Advertisement

ಹೊಸ ಪಕ್ಷಗಳ ಹುಟ್ಟು ಸಂಭ್ರಮ ಪಡುವ ಸಂಗತಿಯೇ?

06:00 AM Mar 11, 2018 | Team Udayavani |

ಹೊಸ ಪಕ್ಷವೊಂದು ಹುಟ್ಟಿಕೊಂಡಾಗ ಅದರ ಬಗ್ಗೆ ಸಹಜವಾಗಿಯೇ ಒಂದಿಷ್ಟು ನಿರೀಕ್ಷೆ ಇರುತ್ತದೆ. ಪ್ರಸ್ತುತ ಹೊಸ ಪಕ್ಷ ಕಟ್ಟಿದವರೆಲ್ಲ ಅಭಿಮಾನಿ ದೇವರುಗಳನ್ನೇ ನಂಬಿದ್ದಾರೆ. 

Advertisement

ನನ್ನ ಕರ್ತವ್ಯ ಮಾಡುವ ಸಮಯ ಬಂದಿದೆ. ವ್ಯವಸ್ಥೆ ಬದಲಾಯಿಸುತ್ತೇನೆ ಎನ್ನುತ್ತಾ ತಮಿಳುನಾಡಿನಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌ ಹೊಸ ವರ್ಷಾರಂಭದಲ್ಲಿ ರಾಜಕೀಯ ಪ್ರವೇಶ ಮಾಡಿ ಅಭಿಮಾನಿ ವಲಯ ದಲ್ಲಷ್ಟೇ ಅಲ್ಲ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದ್ದಾರೆ. ಇನ್ನೋರ್ವ ನಟ ಕಮಲ್‌ಹಾಸನ್‌ ಕೂಡ ಮಕ್ಕಳ್‌ ನೀತಿ ಮಯ್ಯಮ್‌ ಎಂಬ ಹೊಸ ಪಕ್ಷ ಹುಟ್ಟು ಹಾಕಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ-ಮೊನ್ನೆ ರಿಯಲ್‌ಸ್ಟಾರ್‌ ಉಪೇಂದ್ರ ಕೂಡಾ ಬಿಜೆಪಿಗೋ ಕಾಂಗ್ರೆಸ್ಸಿಗೋ ಸೇರದೆ ಹೊಸ ಪ್ರಜಾ ಕೀಯ ಪಕ್ಷ ಹುಟ್ಟುಹಾಕಿ ಸೊನ್ನೆಯಿಂದ ಶುರು ಮಾಡುವುದಾಗಿ ಘೋಷಿಸಿದ್ದಾರೆ. ವಿಶೇಷವೆಂದರೆ ಇವರು ಕೆಲವೇ ದಿನಗಳ ಹಿಂದಷ್ಟೇ ಕರ್ನಾಟಕ ಪ್ರಗತಿಪರ ಜನತಾ ಪಕ್ಷವೆಂಬ ಪಕ್ಷ ಕಟ್ಟಿದ್ದಲ್ಲದೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವು ದಾಗಿಯೂ ಹೇಳಿದ್ದರು. ವಿಪರ್ಯಾಸವೆಂದರೆ ಚುನಾವಣೆಗೆ ಮುನ್ನವೇ ಆ ಪಕ್ಷದಲ್ಲಿ ಆಂತರಿಕ ಭಿನ್ನಮತ ಮೂಡಿತು. ಇದೀಗ ಇನ್ನೊಂದು ಹೊಸ ಪಕ್ಷದ ಹುಟ್ಟಿಗೆ ಕಾರಣವಾಯಿತು!

ಅಭಿಮಾನವೇ ಬಂಡವಾಳ
ಹೊಸ ಪಕ್ಷವೊಂದು ಹುಟ್ಟಿಕೊಂಡಾಗ ಒಂದಿಷ್ಟು ನಿರೀಕ್ಷೆ ಸಹಜ. ಪ್ರಸ್ತುತ ಹೊಸ ಪಕ್ಷ ಕಟ್ಟಿದವರೆಲ್ಲ ಅಭಿಮಾನಿ ದೇವರುಗಳನ್ನೇ ನಂಬಿದ್ದಾರೆ. ಅಭಿಮಾನ ವನ್ನೇ ಬಂಡವಾಳವನ್ನಾಗಿಸಿಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟವರ ಪರಂಪರೆಯೇ ದೇಶದಲ್ಲಿ ಇದೆ. ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿ ಸಿನೇಮಾ ಮಂದಿಯ ರಾಜಕೀಯ ಆಟ ತುಸು ಹೆಚ್ಚೇ ಎನ್ನುವ ಷ್ಟಿದೆ. ತಮಿಳುನಾಡಿನಲ್ಲಿ ಆ ಪರಂಪರೆಯನ್ನು ಹುಟ್ಟು ಹಾಕಿದವರು ಶಿವಾಜಿ ಗಣೇಶನ್‌, ಎಂ.ಜಿ.ರಾಮ ಚಂದ್ರನ್‌ರಂಥವರು. ನಂತರದ ದಿನಗಳಲ್ಲಿ ಅಲ್ಲಿ ನಟಿ ಜಯಲಲಿತ ರಾಜಕೀಯದಲ್ಲೂ ಸೈ ಅನಿಸಿಕೊಂಡದ್ದು ಇದೀಗ ಇತಿಹಾಸ. 1983ರಲ್ಲಿ ಆಂಧ್ರಪ್ರದೇಶದಲ್ಲೂ ಎನ್‌.ಟಿ.ರಾಮರಾವ್‌ ರಾಜಕೀಯ ಪ್ರವೇಶಿಸಿ ಅಭೂತಪೂರ್ವ ಯಶಸ್ಸು ಕಂಡರು. ಇದೀಗ ರಜನಿ, ಉಪೇಂದ್ರರೂ ಅಭಿಮಾನಿ ದೇವರುಗಳನ್ನೇ ನೆಚ್ಚಿ ಕೊಂಡಂತಿದೆ. ಆದರೆ ಅಭಿಮಾನಿ ಬಳಗ ರಾಜಕೀಯ ಪಕ್ಷವಾಗಲು ಸಾಧ್ಯವಿಲ್ಲ ಎಂದಿದ್ದಾರೆ ಬಿಜೆಪಿ ಮುಖಂಡ ಸುಬ್ರಮಣಿಯಂ ಸ್ವಾಮಿ. ಅಂತೆಯೇ ಹೊಸ ಪಕ್ಷ ಕಟ್ಟಿದವರೆಲ್ಲಾ ಗೆಲ್ಲುತ್ತಾರೆ ಅನ್ನುವಂತೆಯೂ ಇಲ್ಲ. ಆದರೆ ಒಂದಿಷ್ಟು ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗಬಹುದೆಂಬುದನ್ನು ತಳ್ಳಿಹಾಕುವಂತಿಲ್ಲ.

ಭಿನ್ನಮತ ಕಾರಣ 
ಹೊಸಬರೆಂದಲ್ಲ, ರಾಜಕೀಯದಲ್ಲಿ ಪಳಗಿದವರೇ ಹೊಸ ಪಕ್ಷ ಕಟ್ಟಹೋಗಿ ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಂಡ ಉದಾಹರಣೆಗಳಿವೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದ ವರಿಷ್ಠರಲ್ಲೊಬ್ಬರಾದ ಬಿ.ಎಸ್‌.ಯಡಿ ಯೂರಪ್ಪನವರೇ ಹಿಂದೊಮ್ಮೆ ಹೊರನಡೆದು ಹೊಸ ಪಕ್ಷವೊಂದನ್ನು ಕಟ್ಟಿದ್ದರು. ಬಿಜೆಪಿ ಸಂಸದರಾಗಿದ್ದ ವಿಜಯ ಸಂಕೇಶ್ವರರೂ ಹೊಸಪಕ್ಷ ಕಟ್ಟುವ ಸಾಹಸಕ್ಕೆ ಕೈಹಾಕಿದ್ದರು. ಕೆಲವೆಡೆ ಭಿನ್ನಮತವೂ ಹೊಸ ಪಕ್ಷಗಳ ಹುಟ್ಟಿಗೆ ಕಾರಣವಾಗುತ್ತದೆ ಎಂಬುದಕ್ಕೆ ಉದಾಹರಣೆ ಯಾಗಿದ್ದರು. ಮುನಿಸಿಕೊಂಡು ಮನೆ ಬಿಟ್ಟು ಹೋದರೂ ಮತ್ತೆ ಹಳೆಯ ಗಂಡನ ಪಾದವೇ ಗತಿಯೆಂದು ಮರಳುವುದು ಭಾರತಿಯ ಪರಂಪರೆ ತಾನೆ? ಮತದಾರ ಪ್ರಭು ಅವರನ್ನು ಪುರಸ್ಕರಿಸಲಿಲ್ಲ. ಅವರೆಲ್ಲಾ ಮಾತೃಪಕ್ಷಕ್ಕೆ ಮರಳಿದರು. ಮತದಾರ ಪ್ರಭುವಿನ ಮನಸ್ಸು ಹೀಗೆಯೇ ಇರುತ್ತದೆ ಎಂದು ಹೇಳುವಂತಿಲ್ಲ. ಹೊಸಪಕ್ಷಕ್ಕೆ ಮಣೆಹಾಕುತ್ತಾನೆ ಎನ್ನುವಂತಿಲ್ಲ.

ಭ್ರಮೆ ನಿರಸನ
ಪಕ್ಷವೊಂದು ಸೋಲಲಿ. ಸರ್ಕಾರವೊಂದು ಉರು ಳಲಿ. ಅದಕ್ಕೆ ಎಲ್ಲೋ ಒಂದೆಡೆ ಮತದಾರ ಪ್ರಭುವಿಗಾದ ಭ್ರಮೆನಿರಸನವೇ ಕಾರಣ. ಕೇರಳದಲ್ಲಿ ನಾನೊಮ್ಮೆ ನೀನೊಮ್ಮೆ ಎಂಬಂತೆ ಒಮ್ಮೆ ಯುಡಿಎಫ್ ಮತ್ತೂಮ್ಮೆ ಎಲ್‌ಡಿಎಫ್ ಅಧಿಕಾರದ ಚುಕ್ಕಾಣಿ ಹಿಡಿಯಲೂ ಅದೇ ಕಾರಣ. ದೆಹಲಿಯಲ್ಲಿ ಮಿಕ್ಕ ಪಕ್ಷಗಳನ್ನು ಗುಡಿಸಿ ಹೊರಹಾಕಿ ಸ್ವತ್ಛ ಮಾಡಿ ಆಪ್‌ ಎಂಬ ಹೊಸ ಪಕ್ಷ ಮೊದಲ ಪ್ರಯತ್ನದಲ್ಲೇ ಬಹುಮತ ಪಡೆದು ಅಧಿಕಾರಕ್ಕೆ ಬರಲೂ ಹಿಂದಿನ ಸರ್ಕಾರದ ಬಗ್ಗೆ ಮತ ದಾರನಿಗಾದ ಭ್ರಮೆನಿರಸನವೇ ಕಾರಣ. ಹಾಗಾದಾಗ ಸಾಮಾನ್ಯವಾಗಿ ಆಡಳಿತ ವಿರೋಧಿ ಅಲೆ ಕೆಲಸ ಮಾಡಿತು ಎನ್ನುವುದಿದೆ. ಆಡಳಿತ ವಿರೋಧಿ ಅಲೆಯೂ ಭ್ರಮೆ ನಿರಸನದ ಫ‌ಲ. ಈ ಕಾರಣದಿಂದಾಗಿಯೇ ರಾಜ್ಯದಲ್ಲಿ ದೇವರಾಜ್‌ ಅರಸು ಮತ್ತು ನಿಜಲಿಂಗಪ್ಪ ಅವರನ್ನು ಬಿಟ್ಟರೆ ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಯಿಲ್ಲ. ಅರವಿಂದ ಕೇಜ್ರಿ ವಾಲರು ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ್ದರೂ ಮತ್ತೂಂದು ಅವಧಿಗೆ ದೆಹಲಿಯ ಗದ್ದುಗೆಗೇರುವ ಭರವಸೆಯಿಲ್ಲ. ಅವರ ಆಪ್‌ ಇತರ ರಾಜ್ಯಗಳಲ್ಲೂ ಖಾತೆ ತೆರೆಯುವಷ್ಟು ಜನರಿಗೆ ಆಪ್ತವಾಗಿಲ್ಲ. ಭ್ರಮೆ ನಿರಸನಕ್ಕೊಳಗಾದ ಮತದಾರ ಪ್ರಭು ಬದಲಾವಣೆ ಬಯಸುವುದು ಸಹಜ. ಹಾಗಾಗಿ ಹೊಸ ಪಕ್ಷದತ್ತ ಒಲವು ತೋರಿದರೂ ಅಚ್ಚರಿಯಿಲ್ಲ. ಆದರೆ ಅಂತಹ ಸಾಧ್ಯತೆ ನಿಚ್ಚಳವೆನ್ನುವಂತಿಲ್ಲ.

Advertisement

ಸಮ್ಮಿಶ್ರ ಸರಕಾರ ಬೇಡ 
ರಾಜ್ಯದಲ್ಲಿ ಒಂದೆಡೆ ನಟ ಉಪೇಂದ್ರರ ಹೊಸ ಪಕ್ಷ ಹುಟ್ಟಿಕೊಂಡಿದೆ. ಇನ್ನೊಂದೆಡೆ ನಿವೃತ್ತ ಪೋಲಿಸ್‌ ಅಧಿಕಾರಿ ಅನುಪಮಾ ಶೆಣೈ ಹೊಸ ಪಕ್ಷ ಕಟ್ಟಿದ್ದಾರೆ. ರಾಜ್ಯದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷ ಅನಿವಾರ್ಯವೆಂದು ಜೆಡಿಎಸ್‌ ವರಿಷ್ಠ ದೇವೇಗೌಡರು ಮೊನ್ನೆ ಮೊನ್ನೆ ಪುನರುತ್ಛರಿಸಿದ್ದಾರೆ. ಒಪ್ಪತಕ್ಕದ್ದೇ, ಆದರೆ ಮತದಾರರು ಈಗಾಗಲೇ ಯಾವುದೋ ಒಂದು ಧರ್ಮವನ್ನು ಒಪ್ಪಿಕೊಂಡಿರುವಂತೆ ಯಾವುದೋ ರಾಜಕೀಯ ಪಕ್ಷವೊಂದನ್ನು ಅಪ್ಪಿಕೊಂಡಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ಹೊಸ ಪಕ್ಷ ಹುಟ್ಟಿದಂತೆಲ್ಲಾ ಇರುವ ವೋಟು ಹಂಚಿಹೋಗುವ ಸಾಧ್ಯತೆಯೇ ಹೆಚ್ಚು. ಪರಿಣಾಮವಾಗಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಸಮ್ಮಿಶ್ರ ಸರಕಾರ ರಚನೆ ಸಾಧ್ಯತೆಯೇ ಹೆಚ್ಚು. ಚುನಾವಣೆಗಿನ್ನೂ ಒಂದೆರಡು ತಿಂಗಳು ಉಳಿದಿರು ವಂತೆಯೇ ಕೆಲವು ವಾಹಿನಿಗಳಲ್ಲಿ ಸಮೀûಾ ಕಾರ್ಯವೂ ನಡೆದಿದ್ದು ಸಮೀಕ್ಷೆಗಳೂ ಅದನ್ನೇ ಹೇಳುತ್ತವೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚಿxಕೆಯವರ ಮೂಗಿಗೂ ಸಮ್ಮಿಶ್ರ ಸರಕಾರದ ವಾಸನೆ ಬಡಿದಂತಿದೆ. ಅವರೂ ಇಷ್ಟರಲ್ಲೇ ಒಂದೆಡೆ ಸಮ್ಮಿಶ್ರ ಸರಕಾರ ಬಂದರೆ ನಾನು ರಾಜಕೀಯದಿಂದ ದೂರ ಸರಿಯುತ್ತೇನೆ ಅನ್ನುವಂತಹ ಹೇಳಿಕೆ ಹರಿಬಿಟ್ಟು ಮಗದೊಂದೆಡೆ ಚುನಾವಣಾ ಹೊಂದಾಣಿಕೆಗೂ ಸಿದ್ಧ ಎಂದೂ ಹೇಳಿದ್ದಾರೆ. ಜೊತೆಗೆ ಒಂದಲ್ಲ ಒಂದು ಆಮಿಷ ಒಡ್ಡುತ್ತಲೇ ಇದ್ದಾರೆ.

ಎಚ್ಚೆತ್ತುಕೊಳ್ಳಬೇಕು 
ಜೆಡಿಎಸ್‌ ಎಂದಲ್ಲ, ಎಲ್ಲ ಪಕ್ಷದವರೂ ಅಷ್ಟೇ. ಅಂಗೈಲೇ ಅರಮನೆ ತೋರಿಸುತ್ತಿದ್ದಾರೆ. ಯಾರೇ ಬಂದರೂ ರಾಗಿ ಬಿಸೋದು ತಪ್ಪಿದ್ದಲ್ಲ ಎಂಬಂತೆ ಯಾರು ಬಂದರೆ ನಮಗೇನು? ಸದ್ಯ ಮಧ್ಯಂತರ ಚುನಾವಣೆ ನಡೆಯುವ ಪರಿಸ್ಥಿತಿ ನಿರ್ಮಾಣವಾಗದೆ ಅವಧಿ ಪೂರೈಸಿದರೆ ಅದೇ ಮಹಾಪ್ರಸಾದ ಅನ್ನುವ ನಿಲುವಿಗೆ ಬಂದಿದ್ದಾನೆ ಮತದಾರ ಪ್ರಭು. ಸಮ್ಮಿಶ್ರ ಸರಕಾರ ರಚನೆಯಾದರೆ ಮಿತ್ರ ಪಕ್ಷಗಳನ್ನು ಸಂಭಾಳಿ ಸುವುದೇ ದೊಡ್ಡ ಸವಾಲು. ಎಚಿxಕೆ-ಯಡಿಯೂರಪ್ಪ ನವರ ಸಮ್ಮಿಶ್ರ ಸರಕಾರದದ ಟ್ವೆಂಟಿ-ಟ್ವೆಂಟಿ ಪ್ರಹಸ ನವನ್ನಿನ್ನೂ ಕರ್ನಾಟಕದ ಜನ ಮರೆತಿರಲಾರರು. ಸಮ್ಮಿಶ್ರ ಸರಕಾರದ ಕಹಿವುಂಡ ಮತದಾರ ಮತ್ತೆ ಅಂಥದ್ದಕ್ಕೆ ಎಡೆಗೊಡ‌ಬಾರದು. ಅತಂತ್ರ ವಿಧಾನೆ ಸಭೆ ರೂಪುಗೊಳ್ಳಲು ಅವಕಾಶ ಮಾಡಿಕೊಡಬಾರದು. ಸ್ಥಿರ ಸರಕಾರವೊಂದರ ಅಗತ್ಯ ನಮಗಿದೆ. ಆ ನಿಟ್ಟಿನಲ್ಲಿ ಮತದಾರ ಪ್ರಭು ಎಚ್ಚೆತ್ತುಕೊಳ್ಳಬೇಕಿದೆ. 

ಪ್ರಜ್ಞಾವಂತರು ಹೆಚ್ಚು ಹೆಚ್ಚು ರಾಜಕೀಯಕ್ಕೆ ಬರಬೇಕಿದೆ. ಹೊಸ ಪಕ್ಷಗಳನ್ನು ಹುಟ್ಟು ಹಾಕಿ ವೋಟು ಹಂಚಿಹೋಗುವಂತೆ ಮಾಡುವ ಬದಲು ಇದ್ದ ಪಕ್ಷಗಳನ್ನೇ ಶುದ್ಧೀಕರಿಸಿ ಬಲಪಡಿಸುವುದೊಳಿತು. ಇಷ್ಟರಲ್ಲೇ ಮತದಾರರಲ್ಲಿ ಅರಿವು ಮೂಡಿಸುವ ಸಲುವಾಗಿ ಸ್ವೀಪ್‌ ಕಾರ್ಯಕ್ರಮ ಆರಂಭವಾಗಿದೆ. ಮತ ಚಲಾಯಿಸಿದರಷ್ಟೇ ಸಾಲದು. ಮತದಾರ ಪ್ರಭು ಸ್ಥಿರ ಹಾಗೂ ಯೋಗ್ಯ ಸರಕಾರ ಅಸ್ತಿತ್ವಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next