Advertisement
ಶರದ್ ಪವಾರ್ ಅವರನ್ನು ಭಾರತದ ಮುಂದಿನ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲು ಪ್ರಶಾಂತ್ ಕಿಶೋರ್ ಲಾಬಿ ಮಾಡುತ್ತಿದ್ದಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
Related Articles
Advertisement
ಆದಾಗ್ಯೂ, 2024 ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳನ್ನು ಪ್ರಶಾಂತ್ ನಿರಾಕರಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಆದರೇ, ನಿನ್ನೆಯ (ಮಂಗಳವಾರ, ಜುಲೈ 13) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರ ಭೇಟಿ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧದ ರಣತಂತ್ರ ಇದು ಎಂದು ಒಂದೆಡೆ ಚರ್ಚೆಯಾದರೇ, ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಸಿರಬಹುದು ಎಂಬ ಊಹಾಪೋಹಗಳು ಕೂಡ ಕೇಳಿಬಂದವು.
ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಜಗನ್ ರೆಡ್ಡಿ, ಅರವಿಂದ್ ಕೇಜ್ರಿವಾಲ್, ಸ್ಟಾಲಿನ್ ಮತ್ತು ಉದ್ಧವ್ ಠಾಕ್ರೆ ಅವರೊಂದಿಗೆ ಉತ್ತಮ ವೈಯಕ್ತಿಕ ಸಂಬಂಧಗಳನ್ನು ಹೊಂದಿರುವ ಪ್ರಶಾಂತ್ ಕಿಶೋರ್ ಅವರಿಗೆ ಬಿಜೆಪಿ ವಿರುದ್ಧ ತಂತ್ರ ಹೂಡುವುದು ಅಷ್ಟೇನೂ ಕಷ್ಟಸಾಧ್ಯವಲ್ಲದಿದ್ದರೂ, ಕಾಂಗ್ರೆಸ್ ನೊಂದಿಗೆ ಉಳಿದೆಲ್ಲಾ ಪ್ರತಿಪಕ್ಷಗಳ ಮೈತ್ರಿಗೆ ಹೇಗೆ ಕಿಶೋರ್ ತಂತ್ರ ರೂಪಿಸುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ.
ಇನ್ನು, ನಿನ್ನೆ ರಾಹುಲ್ ಗಾಂಧಿ ಅವರನ್ನು ಪ್ರಶಾಂತ್ ಕಿಶೋರ್ ಅವರು ಭೇಟಿಯಾದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಇನ್ನು, ಪ್ರಿಯಾಂಕ ಗಾಂಧಿ ಅವರು, ಕಿಶೋರ್ ಭೇಟಿಗಾಗಿಯೇ ಲಕ್ನೋ ಪ್ರವಾಸವನ್ನು ಮುಂದೂಡಿದ್ದರು ಎಂದು ವರದಿಯಾಗಿದೆ.
ಒಟ್ಟಿನಲ್ಲಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೆ ಪ್ರತಿಪಕ್ಷಗಳ ರಾಷ್ಟ್ರೀಯ ನಾಯಕರ ಸಭೆಗಳು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ.
ಇದನ್ನೂ ಓದಿ : ಗೋವಾದಲ್ಲಿ ಕೇಜ್ರಿವಾಲ್ ಮೈತ್ರಿ ತಂತ್ರ..?! ಚರ್ಚೆಗೆ ಆಸ್ಪದವಾದ ಧವಳೀಕರ್ ಭೇಟಿ