ಕಾಲೇಜು ರಜೆ ಇರುವುದರಿಂದ ನನ್ನ ಊರಿನತ್ತ ಪ್ರಯಾಣ ಬೆಳೆಸಿದೆ. ಬಹಳ ದಿನ ಮನೆಯವರಿಂದ ದೂರ ಇದ್ದ ಕಾರಣ ಮನೆಯವರನ್ನು ಸೇರುವ ತವಕ ಹೆಚ್ಚಾಗಿತ್ತು. ಊರಿಗೆ ಹೋಗುವ ದಾರಿ ಸಮೀಪವಾದಂತೆ ಪ್ರಯಾಣದ ಮಧ್ಯೆ ಯಾಕೋ ಬಹಳ ಹೊತ್ತು ಬಸ್ ನಿಂತಿತ್ತು. ನಾನು ಏನಾಗಿದೆ ಎಂದು ಕಿಟಕಿಯಿಂದ ಇಣುಕಿ ನೋಡಿದರೆ ಅಲ್ಲೇ ದೂರದಲ್ಲಿ ಹಿಂಡು ಹಿಂಡಾಗಿ ನಿಂತಿದ್ದ ಜನರ ಗುಂಪು ಕಂಡೆ. ನಾನು ಕುಳಿತಿದ್ದ ಬಸ್‌ನ ಎಲ್ಲ ಜನರು ಆ ಗುಂಪಿನ ಕಡೆಗೆ ಓಡಿ ಹೋಗುವುದನ್ನು ಕಂಡು ನನಗೆ ಅಲ್ಲಿ ಏನಾಗಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿತ್ತು.
ಆದಕಾರಣ ನಾನು ಕೂಡ ಆ ಗುಂಪಿನತ್ತ ಓಡಿ ಹೋದೆ. ಅಲ್ಲಿ ಹೋಗಿ ನೋಡಿದರೆ ಸದ್ಯಕ್ಕಿರುವ ರೋಡು ಸಣ್ಣದಾಗಿದೆ ಎಂದು ರೋಡನ್ನು ಅಗಲೀಕರಣ ಮಾಡುವ ಸಲುವಾಗಿ ಆಕಾಶ ಎತ್ತರಕ್ಕೆ ತನ್ನ ರೆಂಬೆಕೊಂಬೆಗಳನ್ನು ಚಾಚಿ ಯಾರ ಆಸರೆ ಇಲ್ಲದೆ ಬೆಳೆದು ನಿಂತಿರುವ ಹೆಮ್ಮರಗಳನ್ನು ಕಡಿಸುವುದನ್ನು ಕಂಡು ಮನಸ್ಸಿಗೆ ನೋವು ಉಂಟಾಯಿತು.
ಮರಗಳಿಗೆ ಏನಾದರೂ ಮಾತನಾಡಲು ಬರುತ್ತಿದ್ದರೆ ಅವು ಹೀಗೆ ಹೇಳುತ್ತಿದ್ದವೆನೋ.. ಮಾನವ ನಾನು ನಿನಗೆ ದಣಿದಾಗ ನೆರಳು ನೀಡಿದೆ, ಹಸಿವು ಎಂದಾಗ ಹಣ್ಣು ನೀಡಿದೆ, ಕೆಲಮೊಮ್ಮೆ ಮೋಜುಮಸ್ತಿ ಮಾಡಲು ಅವಕಾಶ ನೀಡಿದ್ದೇ ತಪಾಯಿತೆ?, ನನ್ನ ಪಾಡಿಗೆ ನನಗೆ ಬದುಕಲು ಬಿಡಿ, ನೀವೂ ಕೂಡ ಬದುಕಿ. ನನ್ನಿಂದ ನಿಮ್ಮ ಜೀವ ಉಳಿವುದೆಂದು ಗೊತ್ತಿದ್ದರೂ ನನ್ನನ್ನು ಕತ್ತರಿಸುತ್ತೀದ್ದೀರಲ್ಲ?, ನಾನು ಸಾಯುವುದನ್ನು ದುರುಗುಟ್ಟಿ ನೋಡಿ, ನಿಮ್ಮ ಫೋನುಗಳಲ್ಲಿ ನಾನು ಸಾಯುವುದನ್ನು ರೆಕಾರ್ಡಿಂಗ್ ಮಾಡಿ ಸಂತೋಷ ಪಡುವುದು ಸರಿಯೇ?.
ಏನರ ಮಾನವ ನನ್ನನ್ನು ಅಭಿವೃದ್ಧಿಯ ಹೆಸರಿನಲ್ಲಿ ಏಕೆ ಕೊಲ್ಲುತ್ತಿರುವೆ. ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ ಎಂದು ತನ್ನ ಉಳಿವಿಗಾಗಿ ಕೇಳುತ್ತಿತ್ತೆನೋ? ಎನ್ನುವ ಹಾಗೆ ನನ್ನ ಮನಸ್ಸಿಗೆ ಅನ್ನಿಸಿತ್ತು. ಅಲ್ಲಿ ನಿಂತಿರುವ ಜನರಿಗೆ ತನ್ನನ್ನು ಕಾಪಾಡುವಂತೆ ಕೇಳುತ್ತಿತ್ತು ಎನ್ನುವ ರೀತಿಯಲ್ಲಿ ನನ್ನ ಕಣ್ಣಿಗೆ ಗೋಚರಿಸಿತು. ಅನಂತರ ಹೆಚ್ಚು ಜನರು ಸೇರುವುದನ್ನು ಗಮನಿಸಿದ ಅಧಿಕಾರಿಗಳು ಎಲ್ಲರೂ ಹೊರಡುವಂತೆ ಸೂಚಿಸಿದರು.
ಮತ್ತೆ ಪ್ರಯಾಣ ಮುಂದುವರೆದರೂ ನನಗೆ ಅಲ್ಲಿ ನಡೆದಿರುವ ಘಟನೆ ಕಣ್ಣು ಕಟ್ಟಿತು. ಮನಸ್ಸಿಗೆ ಅನ್ನಿಸಿದ್ದು ಹೀಗೆ ನಮ್ಮ ದೇಶವನ್ನು ಅಭಿವೃದ್ಧಿ ಪಡಿಸಲು ಗಿಡಮರಗಳನ್ನು ಕತ್ತರಿಸುವುದು ಅನಿವಾರ್ಯವೇ?. ಅಭಿವೃದ್ಧಿ ಎನ್ನುವ ಹೆಸರು ಬಳಸಿ, ಗಗನದೆತ್ತರ ಬೆಳೆದು ನಿಂತಿರುವ ಮರಗಳನ್ನು ಕಡಿಯುವುದು ಸರಿಯೇ? ಮೊದಲು ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಗಾದೆ ಇತ್ತು.
ಈಗ ತದ್ವಿರುದ್ಧವಾಗಿದೆ. ಕಾಡುಗಳನ್ನು ಅಳಿಸಿ ನಾಡನ್ನು ಬೆಳೆಸಿ ಎನ್ನುವ ಹಂತಕ್ಕೆ ಬಂದು ತಲುಪಿದೆ. ಏಕೆಂದರೆ ಹೆಮ್ಮರವಾಗಿ ಬೆಳೆದು ನಿಂತಿರುವ ಮರಗಳನ್ನು ಕಡಿದು, ರೋಡಿನ ಅಗಲೀಕರಣ, ಕಾಂಪ್ಲೆಕ್ಸ್, ಮಾಲ್, ಹೀಗೆ ಇನಾವುದೋ ಹೆಸರಿನ ಕಟ್ಟಡಗಳನ್ನು ಕಟ್ಟುವುದು ಎಷ್ಟರ ಮಟ್ಟಿಗೆ ಸರಿ?. ಇದಕ್ಕೆ ಅಭಿವೃದ್ಧಿ ಎನ್ನುವ ಹೆಸರು ನೀಡುವುದು ಸರಿಯೇ? ಎನ್ನುವ ಪ್ರಶ್ನೆಗಳು ಊರು ತಲಪುವವರೆಗೂ ನನಗೆ ಕಾಡಿದವು.
ಪರಿಸರವನ್ನು ಉಳಿಸಿ, ಬೆಳೆಸಿ, ಅದರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಈಗಲೇ ನಾವೆಲ್ಲರೂ ಪರಿಸರ ರಕ್ಷಣೆ ಮಾಡುವ ಕೆಲಸ ಮಾಡಬೇಕಾಗಿದೆ. ಇಲ್ಲವಾದಲ್ಲಿ ಇವತ್ತು ನಾವು ಮರಗಳನ್ನು ನಾಶ ಮಾಡಿದರೆ ಮುಂದೊಂದು ದಿನ ನಾವು ಜೀವಂತವಿರುವಾಗಲೇ ನರಕವನ್ನು ಕಾಣಬೇಕಾಗುತ್ತದೆ.
-ನೀಲಮ್ಮ ಹೊಸಮನಿ
ವಿ.ವಿ., ವಿಜಾಪುರ