Advertisement

ಶಾಲಾ ಶಿಕ್ಷಕರ ವರ್ಗಾವಣೆ ಇನ್ನಷ್ಟು ಕಠಿಣ?

06:25 AM Aug 07, 2018 | |

ಬೆಂಗಳೂರು: ಇನ್ನೇನು ಶಾಲಾ ಶಿಕ್ಷಕರ ವರ್ಗಾವಣೆಗೆ ಕಾಲ ಕೂಡಿಬಂತು ಎನ್ನುವಷ್ಟರಲ್ಲಿ ಮತ್ತೆ ಕೆಲವು ಶಾಲೆಗಳು ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಿವೆ. ಮಾತ್ರವಲ್ಲದೇ ನಗರ ಸ್ಥಳೀಯ ಸಂಸ್ಥೆಯ ಚುನಾವಣಾ ನೀತಿ ಸಂಹಿತೆ ಕೂಡ ವರ್ಗಾವಣೆಗೆ ತೊಡಕುಂಟಾಗುವ ಸಾಧ್ಯತೆ ಇದೆ.

Advertisement

ಶಾಲಾ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಪರಿಷ್ಕರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಮಂಗಳವಾರ ಅಥವಾ ಬುಧವಾರ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯೂ ಇದೆ. ಆದರೆ, ವರ್ಗಾವಣೆ ಕೌನ್ಸೆಲಿಂಗ್‌ ಅಷ್ಟು ಸುಲಭದಲ್ಲಿ ನಡೆಯುವುದು ಕಷ್ಟಸಾಧ್ಯ.
ಈ ಮಧ್ಯೆ ರಾಜ್ಯದ ಕೆಲವು ಶಾಲೆಗಳು ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ಪ್ರಕ್ರಿಯೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಈ ಕುರಿತ ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರ್ಕಾರ ಹಾಗೂ ಇತರೆ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಅಲ್ಲದೇ ಕೌನ್ಸೆಲಿಂಗ್‌ ನಿಯಮಾವಳಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ಪೀಠ ನಿರಾಕರಿಸಿದೆ.

ಚುನಾವಣಾ ನೀತಿ ಸಂಹಿತೆ ಅಡ್ಡಿ
ಆ.28ರಂದು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆ ಸಂಬಂಧ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಶಿಕ್ಷಕರ ವರ್ಗಾವಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಚುನಾವಣಾ ನೀತಿ ಸಂಹಿತೆಯು ವರ್ಗಾವಣೆಗೆ ಅಡ್ಡಿಯಾಗದಂತೆ ವೇಳಾಪಟ್ಟಿಯನ್ನು ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ.

ಹೆಚ್ಚುವರಿ ಶಿಕ್ಷಕರ ಮರು ನಿಯುಕ್ತಿ
ಕೋರಿಕೆ, ಪರಸ್ಪರ ಹಾಗೂ ಕಡ್ಡಾಯ ವರ್ಗಾವಣೆಗೂ ಮೊದಲು ಹೆಚ್ಚುವರಿ ಶಿಕ್ಷಕರ ನಿಯೋಜನೆ ಕಾರ್ಯ ಇಲಾಖೆ ಆರಂಭಿಸಿದೆ. ಈಗಾಗಲೇ 10 ಸಾವಿರ ಹೆಚ್ಚುವರಿ ಶಿಕ್ಷಕರನ್ನು ಪತ್ತೆ ಹಚ್ಚಲಾಗಿದೆ. ಇನ್ನು ಕೆಲವೊಂದು ಜಿಲ್ಲೆಗಳ ವರದಿ ಕೇಂದ್ರ ಕಚೇರಿಗೆ ಬರಬೇಕಿದೆ. ಶಿಕ್ಷಕರ ಅಂಕಿಅಂಶ ಮತ್ತು ಕಾರ್ಯಭಾರ ಸಾಫ್ಟ್ವೇರ್‌ ಮೂಲಕ ಅಪ್‌ಲೋಡ್‌ ಮಾಡುವ ಕಾರ್ಯ ಸೋಮವಾರ ಪೂರ್ಣಗೊಂಡಿದೆ. ಹೀಗಾಗಿ ಹೆಚ್ಚುವರಿ ಶಿಕ್ಷಕರ ಹೊಸ ಪಟ್ಟಿ ಕೂಡ ಎರಡು ಅಥವಾ ಮೂರು ದಿನದಲ್ಲಿ ಸಿದ್ಧವಾಗಲಿದೆ. ಆ.27ರೊಳಗೆ ಹೆಚ್ಚುವರಿ ಶಿಕ್ಷಕರ ನಿಯೋಜನೆ ಮಾಡಿ,  ಚುನಾವಣಾ ಫ‌ಲಿತಾಂಶ ಬಂದ ನಂತರ ವರ್ಗಾವಣೆ ಕೌನ್ಸೆಲಿಂಗ್‌ ನಡೆಸಲು ಮಾರ್ಗಸೂಚಿ ಸಿದ್ಧವಾಗಿದೆ. ಆದರೆ, ಇದನ್ನು ಪ್ರಶ್ನಿಸಿ ಕೆಲವು ಶಾಲೆಗಳು ನ್ಯಾಯಾಲಯದ ಮೆಟ್ಟಿಲೇರಿವೆ.

ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ಮಾರ್ಗಸೂಚಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಅತಿ ಶೀಘ್ರದಲ್ಲೇ ಕೌನ್ಸೆಲಿಂಗ್‌ ವೇಳಾಪಟ್ಟಿ ಹಾಗೂ ಮಾರ್ಗಸೂಚಿ ಪ್ರಕಟಿಸಲಿದ್ದೇವೆ. ನ್ಯಾಯಾಲಯದಲ್ಲಿ ಮತ್ತೆ ಎರಡು ಅರ್ಜಿ ಸಲ್ಲಿಕೆಯಾಗಿದೆ. ಇನ್ಮುಂದೆ ಸಲ್ಲಿಕೆಯಾಗಬಹುದಾದ ಅರ್ಜಿ ಸಂಬಂಧ ಕೆವಿಯಟ್‌ ಸಲ್ಲಿಸಲು ಸರ್ಕಾರಿ ವಕೀಲರು ಸಿದ್ಧತೆ ಮಾಡಿಕೊಂಡಿದ್ದಾರೆ.
– ಡಾ.ಪಿ.ಸಿ.ಜಾಫ‌ರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next