Advertisement

ಶಿಶುಕಾಮ/ಮಕ್ಕಳ ಕಳ್ಳ ಸಾಗಾಣಿಕೆ; ಸತ್ಯ ಘಟನೆ ಆಧರಿತ ಚಿತ್ರ “ಐ ಯಾಮ್ ಆಲ್ ಗರ್ಲ್ಸ್”

01:13 PM Jul 30, 2021 | ಅರವಿಂದ ನಾವಡ |

ಆಫ್ರಿಕಾ ರಾಷ್ಟ್ರದಲ್ಲಿನ ಮಾನವ ಕಳ್ಳ ಸಾಗಾಣಿಕೆ ಸಮಸ್ಯೆಯ ಎಳೆಯನ್ನು ಸತ್ಯ ಘಟನೆಯ ಹಿನ್ನೆಲೆಯಲ್ಲಿ ಹೇಳಲು ಪ್ರಯತ್ನಿಸಿರುವುದೇ ಐ ಯಾಮ್‌ ಆಲ್‌ ಗರ್ಲ್ಸ್ ಚಿತ್ರ. ಸಮಸ್ಯೆಯ ಭೀಕರತೆಯನ್ನು ಅರ್ಥ ಮಾಡಿಕೊಳ್ಳಲು ಈ ಸಿನಿಮಾ ನೋಡಬೇಕು.

Advertisement

ಆಫ್ರಿಕಾ ರಾಷ್ಟ್ರದಲ್ಲಿನ ಮಾನವ ಕಳ್ಳಸಾಗಾಣಿಕೆ ಕುರಿತಾದ ಚಿತ್ರ ಐ ಯಾಮ್‌ ಆಲ್‌ ಗರ್ಲ್ಸ್‌. ದೊನೊವಾನ್ ಮಾರ್ಷ್ Donovon Marsh) ನಿರ್ದೇಶಿಸಿರುವ ಚಿತ್ರ. 107 ನಿಮಿಷಗಳ ಚಲನಚಿತ್ರ. ನಿರ್ದೇಶಕರು ಹೇಳುವ ಪ್ರಕಾರ ಇದು ಸತ್ಯ ಘಟನೆಗಳನ್ನು ಆಧರಿಸಿದ ಚಿತ್ರ. 1988-89 ರಲ್ಲಿ ಆಫ್ರಿಕಾ ರಾಷ್ಟ್ರದಲ್ಲಿ ಬೆಳಕಿಗೆ ಬಂದ ಕೆಲವು ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣ ಹಾಗೂ ಅದರಲ್ಲಿ ಪ್ರಭಾವಿಗಳ ಕೈವಾಡ ಬಹಿರಂಗಗೊಂಡಿತ್ತು. ಇದನ್ನೇ ಆಧರಿಸಿ ಕೆಲವು ಅಂಶಗಳನ್ನು ಸೇರಿಸಿಕೊಂಡು ಚಲನಚಿತ್ರವನ್ನು ಮಾಡಲಾಗಿದೆ. ಹಾಗೆಂದು ಮಾನವ ಕಳ್ಳ ಸಾಗಾಣಿಕೆ ವಿಷಯ ಹೊಸದೇನೂ ಅಲ್ಲ. ಈಗಾಗಲೇ ಸಾಕಷ್ಟು ಚಿತ್ರಗಳು [ವಿಶಲ್ ಬ್ಲೋವರ್, ಟೇಕನ್, ನಾಟ್ ಮೈ ಲೈಫ್ ಇತ್ಯಾದಿ] ಬಂದಿವೆ. ಆದರೆ ಇದು ಒಂದು ಸತ್ಯಘಟನೆಯ ಹಿನ್ನೆಲೆಯಲ್ಲಿ ಥ್ರಿಲ್ಲರ್ ಮಾದರಿಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿರುವುದು ವಿಶೇಷ.

ಚಲನಚಿತ್ರದ ಹಿನ್ನೆಲೆಯೆಂದರೆ, 2018 ರ ಅಂತಾರಾಷ್ಟ್ರೀಯ ಸಂಸ್ಥೆಯೊಂದರ ವರದಿ ಪ್ರಕಾರ ಆಫ್ರಿಕಾದ ಶೇ. 23 ರಷ್ಟು ಮಂದಿ ಈ ಮಾನವ ಕಳ್ಳ ಸಾಗಾಣಿಕೆ, ಗುಲಾಮಿತನಕ್ಕೆ ಗುರಿಯಾಗುತ್ತಿದ್ದರು. ಇವರ ಪೈಕಿ ಮಕ್ಕಳ ಸಂಖ್ಯೆಯೂ ಸಾಕಷ್ಟಿದೆ. ಇವರಲ್ಲಿ ಬಹುತೇಕರು ಬಳಕೆಯಾಗುವುದು ಜೀತದಾಳುಗಳಾಗಿ. ಶಿಶುಕಾಮ ಅಲ್ಲಿ ಬೆಳೆಯುತ್ತಿರುವ ಮತ್ತೊಂದು ಭೀಕರ ಸಮಸ್ಯೆ. ಆದರೂ ಈ ಸಮಸ್ಯೆಯನ್ನು ಆಫ್ರಿಕಾ ರಾಷ್ಟ್ರಗಳು ಹತ್ತಿಕ್ಕುವಲ್ಲಿ ಶ್ರಮಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಸಾವಿರಾರು ಸಂಸ್ಥೆಗಳು ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಡುತ್ತಿವೆ.

ಈ ಚಲನಚಿತ್ರವೂ ಚರ್ಚಿಸುವುದು ಇದೇ ಸಮಸ್ಯೆಯನ್ನು. ದಂಪತಿಯೊಂದು ಕಾಣದ ಕೈಗಳ ಸೂಚನೆಯನ್ನು ಪಾಲಿಸುತ್ತಾ ಈ ಕೃತ್ಯ ಎಸಗುತ್ತಿರುತ್ತದೆ. 6 ಪ್ರಕರಣ ಬೆಳಕಿಗೆ ಬಂದರೂ, ಇದೇ ತಂಡ 40 ಕ್ಕೂ ಹೆಚ್ಚು ಮಕ್ಕಳನ್ನು ಹೀಗೇ ಕೊಂದಿದೆ ಎಂಬ ಶಂಕೆಯಿತ್ತು. ಹೀಗೆ ಮಕ್ಕಳನ್ನು ಅಪಹರಿಸಿ ತೈಲಕ್ಕಾಗಿ ಇರಾನ್ ಮತ್ತಿತರ ರಾಷ್ಟ್ರಗಳಿಗೆ ಮಾರಲಾಗುತ್ತಿತ್ತು. ಒಮ್ಮೆ ಆರು ಪುಟ್ಟ ಹೆಣ್ಣುಮಕ್ಕಳು ಕಾಣೆಯಾದ ಪ್ರಕರಣ ಜೋಹಾನ್ಸ್ ಬರ್ಗ್‌ನಲ್ಲಿ ಬೆಳಕಿಗೆ ಬರುತ್ತದೆ. ಆ ಪೈಕಿ ಒಂದು ಪ್ರಕರಣದ ಬೆನ್ನು ಹತ್ತಿದ ತನಿಖಾಧಿಕಾರಿ ಜೂಡಿ ನೈಮನ್ [ಎರಿಕಾ ವೆಸೆಲ್ಸ್] ಗೆ ಪ್ರಕರಣದ ಗಂಭೀರತೆ ಅರಿವಿಗೆ ಬಂದಾಗ ಕಂಗಾಲಾಗುತ್ತಾಳೆ. ತನ್ನದೇ ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಜೂಡಿಗೆ ಈ ಪ್ರಕರಣ ಇನ್ನಷ್ಟು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಆದರೂ ತನಿಖೆ ಕುರಿತು ಆಸಕ್ತಿ ತಾಳುವ ಜೂಡಿ, ಪ್ರಕರಣದ ಮೊದಲನೇ ಸುಳಿವನ್ನು ಪತ್ತೆ ಹಚ್ಚಿದಾಗ ದಂಗಾಗುತ್ತಾಳೆ.

Advertisement

ಆ ಪ್ರಕರಣದಲ್ಲಿ ಅಜ್ಜನೇ ತನ್ನ ಮೊಮ್ಮಗಳೊಂದಿಗೆ ಶಿಶುಕಾಮದಲ್ಲಿ ತೊಡಗಿರುವ ಸಂಶಯ ಬರುತ್ತದೆ. ತದನಂತರ ಪ್ರಕರಣ ಮತ್ತಷ್ಟು ತೆರೆದುಕೊಳ್ಳುತ್ತದೆ. ಇಡೀ ಹಗರಣಕ್ಕೆ ಕೆಲವು ಸ್ಥಳೀಯ ಸಚಿವರ ಸಹಕಾರವೂ ಇದೆ ಎಂಬುದು ಬಯಲಿಗೆ ಬರುತ್ತದೆ. ಆದರೂ ಏನೂ ಮಾಡಲಾಗದ ಅಸಹಾಯಕತೆ [ಸಾಕ್ಷ್ಯಗಳ ಕೊರತೆಯಿಂದ] ಯಿಂದ ಬಿಕ್ಕಳಿಸುತ್ತಾಳೆ.

ಸಾಕ್ಷ್ಯವಿಲ್ಲದ್ದಕ್ಕೆ ಜೂಡಿಯ ಮುಖ್ಯಸ್ಥ ಜಾರ್ಜ್ [ಮೊಥುಸಿ ಮೊಗನೊ] ತನಿಖೆ ಮುಂದುವರಿಸಲು ಒಪ್ಪುವುದಿಲ್ಲ. ಜತೆಗೆ ಪ್ರಕರಣದ ಬಗ್ಗೆ ಹೆಚ್ಚು ಯೋಚಿಸಿ ನಿನ್ನ ಮಾನಸಿಕ ಸ್ಥಿತಿಯನ್ನು ಹಾಳು ಮಾಡಿಕೊಳ್ಳುತ್ತೀದ್ದೀಯಾ, ರಜೆ ತೆಗೆದುಕೊಳ್ಳಲು ಹೇಳುತ್ತಾನೆ. ಅದಕ್ಕೆ ಜೂಡಿ ಒಪ್ಪದಿದ್ದಾಗ ಕಡ್ಡಾಯವಾಗಿ ರಜೆ ನೀಡುತ್ತಾನೆ. ಅನಿವಾರ್ಯವಾಗಿ ತನ್ನನ್ನು ತಾನು ಬಂಧಿಸಿಕೊಂಡಂತೆ ಚಡಪಡಿಸುತ್ತಾಳೆ. ಅಷ್ಟರಲ್ಲಿ ಹೊಸ ಸುಳಿವು ಸಿಕ್ಕಿ ಮತ್ತೆ ತನಿಖೆಯ ಹಿಂದೆ ಬೀಳುತ್ತಾಳೆ. ಇನ್ನೊಂದು ನೆಲೆಯಲ್ಲಿ ಮತ್ತೊಬ್ಬಳು ತೊಂಬಿಜೊಂಕ್ ಬಪೈ [Ntombizonke Bapai] ತನಿಖಾಧಿಕಾರಿಗಿಂತ ಮೊದಲೇ ಈ ಹಗರಣದ ರೂವಾರಿಗಳಾದ ಒಬ್ಬೊಬ್ಬರನ್ನೇ ಕೊಲ್ಲುತ್ತಾ ಬರುತ್ತಾಳೆ. ಕೊನೆಗೂ ತನ್ನ ಗುರಿಯನ್ನು [ಮುಖ್ಯ ರೂವಾರಿ] ತಲುಪುತ್ತಾಳೆ. ಅವಳೂ ಈ ಸಮಸ್ಯೆಯನ್ನು ಎದುರಿಸಿದವಳೇ.

ಸೈಕಲಾಜಿಕಲ್ ಥ್ರಿಲ್ಲರ್ ಜಾನರ್ ನಲ್ಲಿರುವ ಸಿನಿಮಾವಿದು. ಜೂಡಿ ಅತ್ಯಂತ ಪರಿಣಾಮಕಾರಿಯೆನ್ನುವ ಹಾಗೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜತೆಗೆ ಮತ್ತೊಂದು ಎಳೆಯಲ್ಲಿ ಸಾಗುವ ತೊಂಬಿಜೊಂಕ್ ಬಪೈ [Hlubi Mboya) ಜೂಡಿಗೆ ಸರಿಸಾಟಿಯೆನ್ನುವಂತೆ ಅಭಿನಯಿಸಿದ್ದಾರೆ. ಇವರ ಕ್ಯಾಪ್ಟನ್ ಆಗಿರುವ ಮೊಥುಸಿ ಮೊಗನೊ ರದ್ದು ಸಮರ್ಥವಾದ ನಟನೆಯಿದೆ. ಈ ಮೂವರೇ ಇಡಿ ಸಿನಿಮಾವನ್ನು ಮುನ್ನಡೆಸುತ್ತಾರೆ. ಒಂದು ಸನ್ನಿವೇಶ ಇಡೀ ಸಮಸ್ಯೆಯ ಗಂಭೀರತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಆ ಸನ್ನಿವೇಶ ಬಹಳ ಇಷ್ಟವಾಗುತ್ತದೆ. ಪ್ರಕರಣದ ತೀವ್ರತೆಯನ್ನು ಮೊದಲಿಗೆ ಒಪ್ಪಿಕೊಳ್ಳದ ತನಿಖಾ ತಂಡದ ಮುಖ್ಯಸ್ಥ, ಪ್ರಕರಣದ ಆಳಕ್ಕೆ ಹೋದಂತೆ ಅವನನ್ನು ಯಾವ ಮಟ್ಟಿಗೆ ತಟ್ಟುತ್ತದೆ ಎಂದರೆ, ಜೂಡಿ ಮಕ್ಕಳನ್ನು ಕೂಡಿ ಹಾಕಿರುವ ಒಂದು ಜಾಗವನ್ನು ಪತ್ತೆ ಹಚ್ಚುತ್ತಾಳೆ. ಅದನ್ನು ನೋಡಿ ಭಯಗೊಳ್ಳುವ ಕ್ಯಾಪ್ಟನ್ ತತ್‌ಕ್ಷಣ ತನ್ನ ಮನೆಯಲ್ಲಿನ ಮಕ್ಕಳ ಬಗ್ಗೆ ಆತಂಕಗೊಂಡು ದಡಬಡಾಯಿಸಿ ಮನೆಗೆ ಬರುತ್ತಾನೆ. ತನ್ನ ಮಕ್ಕಳನ್ನೂ ಅಪಹರಿಸಿರಬಹುದೆಂಬ ಆತಂಕ ಅವನನ್ನು ಆವರಿಸಿರುತ್ತದೆ. ಮನೆಗೆ ಬಂದವನೇ ಮಕ್ಕಳಿಗೆ ಒಳಗಿರಿ, ಬರಬೇಡಿ ಎಂದು ಹೇಳುವಾಗ ಅವನಿಗಾದ ಆಘಾತ ವ್ಯಕ್ತವಾಗುತ್ತದೆ.

ಶಿಶುಕಾಮದಂಥ ಗಂಭೀರ ಸಮಸ್ಯೆಯನ್ನು ವಿವರಿಸುವ ಚಿತ್ರದಲ್ಲಿ ಕೆಲವು ಬೆಳೆಸಬಹುದಾದ ಪಾತ್ರಗಳು ಮತ್ತು ವಿವರಗಳು ಕಡಿಮೆಯಾಗುವ ಹಿನ್ನೆಲೆಯಲ್ಲಿ ಒಂದು ನಿರ್ದಿಷ್ಟ ಪ್ರಕರಣದ ಕಥೆ ಎನ್ನಿಸಿ ಗತಿ ಕೊಂಚ ಮಂದವೆನಿಸುತ್ತದೆ. ಕಥೆ ಬೆಳೆಯುವ ಸಾಧ್ಯತೆ ಇದ್ದರೂ ಹೆಚ್ಚಾಗಿ ನಿರೀಕ್ಷಿತ ತಿರುವುಗಳಲ್ಲಿ ತಿರುಗುತ್ತಿದೆ ಎಂದು ಕೆಲವೆಡೆ ಅನಿಸುತ್ತದೆ.

ಬಹಳ ಕ್ಲಿಷ್ಟವಾದ ಮತ್ತು ಸಂಕೀರ್ಣವಾದ ಕಥಾವಸ್ತುವನ್ನು ಹೆಚ್ಚು ವಿವರವಾಗಿ ಹೇಳಲೆಂಬ ಹಂಬಲ ಚಿತ್ರದಲ್ಲಿ ತೋರುತ್ತದೆ, ಆದರೆ ಮನಸ್ಸಿನಾಳಕ್ಕೆ ಇಳಿಯುವಲ್ಲಿ ತೊಡಕನ್ನು ಎದುರಿಸುತ್ತದೆ. ಹಾಗಾಗಿ ಈ ಸಿನಿಮಾ ತನ್ನ ನಿರೂಪಣೆಗಿಂತ ನಿರ್ದಿಷ್ಟ ಪಾತ್ರಗಳ ಪರಿಣಾಮಕಾರಿ ಅಭಿನಯದ ಮೂಲಕವೇ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸುವುದು ಸ್ಪಷ್ಟ. ಎಲ್ಲೂ ಡಾಕ್ಯುಮೆಂಟರಿ ಎನಿಸದು. ಒಂದು ಸಾಮಾಜಿಕ ಸಮಸ್ಯೆಯನ್ನು ಥ್ರಿಲ್ಲರ್ ಶೈಲಿಯಲ್ಲಿ ಹೇಳಿರುವ ಚಿತ್ರವನ್ನು ಒಮ್ಮೆ ನೋಡಬಹುದು.

*ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next