ಉಡುಪಿ: ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಭಾರತೀಯ ಕ್ರಿಕೆಟ್‌ನ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪೂರ್ವಜರು ಉಡುಪಿ ಜಿಲ್ಲೆಯ ಆತ್ರಾಡಿಯವರು ಎಂದು ಹೇಳಲಾಗುತ್ತಿದೆ.
ಅತ್ರಾಡಿಯ ಅಪ್ಪು ಪ್ರಭು ಹೇಳುವಂತೆ, ನಮ್ಮ ತಂದೆ ವಿಠಲ ಪ್ರಭು, ಲಕ್ಷ್ಮಣ ಪ್ರಭು, ರಾಮ ಪ್ರಭು, ಕೃಷ್ಣ ಪ್ರಭು (ರಾಮ, ಕೃಷ್ಣ) ಅವಳಿ ಜವಳಿ ಮಕ್ಕಳು, ಅನಂತ ಪ್ರಭು ಸೇರಿ ಐವರು ಸಹೋದರರು. ಐವರಲ್ಲಿ ಲಕ್ಷ್ಮಣ ಪ್ರಭು ದೊಡ್ಡವರು ಹಾಗೂ ನನ್ನ ತಂದೆ ಕೊನೆಯವರು. ರಾಮ, ಕೃಷ್ಣ ಅವರಲ್ಲಿ ಒಬ್ಬರು ಸಚಿನ್ ತೆಂಡೂಲ್ಕರ್ ಅವರ ಅಜ್ಜ. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರ ಪೂರ್ವಜರು ಆತ್ರಾಡಿಯವರಾಗಿರಬಹುದು ಎಂದು ಅನೇಕರು ನಮ್ಮ ಬಳಿ ಹೇಳಿದ್ದು ಉಂಟು ಮತ್ತು ನಮ್ಮ ತಂದೆಯವರು ಕೂಡ ಈ ವಿಚಾರ ನನ್ನ ಬಳಿ ಹೇಳಿದ್ದಾರೆ ಎಂದು ಅಪ್ಪು ಪ್ರಭು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಸಚಿನ್ ಅವರ ಪೂರ್ವಜರು ಅತ್ರಾಡಿಯ ಸಮೀಪದಲ್ಲೇ ನೆಲೆಸಿ ದ್ದರು. ಭೂ ಒಡೆತನದ ವಿಚಾರದಲ್ಲಿ ತಗಾದೆ ಎದ್ದು, ಆತ್ರಾಡಿಯಿಂದ ಬೆಳಗಾವಿ ಕಡೆ ವಲಸೆ ಹೋಗಿದ್ದರು. ಅನಂತರ ಅಲ್ಲಿಂದ, ಮುಂಬಯಿಗೆ ಹೋಗಿ ನೆಲೆಸಿದ್ದರು. ನಮ್ಮ ಕುಟುಂಬಕ್ಕೆ ಸೇರಿದ ನಾಗಬನ ಹಾಗೂ ಸಚಿನ್ ತೆಂಡೂಲ್ಕರ್ ಅವರ ಅಜ್ಜನ ಅಜ್ಜ ನಿರ್ಮಿಸಿದ್ದು ಎಂದು ತಂದೆಯವರು ಅನೇಕ ಬಾರಿ ನಮ್ಮ ಬಳಿ ಹೇಳಿದ್ದಾರೆ ಎಂದು ಅಪ್ಪು ಪ್ರಭು ನೆನಪಿಸಿಕೊಂಡರು.
ಇದನ್ನೂ ಓದಿ:ಆ್ಯಪಲ್ ಸಂಸ್ಥೆಯಿಂದ ಭರ್ಜರಿ ಬೋನಸ್ !
ಸಚಿನ್ ಅವರ ಪೂರ್ವಜರು ಹಾಗೂ ಕುಟುಂಬಸ್ಥರು ಆರಾಧಿಸಿ ಕೊಂಡು ಬರುತ್ತಿರುವ ನಾಗಬನ ಆತ್ರಾಡಿಯಲ್ಲಿ ಇರುವುದು ಕೌತುಕಕ್ಕೆ ಕಾರಣವಾಗಿದೆ. ದೈವ ಇಚ್ಛೆ ಇದ್ದರೆ ಸಚಿನ್ ತೆಂಡೂಲ್ಕರ್ ಕುಟುಂಬಸ್ಥರು ಇಲ್ಲಿಗೆ ಬರಬಹುದು ಎಂದು ಅಪ್ಪು ಪ್ರಭು ವಿವರಿಸಿದರು.