Advertisement
ಸರ್ಕಾರವೇ ಬೆಲೆಬಾಳುವ ಆಸ್ತಿಗಳ ಮಾರಾಟಕ್ಕೆ ಮುಂದಾಗುವುದು ಸದ್ಯದ ಸಂದರ್ಭದಲ್ಲಿ ಸೂಕ್ತವೆನಿಸದು. ಇಂತಹ ಪ್ರಯತ್ನಗಳು ಸರ್ಕಾರದ ಅಂತಿಮ ಹಾಗೂ ಅನಿವಾರ್ಯ ಆಯ್ಕೆಯಾಗಬೇಕೆ ಹೊರತು ಆದ್ಯತೆಯ ಆಯ್ಕೆಯಾಗಬಾರದು. ಏಕೆಂದರೆ ಬಹಳಷ್ಟು ಸರ್ಕಾರಿ ಕಚೇರಿಗಳೇ ಖಾಸಗಿ ಕಟ್ಟಡದಲ್ಲಿರುವುದು, ಅಭಿವೃದ್ಧಿ- ಸೇವಾ ಕಾರ್ಯಕ್ರಮಗಳಿಗೆ ಸೂಕ್ತ ನಿವೇಶನ, ಭೂಮಿ ಲಭ್ಯವಾಗದೆ ಪರದಾಡುವ ಸ್ಥಿತಿಯಿರುವಾಗ ಸರ್ಕಾರಿ ಭೂಮಿ ಮಾರಾಟ ಸರಿ ಎನಿಸದು ಎಂಬುದು ನಿವೃತ್ತ ಅಧಿಕಾರಿಗಳ ಅಭಿಮತ. ಬೆಲೆ ಬಾಳುವ ಆಸ್ತಿಯನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದರೆ ಮತ್ತೆ ನಗರದಲ್ಲಿ ಅಂತಹ ಆಸ್ತಿಗಳನ್ನು ಖರೀದಿಸುವುದು ಕಷ್ಟಸಾಧ್ಯ.
Related Articles
Advertisement
11,000 ಎಕರೆಯಲ್ಲಿ ಅನಧಿಕೃತ ಮಳಿಗೆಗಳು: ಬಿಡಿಎ ನಿರ್ಮಿಸಿರುವ 64 ಬಡಾವಣೆಗಳಿಗೆ ಒಟ್ಟು 38,021 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಈ ಪೈಕಿ 22,763 ಎಕರೆ ಜಮೀನನ್ನು ಬಡಾವಣೆ ರಚನೆಗೆ ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಉಳಿದ ಜಮೀನು ಈವರೆಗೂ ಸ್ವಾಧೀನಕ್ಕೆ ಪಡೆದಿಲ್ಲ. ಇದರಲ್ಲಿ 11,000 ಎಕರೆಯಲ್ಲಿ ಅನಧಿಕೃತ ಮಳಿಗೆಗಳು ತಲೆಎತ್ತಿದ್ದು, 681 ಎಕರೆ ಸಿ.ಎ. ನಿವೇಶನ, 803 ಎಕರೆ ಉದ್ಯಾನಕ್ಕೆ ಮೀಸಲಿಡಲಾಗಿದೆ. ಇದೀಗ ಸರ್ಕಾರ 12,000 ಮೂಲೆ ನಿವೇಶನಗಳ ಹರಾಜು, ಬಿಡಿಎ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಅಧಿಸೂಚನೆ ಹೊರಡಿಸಿದ್ದು, ಇದರಿಂದ ಪ್ರಾಧಿಕಾರಕ್ಕೆ ಆಸ್ತಿ ಇಲ್ಲದಂತಾಗುತ್ತದೆ.
703 ನಿವೇಶನ ಹರಾಜಿಗೆ ಸಿದ್ಧತೆ: ಸರ್ಕಾರದ ಆದಾಯ ಹೆಚ್ಚಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಮೂಲೆ ನಿವೇಶನ ಹರಾಜು ಪ್ರಕ್ರಿಯೆಗೆ ನಿರ್ಧರಿಸಿದ್ದು, ಪ್ರಾಥಮಿಕ ಹಂತವಾಗಿ 703 ನಿವೇಶನಗಳ ಹರಾಜಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಸಾವಿರಾರು ಮೂಲೆ ನಿವೇಶನ ಗುರುತಿಸಲಾ ಗಿದ್ದು, ಹಂತ ಹಂತವಾಗಿ ಸೈಟ್ ಹರಾಜು ಮಾಡಲಿದೆ. ಈಗಾಗಲೇ 1244 ಮೂಲೆ ನಿವೇಶನಗಳನ್ನು ಗುರುತಿಸಿದ್ದು, ಪ್ರಾಥಮಿಕ ಹಂತದಲ್ಲಿ 703, ಎರಡನೇ ಹಂತದಲ್ಲಿ 541 ನಿವೇಶನ ಹರಾಜು ಮಾಡಲಿದೆ. 2019ರಲ್ಲಿ ಬಿಡಿಎ ಮೂಲೆ ನಿವೇಶನಗಳ ಮಾರಾಟಕ್ಕೆ ಪ್ರಯತ್ನ ನಡೆದಿತ್ತು.
165 ನಿವೇಶನಗಳ ಮಾರಾಟ ಸಂದರ್ಭದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಶೇ 60ರಷ್ಟು ನಿವೇಶನಗಳನ್ನಷ್ಟೇ ಹರಾಜು ಮಾಡಲಾಗಿತ್ತು. ಪ್ರಸ್ತುತ ಸಾವಿರಾರು ನಿವೇಶನಗಳ ಹರಾಜಿಗೆ ಸಿದ್ಧತೆ ನಡೆಸಲಾಗಿದೆ. 54 ಬಡಾವಣೆಗಳಲ್ಲಿರುವ ನಿವೇಶನ: ಬೆಂಗಳೂರಿನಲ್ಲಿ ಸುಮಾರು 64 ಹೊಸ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಈಗ ಸುಮಾರು 54 ಬಡಾವಣೆಗಳಲ್ಲಿರುವ 8,500 ನಿವೇಶನಗಳನ್ನು ಹರಾಜು ಮಾಡಿ 7,000 ಕೋಟಿ ರೂ. ಆಧಾರ ಸಂಗ್ರಹ ನಿರೀಕ್ಷೆಯಲ್ಲಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡುವುದಕ್ಕಿಂತ ಅಪಾರ್ಟ್ ಮೆಂಟ್‌ಗಳನ್ನು ನಿರ್ಮಿಸಲು ಒತ್ತು ನೀಡಬೇಕು. ಇದರಿಂದ ಕಡಿಮೆ ಜಾಗದಲ್ಲಿ ಹೆಚ್ಚು ಜನ ವಾಸಿಸಬಹುದು. ಜತೆಗೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಕಡಿಮೆಯಾಗಲಿವೆ. ಮುಂಬೈ, ಇಂದೋರ್, ಕೊಚ್ಚಿಯಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣದಿಂದ ಅಲ್ಲಿನ ಪ್ರಾಧಿಕಾರ ಅಭಿವೃದ್ಧಿಯಾಗಿವೆ.-ಎಂ.ಕೆ. ಶಂಕರಲಿಂಗೇಗೌಡ, ಬಿಡಿಎ ಮಾಜಿ ಆಯುಕ್ತ * ಮಂಜುನಾಥ ಗಂಗಾವತಿ