ಹೊಸದಿಲ್ಲಿ: ನರ್ಸ್ ಅರುಣಾ ಶಾನಭಾಗ್‌ಗೆ 2011ರಲ್ಲಿ ದಯಾಮರಣಕ್ಕೆ ಅನುಮತಿ ನೀಡಿದ್ದ ಸುಪ್ರೀಂಕೋರ್ಟ್ ಈಗ ಜೀವಿತ ಉಯಿಲು (ಲಿವಿಂಗ್ ವಿಲ್)ಕ್ಕೂ ಅವಕಾಶ ನೀಡುವ ಸುಳಿವು ನೀಡಿದೆ.ಆದರೆ, ಈ ಲಿವಿಂಗ್ ವಿಲ್ ಅಥವಾ ಜೀವಿತ ಉಯಿಲು ರೂಪಿಸಲು ವಿರೋಧಿಸಿರುವ ಕೇಂದ್ರ ಸರಕಾರ, ಈಗಾಗಲೇ ಸಕ್ರಿಯ ದಯಾಮರಣ ಸಂಬಂಧ ಕರಡು ಮಸೂದೆ ಮಾಡಿರುವುದಾಗಿ ಹೇಳಿದೆ.
ಕಾಮನ್ ಕೇಸ್ ಎಂಬ ಎನ್‌ಜಿಒ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠ, ಗೌರವದಿಂದ ಬದುಕಬೇಕು ಎಂಬ ಹಕ್ಕಿರುವ ಹಾಗೆಯೇ ಅದೇ ಗೌರವದಿಂದ ಸಾಯುವ ಹಕ್ಕೂ ಬೇಕಲ್ಲವೇ ಎಂದು ಹೇಳಿತು. ಹಾಗಂತ, ಸಾಯುವ ಹಕ್ಕಿದೆ ಎಂದು ಯಾರು ಬೇಕಾದರೂ ಸಾಯುವ ಹಾಗಿಲ್ಲ. ಈ ಗೌರವಯುತ ಸಾವಿಗೂ ಒಂದು ಮಾರ್ಗ ಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿತು.
ಸುಪ್ರೀಂಕೋರ್ಟ್‌ನ ಈ ಅಭಿ ಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ, ನರ್ಸ್ ಅರುಣಾ ಶಾನುಭಾಗ್ ಪ್ರಕರಣದಲ್ಲಿ ಸಕ್ರಿಯ ದಯಾಮರಣಕ್ಕೆ ಅವಕಾಶ ನೀಡಲಾಗಿದೆ. ಕುಟುಂಬ ಸದಸ್ಯರ ಮನವಿ ಮೇರೆಗೆ ವೈದ್ಯಕೀಯ ಮಂಡಳಿ ದಯಾಮರಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಕೋಮಾಗೆ ಹೋಗುವ ಮುನ್ನ ರೋಗಿ ಬರೆದಿಡುವ ಲಿವಿಂಗ್ ವಿಲ್‌ನಿಂದ ಅನಾನುಕೂಲವೇ ಹೆಚ್ಚು ಎಂದು ವಾದಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ದಯಾಮರಣದ ಬಗ್ಗೆ ವೈದ್ಯಕೀಯ ಮಂಡಳಿಯೇ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಒಪ್ಪುವಂಥ ವಿಚಾರ. ಆದರೆ ಕೋಮಾಗೆ ಜಾರಿದ ವ್ಯಕ್ತಿಗೆ ಗೌರವಯುತವಾಗಿ ಸಾಯುವ ಹಕ್ಕು ಬೇಕಲ್ಲವೇ ಎಂದರು. ಇದಕ್ಕಾಗಿಯೇ ಲಿವಿಂಗ್ ವಿಲ್ ಅಥವಾ ಜೀವಿತ ಉಯಿಲು ಬರೆದಿಡಲು ಅವಕಾಶ ನೀಡಬೇಕು. ಇದರ ಆಧಾರದಲ್ಲೇ ದಯಾಮರಣದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಾದ ಮಂಡಿಸಿದರು.