Advertisement

ಬೊಂಬಾಟ್‌ ಬಾವಲಿ ಹೂವು?

01:41 PM Nov 02, 2017 | Harsha Rao |

ಯಾವುದೇ ಸಸ್ಯವಿರಲಿ ಅದು ನಮ್ಮ ಆಕರ್ಷಣೆಗೆ ಒಳಗಾಗುವುದು ಕೇವಲ ಅದು ಅರಳಿಸುವ ಬಣ್ಣಬಣ್ಣದ ಹೂಗಳಿಂದಾಗಿ. ಇಲ್ಲೊಂದು ಸಸ್ಯವಿದೆ. ಅದು ಅರಳಿಸುವ ಹೂವು ಕಪ್ಪು ಬಣ್ಣದ್ದು. ಆ ಹೂವು ನೋಡಲು ಬಾವಲಿಯಂತೆಯೇ ಕಾಣುವುದರಿಂದ ಈ ಸಸ್ಯವು “ಬಾವಲಿ ಹೂ’ನ ಸಸ್ಯವೆಂದೇ ಹೆಸರುವಾಸಿ.

Advertisement

ಇವಕ್ಕೆ ಮೀಸೆಯೂ ಇದೆ
“ಟಕ್ಕಾ ಚಾಂಟ್ರಿಯೆರಿ’ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವನ್ನು ಎಲ್ಲರೂ ಹೆಚ್ಚಾಗಿ “ಬಾವಲಿ ಹೂ ಸಸ್ಯ’ ಎಂದೇ ಗುರುತಿಸುತ್ತಾರೆ. ಡೈಯಾಸ್ಕೊರೇಯೆ ಕುಟುಂಬಕ್ಕೆ ಸೇರಿರುವ ಈ ಸಸ್ಯವು ಸರಾಸರಿ 2 ಅಡಿಗಳಷ್ಟು ಎತ್ತರ ಬೆಳೆಯುತ್ತದೆ ಮತ್ತು ಹೂಗಳು ಸುಮಾರು 12 ಇಂಚುಗಳಷ್ಟು ಅಗಲವಾಗಿರುವುದಲ್ಲದೇ ಬೆಕ್ಕಿನ ಮೀಸೆಯಂಥ ಕಪ್ಪು ಬಣ್ಣದ ಸಣ್ಣ ರಚನೆಗಳನ್ನು ಹೊಂದಿದ್ದು ಅವು ಸುಮಾರು 28 ಇಂಚುಗಳಷ್ಟು ಉದ್ದ ಬೆಳೆಯಬಲ್ಲವು. ಈ ಸಸ್ಯಗಳಲ್ಲಿ ಸುಮಾರು 10 ಪ್ರಬೇಧಗಳಿದ್ದು ಅದರಲ್ಲಿ “ಟಕ್ಕಾ ಇಂಟಗ್ರಿಪೋಲಿಯಾ’ ಪ್ರಭೇಧವು ಬಿಳಿ ಬಣ್ಣದ ಹೂವುಗಳನ್ನು ಬಿಡುತ್ತದೆಯಲ್ಲದೇ ಇದರ ಹೂಗಳು ಕಪ್ಪು ಹೂಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ ಮತ್ತು ಈ ಪ್ರಭೇದವು 4 ಅಡಿಗಳಷ್ಟು ಎತ್ತರದವರೆಗೂ ಅಂದರೆ ಟಕ್ಕಾ ಚಾಂಟ್ರಿಯೆರಿಯ ಎರೆಡು ಪಟ್ಟು ಎತ್ತರ ಬೆಳೆಯಬಲ್ಲದು. ಹೊಳೆಯುವ ಹಸಿರು ಎಲೆಗಳನ್ನು ಹೊಂದಿರುವ ಬಾವಲಿ ಹೂ ಸಸ್ಯದ ಮಧ್ಯದಲ್ಲಿಯೇ ಕಾಂಡದಲ್ಲಿ ಅರಳುವ ಹೂಗಳು ತಮ್ಮ ಮಧ್ಯದಲ್ಲಿ ನೇರಳೆ ಬಣ್ಣದ ಸಣ್ಣಹೂಗಳ ಗುತ್ಛವನ್ನು ಒಳಗೊಂಡಿರುತ್ತವೆ. ಇವುಗಳ ಮೇಲಾºಗದಲ್ಲಿ ಎರಡು ದಳಗಳಂಥ ಬಿಳಿಯ ಬಣ್ಣದ ರಚನೆಗಳಿದ್ದು ಅವು ಬಾವಲಿಯ ರೆಕ್ಕೆಗಳಂತೆ ಗೋಚರಿಸುತ್ತವೆ.

ಇಲ್ಲಿ ಮಾತ್ರ ನೋಡಬಹುದು
ಬಾವಲಿ ಹೂವಿನ ಸಸ್ಯಗಳು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಥಾಯ್‌ಲೆಂಡ್‌, ಮಲೇಶಿಯಾ ಮತ್ತು  ಯುನಾನ್‌ ಭಾಗದ ದಕ್ಷಿಣ ಚೀನಾದ ಉಷ್ಣಪ್ರದೇಶಗಳಲ್ಲಿಯೂ ಕಾಣಸಿಗುತ್ತವೆ. ಈ ಸಸ್ಯಗಳು ಹೆಚ್ಚು ನೀರನ್ನು ಬಯಸುತ್ತವೆ ಮತ್ತು ಗಾಳಿಯ ಪ್ರಮಾಣ ಹೆಚ್ಚಿರುವ ಒಣ ಮಣ್ಣಿನಲ್ಲಿ ಹೆಚ್ಚು ಸಮೃದ್ಧಿಯಾಗಿ ಬೆಳೆಯಬಲ್ಲವು.

ನೈಸರ್ಗಿಕವಾಗಿ ಸಿಗುವ ಹೂಗಳಲ್ಲಿ ಕಪ್ಪು ಬಣ್ಣದ ಹೂಗಳು ತುಂಬಾ ವಿರಳವೆಂದೇ ಹೇಳಬೇಕು. ತನ್ನ ಆಕರ್ಷಕ ರಚನೆಯಿಂದ ಕೀಟಗಳನ್ನು ಸುಲಭವಾಗಿ ಆಕರ್ಷಿಸುವ ಮೂಲಕ ಪರಾಗಸ್ಪರ್ಶ ಕ್ರಿಯೆಯನ್ನು ಸುಲಭಗೊಳಿಸಿಕೊಳ್ಳುವ ಮೂಲಕ ಸಂತಾನೋತ್ಪತ್ತಿ ಮಾಡಿಕೊಳ್ಳುತ್ತವೆ. ಪರಾಗ ಕ್ರಿಯೆಯ ನಂತರ ಹೂವುಗಳು ಸಸ್ಯದಲ್ಲೇ ಕೊಳೆತು ಉದುರಿ ಹೋಗುವುದುಂಟು. ಒಂದು ಋತುವಿನಲ್ಲಿ ಕನಿಷ್ಠವೆಂದರೂ 8 ಬಾರಿ ಅರಳುವ ಹೂಗಳು ಬೇಸಗೆಯ ಅಂತ್ಯಕ್ಕೆ ಕೊಳೆತು ಉದುರಿಹೋಗುತ್ತವೆ.

ಕೀಟಮುಕ್ತ ಬಾವಲಿ ಸಸ್ಯ
ಬಾವಲಿ ಹೂವಿನ ಸಸ್ಯಗಳು ಮಾರಕವೂ ಅಲ್ಲ ಮತ್ತು ಯಾವುದೇ ಕೀಟಗಳಿಂದ ಬಾಧೆಗೂ ಒಳಗಾಗುವುದಿಲ್ಲವಾದ್ದರಿಂದ ಇತ್ತೀಚೆಗೆ ಈ ಸಸ್ಯಗಳನ್ನು ಕುಂಡಸಸ್ಯಗಳನ್ನಾಗಿಯೂ ಬೆಳೆಸಲಾಗುತ್ತಿದ್ದು, ಜನಪ್ರಿಯ ಅಲಂಕಾರಿಕ ಸಸ್ಯಗಳಾಗುವುದರತ್ತ ದಾಪುಗಾಲಿಡುತ್ತಿವೆ.

Advertisement

ಪ.ನಾ.ಹಳ್ಳಿ. ಹರೀಶ್‌ ಕುಮಾರ್‌, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next