಪ ಕಂಡುಬಂದರೆ ಬಿಲ್‌ ಪಾಸ್‌ ಮಾಡುವುದಿಲ್ಲ. ಹೂಳು ತೆರವಿಗೆ ಸ‌ೂಚನೆ ನೀಡಲಾಗಿದೆ. ಗುತ್ತಿಗೆದಾರರು ಲೋಪವೆಸಗಿದರೆ ಸಾರ್ವಜನಿಕರು ನೇರವಾಗಿ ದೂರವಾಣಿ ಮೂಲಕ ದೂರು ನೀಡಬಹುದು. ಸ್ಥಳಕ್ಕೆ ಖಂಡಿತವಾಗಿ ಭೇಟಿ ನೀಡಿ ಕ್ರಮ ತೆಗೆದುಕೊಳ್ಳುತ್ತೇವೆ.
– ಮೋಹನ್‌ ರಾಜ್‌
ಎಇಇ, ನಗರಸಭೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next