Advertisement

ಸೋರಿಕೆ ತಡೆಯುವುದೇ ಸವಾಲು?

06:00 AM Aug 25, 2018 | Team Udayavani |

ಮಡಿಕೇರಿ : ಜಲ ಪ್ರಳಯಕ್ಕೆ ತುತ್ತಾಗಿ ನಿರಾಶ್ರಿತರಾಗಿರುವ ಕೊಡಗಿನ ಜನತೆಗೆ ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ಪ್ರಮಾಣದಲ್ಲಿ ಬಟ್ಟೆ  ಹಾಗೂ ಆಹಾರ ಸಾಮಗ್ರಿ ಸಂಗ್ರಹವಾಗುತ್ತಿದ್ದು  ದುರುಪಯೋಗವೂ ಹೆಚ್ಚಾಗುತ್ತಿದೆ.

Advertisement

ಹೊದಿಕೆ, ಹಾಸಿಗೆ ಸೇರಿದಂತೆ ವಿವಿಧ ಬಗೆಯ ಬಟ್ಟೆಗಳು, ಅಕ್ಕಿ, ಹಾಲು ಮತ್ತು ಸಕ್ಕರೆ ಮೊದಲಾದ ಆಹಾರ ಸಾಮಗ್ರಿಗಳು ಅಗತ್ಯಕ್ಕಿಂತಲೂ ಹೆಚ್ಚು ಸಂಗ್ರಹವಾಗುತ್ತಿದೆ. ಆದರೆ, ಸಂತ್ರಸ್ತರ ಹೆಸರಿನಲ್ಲಿ ಸಂಗ್ರಹ ಮಾಡುತ್ತಿರುವ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ.

ಕೊಡಗಿನ ನಿರಾಶ್ರಿತರಿಗೆ ನೀಡಲು ಟ್ರಕ್‌, ಟೆಂಪೋ, ಕಾರು ಮೊದಲಾದ ವಾಹನದಲ್ಲಿ ತರುವ ಸಾಮಗ್ರಿಗಳನ್ನು ಕಡ್ಡಾಯವಾಗಿ ಜಿಲ್ಲಾಡಳಿತ ಕಚೇರಿಯಲ್ಲಿ ನೋಂದಣಿ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಕೆಲವು ಸಂಘಟನೆಗಳು ನೋಂದಣಿ ಮಾಡಿಕೊಂಡಿಲ್ಲ. ಆದರೆ, ಸಾರ್ವಜನಿಕರಿಂದ ಅಗತ್ಯ ಸಾಮಗ್ರಿ ಹಾಗೂ ಹಣ ಸಂಗ್ರಹ ಮಾಡುತ್ತಿವೆ.

ಮತ್ತೂಂದೆಡೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ, ಕೆಲವರು ನೇರವಾಗಿ ನಿರಾಶ್ರಿತರ ಶಿಬಿರಕ್ಕೆ ಹೋಗಿ ಹಂಚುತ್ತಿದ್ದಾರೆ. ಹೆಸರಿಗೆ ಕೆಲವು ವಸ್ತುಗಳನ್ನು ಹಂಚಿಕೆ ಮಾಡಿ ಉಳಿದದ್ದನ್ನು ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಲಾಗಿದೆ.

ಜಿಲ್ಲೆಯ 51 ನಿರಾಶ್ರಿತರ ಕೇಂದ್ರದಲ್ಲಿ ಎಲ್ಲ ಬಗೆಯ ವಸ್ತುಗಳ ಸಂಗ್ರಹ ಇದೆ. ಆರು ತಿಂಗಳು ಸಂಗ್ರಹಿ ಇಡಬಲ್ಲ ವಸ್ತುಗಳನ್ನು ಜಿಲ್ಲಾಡಳಿತದ ಕಚೇರಿ ಮತ್ತು ತಾಹಸೀಲ್ದಾರ್‌ ಕಚೇರಿಯಲ್ಲಿ ಇಡಲಾಗಿದೆ. ಬಟ್ಟೆ, ಆಹಾರ ಪದಾರ್ಥ ಮೊದಲಾದ ಸೌಲಭ್ಯ ಪಡೆಯುವುದಕ್ಕಾಗಿಯೇ ಅನೇಕರು ನಿರಾಶ್ರಿತರ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿ ನೀಡುವ ವಸ್ತುಗಳನ್ನು ಪಡೆದು ನೇರವಾಗಿ ಮನೆಗೆ ಹೋಗುವವರೂ ಇದ್ದಾರೆ. ಹೊದಿಕೆ ಮತ್ತು ಹಾಸಿಗೆ ಸೇರಿದಂತೆ ವಿವಿಧ ಬಟ್ಟೆಗಳನ್ನು ಕೆಲವರು ಮೇಲಿಂದ ಮೇಲೆ ಕೇಳಿ ಪಡೆದು ಮನೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದಾರೆ .

Advertisement

ಹೊಸ ನೋಂದಣಿ ಇಲ್ಲ:
ಬಟ್ಟೆ ಹಾಗೂ ಆಹಾರ ಸಾಮಗ್ರಿ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಬಹುತೇಕ ನಿರಾಶ್ರಿತರ ಕೇಂದ್ರದಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಈಗಾಗಲೇ ನೋಂದಣಿಯಾಗಿರುವವರಿಗೆ ಮಾತ್ರ ಸಾಮಗ್ರಿಗಳನ್ನು ನೀಡಲು ನಿರ್ಧರಿಸಿದ್ದಾರೆ. ಪೊಲೀಸ್‌ ಅಧಿಕಾರಿಗಳು, ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದ ನಂತರಷ್ಟೇ ಹೊಸ ನೋಂದಣಿ ಮಾಡಿಕೊಳ್ಳಲಾಗುತ್ತದೆ ಮೈತ್ರಿ ಸಭಾಂಗಣದ ನಿರಾಶ್ರಿತರ ಕೇಂದ್ರ ಉಸ್ತುವಾರಿ ವಿಶ್ವನಾಥ್‌ ಮಾಹಿತಿ ನೀಡಿದರು.

ಶಿಬಿರದಲ್ಲಿ ಸಂಖ್ಯೆ ಇಳಿಮುಖ
ಜಿಲ್ಲೆಯ 51 ಶಿಬಿರದಲ್ಲೂ ನಿರಾಶ್ರಿತರ ಸಂಖ್ಯೆ ಇಳಿಮುಖವಾಗಿದೆ. ಬೆರಳೆಣಿಕೆಯಷ್ಟು ಸಂಖ್ಯೆಯ ನಿರಾಶ್ರಿತರು ತಮ್ಮ ಮನೆಗೆ ವಾಪಾಸ್‌ ಹೋಗಿದ್ದಾರೆ. ಅನೇಕರು ಮಡಿಕೇರಿ ನಗರ, ಮೈಸೂರು, ಚಾಮರಾಜಪೇಟೆ, ಮಂಗಳೂರು, ಸುಳ್ಯ, ಬೆಂಗಳೂರು ಮೊದಲಾದ ಭಾಗದಲ್ಲಿ ಇರುವ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಮನೆ ಹಾನಿ ಮತ್ತು ಜಮೀನು ಹಾನಿ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಿ ಸಂಬಂಧಿಕರ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.  ಮೈತ್ರಿ ಸಭಾಂಗಣದಲ್ಲಿ  ಮೊದಲ ದಿನ 900ಕ್ಕೂ ಅಧಿಕ ನಿರಾಶ್ರಿತರು ನೋಂದಣಿ ಮಾಡಿಕೊಂಡಿದ್ದರು. ಶುಕ್ರವಾರ ನಿರಾಶ್ರಿತರ ಸಂಖ್ಯೆ 375ಕ್ಕೆ ಇಳಿಕೆಯಾಗಿದೆ. ಇದೆ ಸ್ಥಿತಿ ಎಲ್ಲ ನಿರಾಶ್ರಿತರ ಕೇಂದ್ರದಲ್ಲೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next