ಚಿಂಚೋಳಿ: ಇಲ್ಲಿನ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಚುನಾವಣೆಗೂ ಮುನ್ನ ಬಿಜೆಪಿ ಮುಖಂಡರು ನೀಡಿದ ಭರವಸೆ ಹಾಗೆ ಉಳಿದುಕೊಂಡಿದ್ದು, “ಕಲ್ಯಾಣ ಕರ್ನಾಟಕ ಉತ್ಸವ’ ದಿನದಂದು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಪ್ರಕಟಿಸಿ ಸಿಹಿ ಸುದ್ದಿ ನೀಡುವರೆಂಬ ಭರವಸೆ ಇಟ್ಟುಕೊಂಡಿದ್ದಾರೆ ರೈತರು.
ಪಟ್ಟಣದ ಹೊರ ವಲಯ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ 1998ರಲ್ಲಿ ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಿಸಲು 200 ಎಕರೆ ಜಮೀನು ಖರೀದಿಸಿ, ಅತ್ಯಾಧುನಿಕ ಕಬ್ಬು ನುರಿಸುವ ಯಂತ್ರಗಳನ್ನು ಅಳವಡಿಸಲಾಗಿತ್ತು. ನಂತರ ಹಣಕಾಸು ತೊಂದರೆಯಿಂದ ಕಳೆದ ಎರಡು ದಶಕಗಳಿಂದ ಈ ಕಾರ್ಖಾನೆ ಆರಂಭವಾಗೇ ಇಲ್ಲ.
ತಾಲೂಕಿನಲ್ಲಿ ಕುಂಚಾವರಂ, ವೆಂಕಟಾಪುರ, ಜಿಲವರ್ಷ, ಶಾದಿಪುರ, ಸಂಗಾಪುರ, ಮೊಗದಂಪುರ, ಶಿವರಾಮ ಪುರ, ಪೋಚಾವರಂ, ಸುಲೇಪೇಟ, ಐನೋಳಿ, ದೇಗಲಮಡಿ, ಚಿಮ್ಮನಚೋಡ, ಶಿವರೆಡ್ಡಿಪಳ್ಳಿ, ಲಚಮಾಸಾಗರ, ಬೊನಸಪುರ ಗ್ರಾಮಗಳಲ್ಲಿರುವ ಕಬ್ಬು ಬೆಳೆಗಾರರು ನೆರೆಯ ತೆಲಂಗಾಣದ ಕೊಹಿರ, ಜಹಿರಾಬಾದ್, ಯಾದಗಿರಿ, ಮನ್ನಾಎಕ್ಕೆಳ್ಳಿ, ಮಗದಾಳ, ಹಳ್ಳಿಖೇಡ, ಭಂಗೂರ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 3500 ಹೆಕ್ಟೇರ್ ಜಮೀನಿನಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದು, ಆದರೆ ಮಾರಾಟ ಮಾಡಿಕೊಳ್ಳಲು ಬೇರೆ ಜಿಲ್ಲೆ ಹಾಗೂ ರಾಜ್ಯದಲ್ಲಿರುವ ಕಾರ್ಖಾನೆ ಅವಲಂಬಿಸುವಂತಾಗಿದೆ. ಚಿಂಚೋಳಿ ಮತಕ್ಷೇತ್ರಕ್ಕೆ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆ ಪ್ರಚಾರ ಭಾಷಣದಲ್ಲಿ ಚಿಂಚೋಳಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾ ಧಿಸಿದರೆ ಒಂದು ವರ್ಷದೊಳಗೆ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ನಂತರ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷ ಅಧಿಕಾರ ಪೂರೈಸಿದರೂ ಬೇಡಿಕೆ ಇನ್ನೂ ಈಡೇರಿಲ್ಲ.
ಚಿಂಚೋಳಿ ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆ ಆರಂಭಿಸಬೇಕೆಂದು ಕಳೆದ ಎರಡು ದಶಕಗಳಿಂದ ರೈತರ ಪರವಾಗಿ ಹೋರಾಟ ಮಾಡುತ್ತಲೇ ಬರುತ್ತಿದ್ದೇವೆ. ಬಿಜೆಪಿ ಮುಖಂಡರು ನೀಡಿದ ಭರವಸೆ ಈಡೇರಿಸಬೇಕು.
ಭೀಮಶೆಟ್ಟಿ ಎಂಪಳ್ಳಿ, ರೈತ ಸಂಘದ ಮುಖಂಡ
ಸಕ್ಕರೆ ಕಾರ್ಖಾನೆ ಆರಂಭಿಸಬೇಕೆನ್ನುವುದು ಈ ಭಾಗದ ರೈತರ ಅನೇಕ ವರ್ಷಗಳ ಬೇಡಿಕೆಯಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ ಸ್ಪಂದಿಸಬೇಕು.
ಸಿದ್ಧಲಿಂಗಯ್ಯ ಸ್ವಾಮಿ,
ತಾಲೂಕು ಕರ್ನಾಟಕ ರೈತ ಸಂಘದ ಅಧ್ಯಕ್ಷ
ಸಕ್ಕರೆ ಕಾರ್ಖಾನೆ ಯಾವಾಗ ಆರಂಭಗೊಳ್ಳಲಿದೆ ಎಂದು ಈ ಭಾಗದ ಕಬ್ಬು ಬೆಳೆಗಾರರು ಕಾಯುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಈಗ ಮರೆತಿದ್ದಾರೆ.
ಶರಣಬಸಪ್ಪ ಮಮಶೆಟ್ಟಿ,
ಜಿಲ್ಲಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ
*ಶಾಮರಾವ ಚಿಂಚೋಳಿ