Advertisement
ಇಸ್ರೇಲ್ ರಾಜಧಾನಿ ಜೆರುಸಲೇಂ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಘೋಷಣೆ ಸದ್ಯ ವಿಶ್ವಸಂಸ್ಥೆಯಲ್ಲಿ ಬಿದ್ದು ಹೋದರೂ, ಮುಂದಿನ ದಿನಗಳಲ್ಲಿ ಅವರು ಅದನ್ನು ಪ್ರಸ್ತಾಪಿಸದೆ ಇರಲಾರರು. ಜತೆಗೆ ರಿಯಾದ್ ಮತ್ತು ಸೌದಿ ಅರೇಬಿಯಾ ನಡುವಿನ ಕಗ್ಗಂಟು ಕೂಡ ಉದ್ಯೋಗ ಮತ್ತು ಇತರ ಅಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಬಗ್ಗೆ “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕೂಡ ಆಂತರಿಕವಾಗಿ ಉದ್ಯೋಗ ನೀಡಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹಲವು ಸುಧಾರಣೆಗಳನ್ನು ಘೋಷಣೆ ಮಾಡಿದೆ. ಅದಕ್ಕೆ ಅಲ್ಲಿನ ಸಂಪ್ರದಾಯವಾದಿಗಳು ಆಕ್ಷೇಪವೆತ್ತಿದ್ದಾರೆ.
ಮತ್ತೂಂದು ಗಮನಾರ್ಹ ಅಂಶವೆಂದರೆ 2018ರಿಂದ ದುಬೈ ಪ್ರವಾಸ ಕೈಗೊಂಡರೆ ಅದು ದುಬಾರಿಯಾಗಲಿದೆ. ಏಕೆಂದರೆ ಜನವರಿ 1ರಿಂದ ಅಲ್ಲಿ ಶೇ.5ರಷ್ಟು ಪ್ರಮಾಣದಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಜಾರಿಯಾಗಲಿದೆ. ಹೀಗಾಗಿ ಅಲ್ಲಿನ ದೊರೆಯುವ ಎಲ್ಲ ವಸ್ತುಗಳು ಮತ್ತು ಸೇವೆಗಳು ದುಬಾರಿಯಾಗಲಿವೆ. ದುಬೈನ ಪ್ರವಾಸೋದ್ಯಮ ಇಲಾಖೆ ಪ್ರಕಾರ ಭಾರತದಿಂದಲೇ ಸುಮಾರು 1.8 ಕೋಟಿ ಮಂದಿ ಅಲ್ಲಿಗೆ ಭೇಟಿ ನೀಡಿ, ಖರೀದಿ, ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹೋಟೆಲ್, ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ಶುಲ್ಕ, ವಿವಿಧ ವಸ್ತುಗಳ ಬೆಲೆಯ ಮೇಲೆ ತೆರಿಗೆ ವಿಧಿಸಲಾಗುತ್ತಿರುವುದರಿಂದ ಭಾರತೀಯರು ತಮ್ಮ ನಿಗದಿತ ಪ್ರವಾಸದ ವೆಚ್ಚಕ್ಕಿಂತ ಶೇ.6ರಿಂದ ಶೇ.8ರಷ್ಟು ಹೆಚ್ಚಿನ ಮೊತ್ತ ವಿನಿಯೋಗ ಮಾಡಬೇಕಾಗುತ್ತದೆ. ಕಚ್ಚಾ ತೈಲದ ಮೇಲಿನ ಬೆಲೆ ಕಡಿಮೆಯಾಗುತ್ತಿರುವುದರಿಂದ ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಆದಾಯಕ್ಕಾಗಿ ಇತರ ಮೂಲಗಳನ್ನು ಕಂಡುಕೊಳ್ಳಬೇಕಾದ್ದರಿಂದ ವ್ಯಾಟ್ ಅನ್ನು ಜಾರಿಗೆ ತರಬೇಕಾದ ಅನಿವಾರ್ಯತೆಗೆ ಸಿಲುಕಿದೆ.