Advertisement

ನ್ಯಾಯಾಂಗದೊಂದಿಗೆ ಮರುಸಂಘರ್ಷಕ್ಕಿಳಿಯಿತೇ ಕೇಂದ್ರ ಸರಕಾರ?

11:55 PM Aug 10, 2023 | Team Udayavani |

ಚುನಾವಣ ಆಯೋಗಕ್ಕೆ ಮುಖ್ಯ ಚು. ಆಯುಕ್ತರು ಮತ್ತು ಚುನಾವಣ ಆಯುಕ್ತರುಗಳನ್ನು ನೇಮಕ ಮಾಡುವ ಸಂಬಂಧ ಕೇಂದ್ರ ಸರಕಾರ ಹೊಸ ಮಸೂದೆಯೊಂದನ್ನು ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಿದೆ. ಕೇಂದ್ರದ ಈ ನಡೆ ಕಳೆದ ಕೆಲವು ವರ್ಷಗಳಿಂದೀಚೆಗೆ ಕೇಂದ್ರ ಸರಕಾರ ಮತ್ತು ನ್ಯಾಯಾಂಗದ ನಡುವೆ ನಡೆಯುತ್ತಲೇ ಬಂದಿರುವ ಸಂಘರ್ಷ ವನ್ನು ಮತ್ತೂಂದು ಮಜಲಿಗೆ ಕೊಂಡೊಯ್ಯುವ ಸಾಧ್ಯತೆ ಇದೆ.

Advertisement

ಈ ಹಿಂದೆ ಸರಕಾರವು ಚುನಾವಣ ಆಯುಕ್ತರ ಹುದ್ದೆಗಳಿಗೆ ಹೆಸರು ಗಳನ್ನು ಅಂತಿಮಗೊಳಿಸಿ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡುತ್ತಿತ್ತು. ಆದರೆ ಸುಪ್ರೀಂನ ಪಂಚ ಸದಸ್ಯ ಪೀಠ ಈ ವರ್ಷದ ಮಾರ್ಚ್‌ನಲ್ಲಿ ಸರ್ವಾನುಮತದಿಂದ ನೀಡಿದ್ದ ಮಹತ್ವದ ತೀರ್ಪಿನಲ್ಲಿ ಚುನಾವಣ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ನಿಯಮಾವಳಿ ಇಲ್ಲದಿರುವುದನ್ನು ಪರಿಗಣಿಸಿ ಆಯುಕ್ತರುಗಳ ನೇಮಕ ಕ್ಕಾಗಿ ಪ್ರಧಾನಿ, ಸಿಜೆ ಐ ಮತ್ತು ವಿಪಕ್ಷ ನಾಯಕರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಸಂಸತ್‌ ಹೊಸ ಕಾನೂನನ್ನು ಅಂಗೀಕರಿ ಸುವವರೆಗೆ ಈ ಸಮಿತಿ ಚುನಾವಣ ಆಯುಕ್ತರ ನೇಮಕ ಪ್ರಕ್ರಿಯೆ ನಡೆಸಲಿದೆ ಎಂದು ತೀರ್ಪಿನಲ್ಲಿ ಹೇಳಿತ್ತಾದರೂ ಚುನಾವಣ ಆಯುಕ್ತ ರಂತಹ ಸ್ವಾಯತ್ತ ಹುದ್ದೆಗಳಿಗೆ ನೇಮಕ ಮಾಡುವಾಗ ಕಾರ್ಯಾಂಗದ ಹಸ್ತಕ್ಷೇಪಕ್ಕೆ ಅವಕಾಶವಿರಬಾರದು ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿತ್ತು. ಇದೇ ಹಿನ್ನೆಲೆಯಲ್ಲಿ ತಾತ್ಕಾಲಿಕ ಸಮಿತಿ ರಚನೆ ಸಂದರ್ಭದಲ್ಲಿ ಸಿಜೆಐ ಅವರನ್ನೂ ಸಮಿತಿಯಲ್ಲಿ ಸೇರ್ಪಡೆಗೊಳಿಸಿತ್ತು.

ಈಗ ಸರಕಾರ ಜಾರಿಗೆ ತರಲುದ್ದೇಶಿಸಿರುವ ಹೊಸ ಕಾನೂನಿನಲ್ಲಿ ಸಿಜೆಐ ಅವರನ್ನು ಸಮಿತಿಯಿಂದ ಕೈಬಿಡಲಾಗಿದೆಯಲ್ಲದೆ ಕೇಂದ್ರ ಸರಕಾರದ ಈರ್ವರು ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ವಿಪಕ್ಷ ನಾಯಕರನ್ನು ಸಮಿತಿಯ ಸದಸ್ಯರನ್ನಾಗಿ ಹೆಸರಿಸಲಾಗಿದೆಯಾ ದರೂ ಪ್ರಧಾನಿ ಹಾಗೂ ಮತ್ತವರಿಂದ ನಾಮನಿರ್ದೇಶನಗೊಂಡ ಓರ್ವ ಕೇಂದ್ರ ಸಚಿವರು ಸಮಿತಿಯಲ್ಲಿರುವುದರಿಂದ ಚುನಾವಣ ಆಯುಕ್ತರ ಹುದ್ದೆಗಳ ನೇಮಕಾತಿ ವೇಳೆ ಪ್ರಧಾನಿ ಅವರ ಮಾತೇ ಅಂತಿಮ ವಾಗಲಿದೆ. ಈ ಕಾರಣದಿಂದಲೇ ವಿಪಕ್ಷಗಳು ಕೇಂದ್ರ ಸರಕಾರ ಮಂಡಿಸಿದ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆಯಲ್ಲದೆ ಚುನಾವಣ ಆಯೋಗವನ್ನು ಪ್ರಧಾನಿಯವರು ತನ್ನ ಕೈಗೊಂಬೆಯನ್ನಾಗಿಸಲು ಮುಂದಾಗಿದ್ದಾರೆ ಎಂದು ನೇರ ವಾಗ್ಧಾಳಿ ಮಾಡಿವೆ.

ಈ ಹಿಂದೆ ಕೊಲೀಜಿಯಂ ವಿಷಯವಾಗಿ ಕೇಂದ್ರ ಸರಕಾರ ಮತ್ತು ಸಿಜೆಐ ನಡುವೆ ಸಾಕಷ್ಟು ತಿಕ್ಕಾಟ ನಡೆದಿತ್ತು. ತಿಂಗಳುಗಳ ಹಿಂದೆ ದಿಲ್ಲಿಯಲ್ಲಿ ಅಧಿಕಾರಿಗಳ ನೇಮಕ, ವರ್ಗಾವಣೆಗೆ ಸಂಬಂಧಿಸಿದಂತೆ ದಿಲ್ಲಿ ಸರಕಾರಕ್ಕೆ ಪೂರ್ಣ ಅಧಿಕಾರ ನೀಡಿ ಸುಪ್ರೀಂ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಈ ಅಧಿಕಾರವನ್ನು ಲೆಫ್ಟಿನೆಂಟ್‌ ಗವರ್ನರ್‌ಗೆ ಹಸ್ತಾಂತರಿಸುವ ಸಂಬಂಧ ಕೇಂದ್ರ ಅಧ್ಯಾದೇಶ ಹೊರಡಿಸಿತ್ತು. ಮೂರು ದಿನಗಳ ಹಿಂದೆಯಷ್ಟೇ ಈ ಕುರಿತ ತಿದ್ದುಪಡಿ ಮಸೂದೆಗೆ ಸರಕಾರ ಸಂಸತ್‌ನ ಅಂಗೀಕಾರ ಪಡೆದಿದೆ.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ತಮ್ಮದೇ ಆದ ಹೊಣೆಗಾರಿಕೆಗಳಿವೆ. ಇವು ಮೂರೂ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸಿದಾಗಲಷ್ಟೇ ಆಡಳಿತ ಸುಗಮವಾಗಿ ಸಾಗಲು ಸಾಧ್ಯ. ದೇಶದ ಸಮಷ್ಟಿಯ ಹಿತವನ್ನು ಗಮನದಲ್ಲಿರಿಸಿಕೊಂಡು ಈ ಮೂರು ಅಂಗಗಳು ಒಂದಕ್ಕೊಂದು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next