Advertisement

ವಿಳಾಸ ಬದಲಿಸಿಕೊಂಡ ಎಂಎಲ್‌ಸಿಗಳಿಗೆ ಸಂಕಷ್ಟ?

08:34 AM Aug 31, 2017 | |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೇಯರ್‌ ಚುನಾವಣೆ ವೇಳೆ ತರಾತುರಿಯಲ್ಲಿ ತಮ್ಮ ವಿಳಾಸವನ್ನು ಬೆಂಗಳೂರಿಗೆ ಬದಲಿಸಿಕೊಂಡು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಎಂಟು ಮಂದಿ ವಿಧಾನಪರಿಷತ್‌ ಸದಸ್ಯರಿಗೆ ಸಂಕಷ್ಟ ಎದುರಾಗಿದೆ.

Advertisement

ವಿಧಾನ ಪರಿಷತ್‌ ಸದಸ್ಯರಾದ ಕಾಂಗ್ರೆಸ್‌ನ ಆರ್‌.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ರಘು ಆಚಾರ್‌, ಎನ್‌.ಎಸ್‌.ಬೋಸರಾಜ…, ಎಸ್‌.ರವಿ,
ಜೆಡಿಎಸ್‌ನ ಸಿ.ಆರ್‌.ಮನೋಹರ್‌, ಅಪ್ಪಾಜಿ ಗೌಡ ಮತ್ತು ಪಕ್ಷೇತರ ಸದಸ್ಯ ಎಂ .ಡಿ.ಲಕ್ಷ್ಮೀನಾರಾಯಣ ಅವರು ಮೇಯರ್‌ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತರು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ ಬೆನ್ನಲ್ಲೇ ಈ ವರದಿ ಆಧರಿಸಿ, ಎಂಟು ಸದಸ್ಯರ ಅನರ್ಹತೆ ಕುರಿತ ಅರ್ಜಿಯ ವಿಚಾರಣೆ ನಡೆಸಲು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ನಿರ್ಧರಿಸಿದ್ದಾರೆ. 

ಇದೇ ವೇಳೆ, ಈ ಸಂಚಿನಲ್ಲಿ ಮುಖ್ಯಮಂತ್ರಿಗಳೇ ಭಾಗಿಯಾಗಿರುವುದರಿಂದ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಕಾನೂನು ಜಿಜ್ಞಾಸೆ ಈ ರೀತಿಯ ಪ್ರಕರಣ ನಡೆದಿರುವುದು ದೇಶದಲ್ಲೇ ಮೊದಲು. ಹೀಗಾಗಿ ಸಭಾಪತಿಗಳು ಕೈಗೊಳ್ಳುವ ನಿರ್ಧಾರ ಹೆಚ್ಚು ಮಹತ್ವ ಪಡೆದಿದೆ. ಅಲ್ಲದೆ, ಈ ಪ್ರಕರಣದಲ್ಲಿ ಕಾನೂನು ಜಿಜ್ಞಾಸೆಯೂ ಕಾಡುತ್ತಿದ್ದು, ಸಭಾಪತಿಗಳು ಎರಡು ಬಾರಿ ಅಡ್ವೋಕೇಟ್‌ ಜನರಲ್‌ ಜತೆ ಚರ್ಚಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಸಭಾಪತಿಗಳು ನೀಡಿದ ನೋಟಿಸ್‌ಗೆ ಉತ್ತರಿಸಿರುವ 8 ಮಂದಿ ಸದಸ್ಯರೂ ತಾವೇನೂ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರಾದರೂ ಒಬ್ಬ ಸದಸ್ಯರು ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡ ಬಳಿಕ ತಮ್ಮ ಹಳೆಯ ವಿಳಾಸ ನೀಡಿ ಪಡೆದ
ಟಿಎ, ಡಿಎ ವಾಪಸ್‌ ಮಾಡುತ್ತೇನೆ ಎಂದು ತಿಳಿಸಿದ್ದಾರೆ.  ಉಳಿದವರೂ ಟಿಎ, ಡಿಎ ವಾಪಸ್‌ ನೀಡುತ್ತೇವೆ ಎಂದರೆ ಅವರ ವಿರುದ್ಧ ಇರುವ ಆರೋಪವನ್ನು ಕೈಬಿಡಬೇಕೇ ಎಂಬ ಪ್ರಶ್ನೆ ಉದ್ಭವವಾಗಿದೆ.

ವರದಿಯಲ್ಲೇನಿದೆ?
ಈ 8 ಮಂದಿ ಸದಸ್ಯರು ಮೇಯರ್‌ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಆರ್‌.ಬಿ.ತಿಮ್ಮಾಪುರ ಅವರು 2016ರ ಆಗಸ್ಟ್‌ 22 ರಂದು ತಮ್ಮ ಹೆಸರನ್ನು ಬೆಂಗಳೂರು ಮತದಾರರ ಪಟ್ಟಿಗೆ  ಸೇರಿಸಿದ್ದರು. ನಿಯಮಾವಳಿ ಪ್ರಕಾರ ಈ ಪ್ರಕ್ರಿಯೆಗೆ ಏಳು ದಿನ ಬೇಕಾಗಿದ್ದು, ಈ ಪ್ರಕರಣದಲ್ಲಿ ಮೂರೇ ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಇಲ್ಲಿ ನಿಯಮ ಉಲ್ಲಂಘನೆಯಾಗಿದೆ. 2017ರಲ್ಲಿ ಅವರು ಬಾಗಲಕೋಟೆಯಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದಾರೆ. ನಂತರವೂ ಅವರು ಹಿಂದಿನ ಬಾಗಲಕೋಟೆಯ ವಿಳಾಸವನ್ನೇ ಕೊಟ್ಟು ವಿಧಾನಪರಿಷತ್‌ನಿಂದ ಟಿಎ, ಡಿಎ ಪಡೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅದೇ ರೀತಿ, ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡ ಬಳಿಕವೂ ಬಳ್ಳಾರಿಯ ಅಲ್ಲಂ ವೀರಭದ್ರಪ್ಪ, ತುರುವೇಕೆರೆಯ ಎಂ.ಡಿ.ಲಕ್ಷ್ಮೀನಾರಾಯಣ, ಕೋಲಾರದ ಮನೋಹರ್‌, ರಾಯಚೂರಿನ ಬೋಸ್‌ರಾಜು, ಮಂಡ್ಯದ ಅಪ್ಪಾಜಿಗೌಡ, ರಾಮನಗರದ ರವಿ, ಚಿತ್ರದುರ್ಗದ ರಘು ಆಚಾರ್‌ ಅವರು ತಮ್ಮ ಊರಿನ ವಿಳಾಸ ಕೊಟ್ಟು ವಿಧಾನ ಪರಿಷತ್ತಿನಿಂದ ಭತ್ಯೆ ಪಡೆದಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ವಿಧಾನ ಪರಿಷತ್‌ ಸದಸ್ಯರು ವಿಳಾಸ ಬದಲಾವಣೆ ಮಾಡಿರುವ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ವಿಳಾಸ ಬದಲಿಸಿಕೊಂಡ ಮೇಲೂ ತಮ್ಮ ಹಳೆಯ ವಿಳಾಸದಿಂದ ಟಿಎ, ಡಿಎ ಪಡೆದಿರುವ ಅಂಶ ಮಾತ್ರ ನನ್ನ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಬಿಬಿಎಂಪಿ ಆಯುಕ್ತರು ನೀಡಿರುವ ವರದಿ ತರಿಸಿಕೊಂಡು ಆ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್‌ ಝಾ ಅವರೊಂದಿಗೆ ಚರ್ಚಿಸಲಾಗುವುದು. ಬಳಿಕ ಎಲ್ಲರನ್ನೂ
ಒಬ್ಬೊಬ್ಬರಾಗಿ ಕರೆಸಿ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
ಡಿ.ಎಚ್‌.ಶಂಕರಮೂರ್ತಿ, ವಿಧಾನ ಪರಿಷತ್‌ ಸಭಾಪತಿ

Advertisement

ಎಂಟು ಮಂದಿ ತಮ್ಮ ಊರಿನ ವಿಳಾಸ ನೀಡಿ ಲಕ್ಷಾಂತರ ರೂ.ಭತ್ಯೆ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ. ಅಲ್ಲದೆ, ಪ್ರಜಾ ಪ್ರತಿನಿಧಿ ಕಾಯ್ದೆಯನ್ನೂ ಉಲ್ಲಂ ಸಿದ್ದು, ಇವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವುದರೊಂದಿಗೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು. ಮುಖ್ಯಮಂತ್ರಿಗಳೇ ಈ ಸಂಚಿನಲ್ಲಿ ಶಾಮೀಲಾಗಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಸದಸ್ಯರ ವಿರುದ್ಧ ರಾಜ್ಯಪಾಲರಿಗೂ
ದೂರು ನೀಡಲಾಗುವುದು.
ಆರ್‌.ಅಶೋಕ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next