ನವದೆಹಲಿ: ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಮತ್ತು ಸೋಂಕಿನಿಂದ ಮೃತಪಡುತ್ತಿರುವವ ಸಂಖ್ಯೆ ಗಣನೀಯವಾಗಿ ಅತ್ಯಂತ ಕಡಿಮೆಯಾಗಿದೆ.
ಹೀಗಾಗಿ ಕೊರೊನಾ ವೈರಸ್ ತನ್ನ ಅಂತಿಮ ಹಂತಕ್ಕೆ ತಲುಪಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
“ಸಾಮಾನ್ಯ ಜ್ವರ ಪ್ರಕರಣಗಳ ಸಂಖ್ಯೆಗೂ ಹಾಗೂ ಕೊರೊನಾ ಪ್ರಕರಣಗಳ ಸಂಖ್ಯೆಗೂ ಅಂತಹ ವ್ಯತ್ಯಾಸವೇನಿಲ್ಲ. ಆದಾಗ್ಯೂ, ಕೊರೊನಾ ನೂತನ ರೂಪಾಂತರಿ ವೈರಸ್‌ಗಳ ಬಗ್ಗೆ ಸದಾ ಗಮನ ನೀಡಬೇಕಾಗುತ್ತದೆ,’ ಎಂದು ತಜ್ಞರು ಹೇಳಿದ್ದಾರೆ.
“ಪ್ರಸ್ತುತ ಕೊರೊನಾ ಮತ್ತು ಶೀತ ಜ್ವರ ಲಕ್ಷಣಗಳ ನಡುವಿನ ವ್ಯತ್ಯಾಸ ತೀರ ಕಡಿಮೆ. ಕೊರೊನಾ ಅನ್ನು ಜ್ವರ ರೀತಿಯ ಕಾಯಿಲೆ ಎನ್ನಬಹುದಾಗಿದೆ. ಇದಕ್ಕೆ ಚಿಕಿತ್ಸೆ ಹೆಚ್ಚು-ಕಡಿಮೆ ಒಂದೇ ತರಹದ್ದಾಗಿದೆ. ಆದಾಗ್ಯೂ, ಹಲವು ಪ್ರಕರಣಗಳಲ್ಲಿ ರೋಗಿಯ ಆರೋಗ್ಯ ಸ್ಥಿತಿಯು ತೀವ್ರವಾಗಿತ್ತು. ಪ್ರಸ್ತುತ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಅತ್ಯಲ್ಪವಾಗಿದೆ. ಕೊರೊನಾ ಮುಂಚಿನ ಸ್ಥಿತಿಗೆ ಈಗ ನಾವು ಮರುಳುತ್ತಿದ್ದೇವೆ,’ ಎಂದು ಏಮ್ಸ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ತಜ್ಞ ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ.
“ಸದ್ಯ ಕೊರೊನಾ ಪ್ರಕರಣಗಳನ್ನು ಗಮನಿಸಿದರೆ ವೈರಸ್ ಅಂತಿಮ ಹಂತ ತಲುಪುತ್ತಿದೆ ಎಂಬುದು ಸ್ಪಷ್ಟವಾಗಿದೆ. ಸಾಮಾನ್ಯ ಜ್ವರ ಪ್ರಕರಣಗಳ ಸಂಖ್ಯೆಗೂ ಕೊರೊನಾ ಪ್ರಕರಣಗಳ ಸಂಖ್ಯೆಗೂ ಅಂತಹ ವ್ಯತ್ಯಾಸವೇನಿಲ್ಲ,’ ಎಂದು ಹಿರಿಯ ಶ್ವಾಸಕೋಶಶಾಸ್ತ್ರ ತಜ್ಞ ಡಾ. ನೀರಜ್ ಗುಪ್ತ ಅಭಿಪ್ರಾಯಪಟ್ಟಿದ್ದಾರೆ.