Advertisement
ರಾಜಾಜಿನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಂವೇದನಾ-ವಿದ್ಯಾರ್ಥಿಗಳೊಂದಿಗೆ ಆಪ್ತ ಸಂವಾದ ಕಾರ್ಯಕ್ರಮದಲ್ಲಿ ನಗರದ ವಿವಿಧ ಭಾಗದ 45 ಶಾಲೆಗಳ 250ಕ್ಕೂ ಅಧಿಕ ವಿದ್ಯಾರ್ಥಿಗಳು 50ಕ್ಕೂ ಅಧಿಕ ಪ್ರಶ್ನೆ ಹಾಗೂ ಸಲಹೆಗಳ ಮೂಲಕ ಶಾಲಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಮುಂದೆ ಅನಾವರಣಗೊಳಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ರದ್ದು ಮಾಡಬೇಕು ಎಂದು ವಿದ್ಯಾರ್ಥಿ ಕುಸುಮಾ ಸಲಹೆ ನೀಡಿದಳು.
Related Articles
Advertisement
ಹಳೇಪಾಸ್ ಮತ್ತು ಐಡಿ ತೋರಿಸಿದ್ದಕ್ಕೆ ಅರ್ಧದಲ್ಲೇ ಬಸ್ ನಿಲ್ಲಿಸಿ, ಬಸ್‌ನಿಂದ ಇಳಿಸಿದ್ದರು. ಎರಡು ಕಿ.ಮೀ ನಡೆದುಕೊಂಡು ಶಾಲೆಗೆ ಹೋದೆ ಎಂದು ಕೀರ್ತಿ ಎಂಬ ವಿದ್ಯಾರ್ಥಿ ಸಚಿವರ ಮುಂದೆ ಅಳಲು ತೋಡಿಕೊಂಡರು. ಪರೀಕ್ಷೆಗೆ ಶುಲ್ಕ ಪಾವತಿಸುವ ಸಂದರ್ಭದಲ್ಲಿ ಎಸ್ಟಿ ಎಸ್ಟಿಯವರಿಗೆ ಕಡಿಮೆ, ಉಳಿದ ಜಾತಿಯ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಿದೆ. ಈ ತಾರತಮ್ಯ ಸರಿಯೇ? ಎಂದು ಪ್ರಶ್ನಿಸಿದರು.
ಎನ್‌ಸಿಇಆರ್‌ಟಿ ಪಠ್ಯಪುಸ್ತಕವನ್ನು ಎಲ್ಲ ವಿಷಯಕ್ಕೂ ವಿಸ್ತರಣೆ ಮಾಡಿ ಎಂದು ವಿದ್ಯಾರ್ಥಿ ವಿಜಯ್ ಸೂರ್ಯ ಕೋರಿದರು. ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಮೌಲ್ಯಾಂಕನ ಮಾಡಿ ಎಂದರು ವಿದ್ಯಾರ್ಥಿ ಮೋಹನ್. ಖಾಸಗಿ ಶಾಲೆಗಳಲ್ಲಿ ಪಡೆಯುವ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಿ ಎಂದು ವಿದ್ಯಾರ್ಥಿ ಪವಿತ್ರಾ ಕೋರಿದರು. ಇಂಗ್ಲಿಷ್ ಮಾಧ್ಯಮದವರ ಜತೆಗೆ ಸ್ಪರ್ಧೆ ಕಷ್ಟವಾಗುತ್ತಿದೆ. ಆತ್ಮಸ್ಥೈರ್ಯದ ಮಟ್ಟ ಕುಗ್ಗುತ್ತದೆ. ಹೀಗಾಗಿ ಪ್ರತ್ಯೇಕ ಕೊಠಡಿಕೊಡಿ ಎಂದು ವಿದ್ಯಾರ್ಥಿ ಬಸವರಾಜ್ ಮನವಿ ಮಾಡಿದರು.
ಶಾಲೆಯಲ್ಲಿ ಪಾಠದ ಜತೆಗೆ ಆಟಕ್ಕೂ ಆದ್ಯತೆ ನೀಡಿ, ದೈಹಿಕ ಶಿಕ್ಷಣ ಶಾಲೆಯಲ್ಲಿ ಮರೆಯಾಗಿದೆ ಎಂದು ಕೇವನ್ ಸಚಿವರ ಗಮನಕ್ಕೆ ತಂದರು. ವಿಜ್ಞಾನದಲ್ಲಿ ಲ್ಯಾಬ್‌ಗ ಜಾಸ್ತಿ ಅವಕಾಶ ನೀಡಿ, ಥಿಯರಿ ಕಡಿಮೆ ಮಾಡಿ ಎಂದು ವಿದ್ಯಾರ್ಥಿ ಯುಕ್ತಾ ಸಚಿವರಿಗೆ ಮನವಿ ಮಾಡಿದಳು. ಹೀಗೆ ವಿದ್ಯಾರ್ಥಿಗಳು ಕೇಳಿದ ಬಹುತೇಕ ಪ್ರಶ್ನೆ ಸಚಿವರು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಕೆಲವೊಂದು ಪ್ರಶ್ನೆಗಳಿಗೆ ಆಡಳಿತಾತ್ಮಕವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿಯೂ ಭರವಸೆ ನೀಡಿದರು.
ಬಾಗ್ ರಹಿತ ದಿನಕ್ಕೆ ಚಿಂತನೆ: ಬ್ಯಾಗ್ ಭಾರ ಹೆಚ್ಚಿದೆ ಎಂದು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾರದಲ್ಲಿ ಒಮ್ಮೆ ನೋ ಬ್ಯಾಗ್ ಡೇ ಮಾಡುವ ಚಿಂತನೆಯಿದೆ ಎಂದಾಗ, ಕೆಲವು ವಿದ್ಯಾರ್ಥಿಗಳು ಆಕ್ಷೇಪಿಸಿದರು. ತಿಂಗಳಿಗೊಮ್ಮೆ ಮಾಡಿದರೆ ಸಾಕಾಗುತ್ತದೆ. ತಿಂಗಳಿಗೆ ನಾಲ್ಕು ದಿನದಂತೆ ವರ್ಷಕ್ಕೆ ಸರಾಸರಿ 48 ದಿನ ಹೀಗೆ ಕಳೆದು ಹೋದರೆ, ಪಠ್ಯಕ್ರಮದ ಮೇಲೆ ಪರಿಣಾಮ ಬೀರುತ್ತದೆ ಎಂದರು. ಆಗ ಸಚಿವರು, 30-15 ದಿನಕ್ಕೊಮ್ಮೆ ನೋ ಬ್ಯಾಗ್ ಡೇ ಮಾಡುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದರು.
ಪರೀಕ್ಷೆ ಭಯ ಇದೆ!: ಪರೀಕ್ಷೆ ಭಯ ಇದೆ ಎಂದ ವಿದ್ಯಾರ್ಥಿ ಸೌಮ್ಯಗೆ ಪ್ರತಿಕ್ರಿಯಿಸಿದ ಸಚಿವರು, ಪರೀಕ್ಷಾ ಭಯ ನಿವಾರಿಸುವ ಸಂಬಂಧ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ. ಅಂಕಕ್ಕಾಗಿ ಶಿಕ್ಷಣವಲ್ಲ ಎಂಬುದನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಯಾರ್ಯಾರಿಗೆ ಪರೀಕ್ಷಾ ಭಯ ಇದೆ ಎಂದು ವಿದ್ಯಾರ್ಥಿಗಳಲ್ಲಿ ಕೇಳಿದಾಗ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ಭಯ ಇದೆ ಎಂದರು.
ಜೀವನ ಕೌಶಲ್ಯಕ್ಕೆ ಒತ್ತು: ವಿದ್ಯಾರ್ಥಿಗಳು ಜೀವನ ಉಜ್ವಲ ಮಾಡಲು ನಿಮ್ಮ ಯೋಜನೆಯೇನು ಎಂದು ಸಂತೇಕ್ ಎಂಬ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸಚಿವ ಸುರೇಶ್ ಕುಮಾರ್ ಉತ್ತರಿಸಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮತ್ತು ಉನ್ನತ ಶಿಕ್ಷಣ ಜತೆಯಾಗಿ ಇದಕ್ಕೆ ನಿರ್ದಿಷ್ಟ ಯೋಜನೆ ರೂಪಿಸುತ್ತಿದ್ದೇವೆ. ಉನ್ನತ ಶಿಕ್ಷಣ ಸಚಿವರ ಜತೆ ಚರ್ಚಿಸಿ ಕೌಶಲ್ಯಾಧಾರಿತ ಶಿಕ್ಷಣ ಬಗ್ಗೆ ಕಾರ್ಯಕ್ರಮ ಜಾರಿಗೆ ತರಲಿದ್ದೇವೆ ಎಂದರು.
ಕರ್ನಾಟಕದಲ್ಲಿ ಕನ್ನಡವೇ ಫಸ್ಟ್: ಹಿಂದಿ ದಿವಸ್ ಬಗ್ಗೆ ಗೃಹ ಸಚಿವರು ಟ್ವೀಟ್ ಮಾಡಿದ್ದನ್ನು ಪ್ರಸ್ತಾಪಿಸಿದ ವಿದ್ಯಾರ್ಥಿ ಅಕ್ಷಯಣಿಯವರಿಗೆ ಸುರೇಶ್ ಕುಮಾರ್ ಉತ್ತರಿಸಿ, ಕರ್ನಾಟಕದಲ್ಲಿ ಕನ್ನಡವೇ ಪ್ರಥಮ. ಈ ವಿಚಾರವಾಗಿ ನಮ್ಮ ಸರ್ಕಾರ ಸ್ಪಷ್ಟವಾಗಿದೆ. ಯಾವುದೇ ಭಾಷೆ ಯಾರೂ ಬೇಕಾದರೂ ಕಲಿಯಬಹುದು. ಆದರೆ, ಒತ್ತಾಯ ಮಾಡಿ ಕಲಿಸಬಾರದು ಎಂದರು.
ಮೌಲ್ಯಮಾಪನ ಲೋಪ ಮಹಾಲೋಪ: ಮೌಲ್ಯಮಾಪನ ಲೋಪದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿ ಸಂದೀಪ್ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಮೌಲ್ಯಮಾಪನವನ್ನು ಎಚ್ಚರಿಕೆಯಿಂದ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಶಿಕ್ಷಕ, ಉಪನ್ಯಾಸಕರಿಗೆ ಸೂಚನೆ ನೀಡುತ್ತೇನೆ. ಇದು ಮಹಾಲೋಪ, ಇದನ್ನು ಸರಿಪಡಿಸುವ ಭರವಸೆ ನೀಡಿದರು.
ಪಠ್ಯ ಬದಲಿಸಿ!: ಸಮಾಜ ವಿಜ್ಞಾನದಲ್ಲಿ ಹಳೇ ಯುದ್ಧದ ಕುರಿತು ಓದಿ ಸಾಕಾಗಿದೆ. ಈಗಿನ ಜಿಎಸ್‌ಟಿ, ಸುಪ್ರೀಂಕೋರ್ಟ್ ಮೇಲಿರಿರುವ ಪ್ರಮುಖ ಪ್ರಕರಣಗಳು ಇತ್ಯಾದಿಗಳು ಜೋಡಿಸಿ, ಹಾಗೂ ವಿದೇಶಿ ಸಾಹಿತಿ, ಕವಿಗಳ ಬದಲು, ದೇಶಿ ಸಾಹಿತಿ, ಕವಿಗಳ ಮಾಹಿತಿ ಹೆಚ್ಚು ನೀಡಿ ಎಂದು ವಿದ್ಯಾರ್ಥಿಗಳಾದ ಪಿಯೂಷ್ ಹಾಗೂ ಅನನ್ಯ ಮನವಿ ಮಾಡಿದರು.
ನನ್ನನ್ನು ಸಂಪರ್ಕಿಸಿ: ಜಾತಿ ಪ್ರಮಾಣಪತ್ರ ಪಡೆಯಲು ವಿಳಂಬವಾದರೆ ಅಥವಾ ಬೇರ್ಯಾವುದೇ ಸಮಸ್ಯೆ ಇದ್ದರೂ ರಾಜಾಜಿನಗರದಲ್ಲಿರುವ ನನ್ನ ಕಚೇರಿಗೆ ಸಂಪರ್ಕ ಮಾಡಬಹುದು ಎಂದು ಸಚಿವರು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಪರೀಕ್ಷೆ ನಡೆಸುವ ಚಿಂತನೆ ಇದೆ!: 1ರಿಂದ 9ನೇ ತರಗತಿ ವರೆಗೂ ಫೇಲ್ ಮಾಡಲ್ಲ ಎಂಬ ನಿಯಮ ಬದಲಿಸಿ ಎಂದು ವಿದ್ಯಾರ್ಥಿ ಕೋಮಲಾ ನೀಡಿದ ಸಲಹೆಗೆ ಉತ್ತರಿಸಿದ ಸಚಿವರು, 6 ಮತ್ತು 8ನೇ ತರಗತಿಗೆ ಪರೀಕ್ಷೆ ನಡೆಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಅಧಿಕಾರಿಗಳ ಜತೆ ಮಾತುಕತೆ ಕೂಡ ನಡೆಯುತ್ತಿದೆ. ನಿಮ್ಮಲ್ಲಿ ಎಷ್ಟು ಜನರಿಗೆ ಪರೀಕ್ಷೆ ಬೇಕು ಎಂದು ಮಕ್ಕಳಲ್ಲಿ ಕೇಳಿದಾಗ ಬಹುತೇಕರು ಪರೀಕ್ಷೆ ಇರಲಿ ಎಂದು ಕೈ ಎತ್ತಿದರು. ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷೆಯೇ ಬೇಡ ಎಂದಾಗ ಏಕೆಂದು ಪ್ರಶ್ನಿಸಿದರು. ಅದಕ್ಕೆ, ಆ ವಿದ್ಯಾರ್ಥಿ, ನನಗೆ ಪರೀಕ್ಷೆ ಎಂದರೆ ಭಯ, ಪರೀಕ್ಷೆಯೇ ಬೇಡ ಎಂದಾಗ ಎಲ್ಲರೂ ಒಮ್ಮೆಗೆ ನಕ್ಕರು.
ಶಿಕ್ಷಣದಲ್ಲಿ ಕನ್ನಡ, ಇಂಗ್ಲಿಷ್ ಎಂಬ ವರ್ಣವ್ಯವಸ್ಥೆಬೆಂಗಳೂರು: ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಎಂಬ ಹೊಸ ವರ್ಣ ವ್ಯವಸ್ಥೆ ಹುಟ್ಟಿಕೊಂಡಿದೆ. ಕನ್ನಡ ಮಾಧ್ಯಮದ ಮಕ್ಕಳಲ್ಲಿ ಕೀಳರಿಮೆ ಬಾರದಂತೆ ನಾವೆಲ್ಲರೂ ಎಚ್ಚರದಿಂದ ನೋಡಿಕೊಳ್ಳಬೇಕು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಬಹುತೇಕ ವಿದ್ಯಾರ್ಥಿಗಳು ವಿವಿಧ ಮಾದರಿಯ ಪ್ರಶ್ನೆಗಳು ಕೇಳಿದ್ದರು. ಕಾರ್ಯಕ್ರಮದ ನಂತರ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ಪ್ರಶ್ನೆಯ ಭಿನ್ನತೆ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ಬಹಳ ಮುಂಚೆಯಿಂದಲೂ ಈ ರೀತಿ ಬಂದು ಬಿಟ್ಟಿದೆ. ಇದು ಹೊಸ ವರ್ಣ ವ್ಯವಸ್ಥೆಯಾಗಿದೆ. ಕನ್ನಡ ಮಾಧ್ಯಮ ಶಾಲೆ ಮಕ್ಕಳಿಗೆ ಕೀಳರಿಮೆ ಬಾರದೇ ಇರುವಂತೆ ನಾವು ನೋಡಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳ ಪ್ರಶ್ನೆಯ ಆಧಾರದಲ್ಲಿ ಏನೇನೂ ವ್ಯವಸ್ಥೆ ಸುಧಾರಣೆಗೆ ಏನು ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ಅಧಿಕಾರಿಗಳೊಂದಿಗೆ ಅತಿ ತುರ್ತಾಗಿ ಚರ್ಚಿಸಿ, ದೀರ್ಘಾವಧಿ ಹಾಗೂ ಅಲ್ಪವಧಿ ಪರಿಹಾರ ನೀಡಲಿದ್ದೇವೆ ಎಂದು ಹೇಳಿದರು. ಒಂದೇ ವ್ಯವಸ್ಥೆಯಡಿಯಲ್ಲಿ ಇರುವ ಪಿಯುಸಿ-ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಹಾಗೆಯೇ ಮುಂದಿನ ವರ್ಷದಿಂದ ಆರ್‌ಟಿಇ ಸೀಟು ಬಡ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಸಿಗುವ ರೀತಿಯಲ್ಲಿ ಮರು ಪರಿಶೀಲನೆ ನಡೆಸಲಿದ್ದೇವೆ ಎಂದು ಸಚಿವರು ಹೇಳಿದರು. ಮಾಧ್ಯಮದ ಚರ್ಚೆ ನಡೆದಿರುವುದು ನಿಜ!: ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಬೇಕು ಹಾಗೂ ಬೇಡ ಎನ್ನುವ ಎರಡು ವರ್ಗ ಹುಟ್ಟಿಕೊಂಡಿದೆ. ನಾಡಿನ ಕೆಲವು ಹಿರಿಯರು, ಚಿಂತಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಾಧ್ಯಮದ ವಿಷಯ ಪಾಲಕ-ಪೋಷಕರಿಗೆ ಬಿಟ್ಟದ್ದು ಎಂಬುದನ್ನು ನ್ಯಾಯಾಲಯವೂ ಸ್ಪಷ್ಟಪಡಿಸಿದೆ. ಮಕ್ಕಳ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎನ್ನುವ ವಾದ ಒಂದೆಡೆ, ನಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು ಬೇಡವೇ? ಎಂಬ ವಾದ ಇನ್ನೊಂದೆಡೆ. ಹೀಗಾಗಿ ಈ ಬಗ್ಗೆ ನಾವು ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದರು. ಗುರಿ ಉದಾತ್ತವಾಗಿರಲಿ: ಡಾ.ಕರ್ಜಗಿ
ಬೆಂಗಳೂರು: ನಮ್ಮ ಗುರಿ ಯಾವಾಗಲೂ ಉದಾತ್ತವಾಗಿರಬೇಕು ಮತ್ತು ಅದರ ಸಾಕಾರಕ್ಕಾಗಿ ಶ್ರಮಪಡಬೇಕು. ಆಗ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿಯವರು ಕರೆ ನೀಡಿದರು. ಶಿಕ್ಷಣ ಇಲಾಖೆಯಿಂದ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಶ್ರೇಷ್ಠ ಗುರಿಯನ್ನು ಮುಂದಿಟ್ಟುಕೊಂಡು, ಅದರ ಸಕಾರಕ್ಕಾಗಿ ನಿತ್ಯವೂ ಶ್ರಮಪಡಬೇಕು. ಯಾಕೆಂದರೆ ನಮಗೆ ಇರುವುದು ಒಂದೇ ಜೀವನ ಅದರ ಬಗ್ಗೆ ಎಚ್ಚರ ಇರಬೇಕು ಎಂದು ಹೇಳಿದರು. ಶಿಕ್ಷಣದಲ್ಲಿ ನೈತಿಕ ಮೌಲ್ಯ ಅತಿ ಅಗತ್ಯವಾಗಿದೆ. ಅದನ್ನು ಹೇಗೆ ಬೋಧನೆ ಮಾಡಬೇಕು ಎಂಬುದು ಅತಿಮುಖ್ಯವಾಗಿದೆ. ಮೌಲ್ಯಗಳನ್ನು ನಡೆದೇ ತೋರಿಸಬೇಕು. ಹೇಳಿದರೆ ಮೌಲ್ಯವನ್ನು ಯಾರು ಕಲಿಯುವುದಿಲ್ಲ ಎಂದರು. ಇತಿಹಾಸ ಓದಬೇಕು, ಹೊಸ ಇತಿಹಾಸವನ್ನು ವಿದ್ಯಾರ್ಥಿಗಳು ಸೃಷ್ಟಿಮಾಡಬೇಕು. ಪ್ರತಿ ಭಾಷೆಯೂ ಜ್ಞಾನ ಭಂಡಾರವಿದ್ದಂತೆ, ಸಂಸ್ಕೃತ ಓದದೇ ಹೋದರೆ ಜ್ಞಾನ ಸಮುದ್ರಕ್ಕೆ ನಾವು ಪರಕೀಯರಾಗುತ್ತೇವೆ. ಹೀಗಾಗಿ ಹೆಚ್ಚೆಚ್ಚು ಭಾಷೆ ಕಲಿಯಬೇಕು. ಕನ್ನಡ ಕಲಿಯುವುದು ನಮ್ಮ ಧರ್ಮ, ಬೇರೆ ಭಾಷೆ ಕಲಿಯುವುದು ನಮ್ಮ ಆಸಕ್ತಿ ಎಂದು ಹೇಳಿದರು. ನೂರಾರು ವರ್ಷಗಳಿಂದ ದೂರ ಇಟ್ಟಿರುವ, ಶತಮಾನದಿಂದ ಹಿಂದುಳಿದವರನ್ನು ಮುಂದೆ ತರಲು ಮೀಸಲಾತಿ ಬಂದಿದೆ. ಇದು ಯಾರ ಮೇಲೂ ದ್ವೇಷ ಹುಟ್ಟಿಸಲು ತಂದಿಲ್ಲ. ಎಲ್ಲ ಹಂತದಲ್ಲೂ ಸಮಾನತೆ ಬಂದಾಗ ಮಾತ್ರ ಮೀಸಲಾತಿ ಹೋಗುತ್ತದೆ.
-ಡಾ.ಗುರುರಾಜ ಕರ್ಜಗಿ, ಶಿಕ್ಷಣ ತಜ್ಞ ಬೇರೆ ಜಿಲ್ಲೆಗಳಲ್ಲೂ ಸಂವಾದ ಕಾರ್ಯಕ್ರಮ ಮಾಡಲು ವಿದ್ಯಾರ್ಥಿಗಳು ನಮಗೆ ಜೋಶ್ ನೀಡಿದ್ದಾರೆ. ಶಿಕ್ಷಣ ಇಲಾಖೆಯ ಸರ್ವಸ್ಪರ್ಶಿ ಹಾಗೂ ಸರ್ವವ್ಯಾಪಿಯಾಗಿ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದ್ದಾರೆ. ಮಕ್ಕಳ ಪ್ರಶ್ನೆಗಳ ಆಧಾರದಲ್ಲಿ ಚಿಂತನೆ ನಡೆಸಲಿದ್ದೇವೆ. ಎಲ್ಲ ಪ್ರಶ್ನೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಲು ಅರ್ಧದಿನ ಮೀಸಲಿಡುತ್ತೇನೆ. ಹಾಗೆಯೇ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ.
-ಎಸ್. ಸುರೇಶ್ ಕುಮಾರ್, ಶಿಕ್ಷಣ ಸಚಿವ