ರಷ್ಯಾ ಸೇನೆಯು ಉಕ್ರೇನ್‌ನ ನಾಗರಿಕ ಪ್ರದೇಶಗಳ ಮೇಲೆ ಬಾಂಬುಗಳ ಮಳೆ ಸುರಿಯುತ್ತಿರುವುದು “ಭಾರೀ ವಲಸೆ ಬಿಕ್ಕಟ್ಟನ್ನು’ ಸೃಷ್ಟಿಸಿದೆ. ಈಗಾಗಲೇ 17 ಲಕ್ಷಕ್ಕೂ ಅಧಿಕ ಮಂದಿ ಉಕ್ರೇನ್ ತೊರೆದು ನೆರೆ ರಾಷ್ಟ್ರಗಳತ್ತ ಪ್ರಯಾಣ ಬೆಳೆಸಿದ್ದಾರೆ. ಈಗ ರಷ್ಯಾ ಕೆಲವು ನಗರಗಳಲ್ಲಿ ಕದನ ವಿರಾಮ ಘೋಷಿಸಿರುವ ಕಾರಣ, ಮತ್ತೆ 50 ಲಕ್ಷ ಮಂದಿ ಉಕ್ರೇನ್‌ನಿಂದ ಹೊರಹೋಗುವ ಸಾಧ್ಯತೆಯಿದೆ.
ಕದನ ವಿರಾಮ ಘೋಷಿಸಿ “ಮಾನವೀಯ ರಹದಾರಿ’ಯನ್ನು ತೆರೆಯುತ್ತಿದ್ದೇವೆ ಎಂದು ಘೋಷಿಸಿ ರುವ ರಷ್ಯಾ, ಮತ್ತೂಂದೆಡೆ “ಅಮಾನ ವೀಯ ಕೃತ್ಯ’ಕ್ಕೆ ಕೈಹಾಕಿದೆಯೇ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ, ಮಾನವೀಯ ರಹದಾರಿ ಯೊಂದರಲ್ಲಿ ಪತ್ತೆಯಾಗಿರುವ ನೆಲ ಬಾಂಬುಗಳು!
ಮರಿಯುಪೋಲ್ ನಗರದಿಂದ ಹೊರಹೋಗ ಲೆಂದು ನಾಗರಿಕರಿಗೆ ರಹದಾರಿಯೊಂದನ್ನು ರಷ್ಯಾ ಸೂಚಿಸಿದೆ. ಆದರೆ, ಆ ರಹದಾರಿಯುದ್ದಕ್ಕೂ ನೆಲಬಾಂಬುಗಳನ್ನು ಹೂತಿಟ್ಟಿರುವ ಆಘಾತಕಾರಿ ಅಂಶ ಸಂಜೆ ವೇಳೆಗೆ ಬಹಿರಂಗವಾಗಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ರೆಡ್ ಕ್ರಾಸ್ ಪ್ರತಿನಿಧಿಗಳು ಈ ಬಾಂಬುಗಳನ್ನು ಪತ್ತೆಹಚ್ಚಿದ್ದಾರೆ. ಇದು ಉಕ್ರೇನ್‌ನ ನಾಗರಿಕರನ್ನು ಬೆಚ್ಚಿಬೀಳಿಸಿದ್ದು, “ಬಾಣಲೆಯಿಂದ ಬೆಂಕಿ’ಗೆ ಬಿದ್ದಂತಹ ಪರಿಸ್ಥಿತಿ ಎದುರಾಗಲಿದೆಯೇ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ.
ಉಕ್ರೇನ್ ಮೇಲೆ ಆರೋಪ: ಈ ನಡುವೆ, ರಷ್ಯಾ ಸೇನೆಯು ಉಕ್ರೇನ್ ವಿರುದ್ಧ ಹಲವು ಆರೋಪಗಳನ್ನು ಮಾಡಿದೆ. ನಮ್ಮ ಸೇನಾಪಡೆಯು ಉಕ್ರೇನ್‌ನಲ್ಲಿ ಮುನ್ನಡೆ ಸಾಧಿಸುತ್ತಿರುವ ಕಾರಣ, ಸೋಲಿನಿಂದ ತಪ್ಪಿಸಿಕೊಳ್ಳಲು ಉಕ್ರೇನ್ ಸರಕಾರವೇ ನಾಗರಿಕರು ಎಸ್ಕೇಪ್ ಆಗದಂತೆ ತಡೆಯುತ್ತಿದೆ. ಮಾನವೀಯ ರಹದಾರಿಗಳನ್ನು ಅವರೇ ಬ್ಲಾಕ್ ಮಾಡುತ್ತಿದ್ದಾರೆ ಎಂದು ರಷ್ಯಾ ಮುಖ್ಯ ಸಂಧಾನ ಕಾರ ಆರೋಪಿಸಿದ್ದಾರೆ. ಜತೆಗೆ ಉಕ್ರೇನ್ ತನ್ನ ನಾಗಿರಕರನ್ನೇ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದೆ. ಇದು ಆ ದೇಶ ಮಾಡುತ್ತಿರುವ ಯುದ್ಧಾಪರಾಧ ಎಂದೂ ಬಣ್ಣಿಸಿದ್ದಾರೆ.