ಮಾನವ ಎಷ್ಟು ಸ್ವಾರ್ಥಿ ಜೀವಿ ಎನ್ನುವುದು ಪ್ರಕೃತಿಯ ಮೇಲಿನ ಪ್ರಹಾರದಿಂದಲೇ ಕಾಣಬಹುದು. ಪ್ರಾಣಿ – ಪಕ್ಷಿ ಸಂಕುಲವನ್ನೇ ನಿರ್ನಾಮ ಮಾಡಿ ತಾನು ಐಷರಾಮಿ ಜೀವನವನ್ನು ಬಯಸುವ ಆತನ ಸ್ವಾರ್ಥಕ್ಕೆ ನಮ್ಮ ಸುತ್ತಮುತ್ತಲಿನ ಹಸುರ ವೈವಿಧ್ಯತೆ ಬಲಿಯಾಗುತ್ತಿದೆ. ಜಗತ್ತಿನಲ್ಲಾಗುವ ಬದಲಾವಣೆ ಮತ್ತು ಅಭಿವೃದ್ಧಿಯ ನೆಪದಲ್ಲಿ ಭೂಮಿಯೂ ಕೂಡ ತನ್ನ ಸ್ವರೂಪವನ್ನು ಕಳೆದುಕೊಳ್ಳುವುದಲ್ಲದೇ ಬರಿದಾಗುತ್ತಾ ಬಹುದೊಡ್ಡ ವಿನಾಶಕ್ಕೂ ಕಾರಣವಾಗಿದೆ.
ಆದರೆ ಪ್ರಕೃತಿಯಿಂದ ಎಲ್ಲ ಪಡೆಯುತ್ತಿರುವ ನಾವುಗಳು ನಮ್ಮನ್ನು ನಾವು ಎಂದಾದರೂ ಪ್ರಶ್ನಿಸಿಕೊಂಡಿದ್ದೇವೆಯಾ? ನಮಗೆ ಉಸಿರಾಡಲು ಗಾಳಿ ಮತ್ತು ಕುಡಿಯಲು ನೀರು ನೀಡುತ್ತಿರುವ ಅದರ ಮಡಿಲಿಗೆ ನಾವೇನು ನೀಡುತ್ತಿದ್ದೇವೆ? ಎನ್ನುವುದನ್ನು ಯೋಚಿಸಿದ್ದೇವೆಯೇ? ಎಲ್ಲವನ್ನು ನೀಡುವ ಪ್ರಕೃತಿಯ ಮೇಲೆ ದೌರ್ಜನ್ಯದ ಹೊಡೆತವೇಕೆ ನಡೆಯುತ್ತಿದೆ?
ಪ್ರಕೃತಿಯ ವರದಾನದಿಂದ ಬದುಕುತ್ತಿರುವ ಮಾನವನು ಎಲ್ಲವನ್ನು ಮರೆತು ದುರಾಸೆಯಿಂದ ಆತ ತನ್ನ ಅವನತಿಗೆ ತಾನೇ ದಾರಿ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಅಲ್ಲವೇ?
ಹಿಂದೆ ನಮ್ಮ ಸುತ್ತ ಮುತ್ತಲಿನ ಪ್ರಕೃತಿಯ ಸೌಂದರ್ಯವೇ ಅವರ್ಣಿಯವಾಗಿತ್ತು. ಕಾಡು-ನಾಡು ತುಂಬಾ ಹಚ್ಚ ಹಸುರಿನಿಂದ ಕೂಡಿದ್ದು, ಕಾಲಕ್ಕೆ ತಕ್ಕಂತೆ ಸುರಿಯುವ ಮಳೆ, ನೀರನ್ನು ಹೀರಿ ಪ್ರವಾಹವನ್ನು ತಡೆಯುವ ಮರಗಳು ಎಷ್ಟೊಂದು ಕ್ರಮಾಗತವಾಗಿ ನಡೆಯುತಿತ್ತು.ಆದರೆ ಇಂದು ಕಾಡುಗಳು ಬೋಳಾಗುತ್ತಿದೆ. ಬರೀ ಮಣ್ಣು ತುಂಬಿದ ಪ್ರದೇಶಗಳು ಹೆಚ್ಚಾಗುತ್ತಿರುವ ಕಾರಣ ಹವಾಮಾನದ ಬದಲಾವಣೆಯ ಪರಿಣಾಮವು ನಮ್ಮ ಮೇಲೆ ಅತಿಯಾದ ಪ್ರಭಾವವನ್ನು ಬೀರಿದೆ. ಪ್ರಕೃತಿಯ ಮೇಲಿನ ದೌರ್ಜನ್ಯದಿಂದ ಚಿತ್ರಣವೇ ಬದಲಾಗಿ ಹೋಗಿರುವುದು ಬೇಸರದ ಸಂಗತಿ. ಅಭಿವೃದ್ಧಿಯ ನೆಪದಲ್ಲಿ ಮಾನವನು ಜಗತ್ತಿನ ವಿನಾಶಕ್ಕೆ ಹೆಜ್ಜೆ ಹೆಜ್ಜೆಗೂ ಕಾರಣವಾಗುತ್ತಿದ್ದಾನೆ. ಪ್ರಾಣಿ, ಪಕ್ಷಿ – ಜೀವ ಸಂಕುಲಗಳನ್ನು ಹೊಂದಿರುವ ಈ ಸುಂದರ ಭೂಮಿಯಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ನೆಲೆಯಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕಿದೆ ಎಂಬುದನ್ನು ಏಕೆ ಅರಿಯುತ್ತಿಲ್ಲ. ತನ್ನ ಸ್ವಾರ್ಥವನ್ನು ಜೀವ ಸಂಕುಲ ಮೇಲೆ ತೋರುವುದು ಎಷ್ಟು ಸರಿ.
ನಮ್ಮ ಸುತ್ತಮುತ್ತಲಿನ ಸಾವಿರಾರು ಜೀವ ಸಂಕುಲಗಳು ತನ್ನದೇ ವ್ಯವಸ್ಥಿತವಾದ ವಾಸ ಸ್ಥಾನದಲ್ಲಿ ಬದುಕು ಕಟ್ಟಿ ತನ್ನದೇ ಜೀವನವನ್ನು ಸಾಗಿಸುತ್ತಿದೆ. ಮಾನವನು ತನ್ನದೇ ವಾಸಸ್ಥಾನಗಳನ್ನು ನಿರ್ಮಿಸಿ ವಾಸಿಸಿದರೆ, ಪ್ರಾಣಿ ಪಕ್ಷಿಗಳು ನೈಸರ್ಗಿಕ ಪರಿಸರದಲ್ಲಿ ತನ್ನ ಜೀವಮಾನವನ್ನು ಕಳೆಯುತ್ತದೆ. ವೈವಿಧ್ಯಮಯ ಮರ ಗಿಡಗಳ ಆಸರೆಯಲ್ಲಿ ಬೆಳೆದ ಪ್ರಾಣಿ – ಪಕ್ಷಿಗಳ ಪಯಣ ಇಂದು ಕಾಡಿನಿಂದ ನಗರ- ಪಟ್ಟಣಗಳ ಕಡೆಗೆ ಸಾಗುತ್ತಿದೆ. ಕಾರಣ ಅರಣ್ಯಗಳ ಮೇಲೆ ಮನುಷ್ಯನ ಕೆಟ್ಟ ದೃಷ್ಟಿ. ಹಸುರ ಆಸರೆಯಲ್ಲಿ ಬದುಕುತ್ತಿದ್ದ ಜೀವ ಸಂಕುಲಗಳ ವಾಸಸ್ಥಾನವಾದ ಅರಣ್ಯ ಇಂದು ಕೊಡಲಿ ಏಟಿಗೆ ಬಲಿಯಾಗಿದೆ. ಕರಿ ದಾರಿಗಳು ಕಾನನದ ಮದ್ಯೆ ಹಾದು ಹೋಗಿ ಅದೆಷ್ಟೋ ಆಸರೆಯಾದ ಗೂಡುಗಳನ್ನು ಕೆಡವಿದೆ. ಎಲ್ಲವೂ ನಾಶವಾಗಿ ಇರಲು ಸ್ಥಳವಿಲ್ಲದೇ ತಿನ್ನಲು ಆಹಾರವಿಲ್ಲದೆ ಅಲೆದಾಡುತ್ತ ಕಾಡಿನಿಂದ ಊರಿನ ಕಡೆಗೆ ಹೆಜ್ಜೆ ಹಾಕುತ್ತಿವೆ.
ದಿನ ಪತ್ರಿಕೆಗಳನ್ನು ತೆರೆದರೆ ಸಾಕು ತೋಟಗಳಿಗೆ ಕಾಡನೆಗಳ ದಾಳಿ, ನಗರ ವಲಯದಲ್ಲಿ ಚಿರತೆ ಪ್ರತ್ಯಕ್ಷ ಇಂತಹ ಸುದ್ದಿಗಳೇ ಹೆಚ್ಚು. ಅವುಗಳ ತಪ್ಪೇನಾದರೂ ಏನು? ಮೂಕ ಪ್ರಾಣಿಗಳಾದ ಅವುಗಳಿಗೆ ದುರಾಸೆ ತುಂಬಿದ ಮಾನವನ ಜತೆಗೆ ವಾಸಸ್ಥಾನ ದ ಹೋರಾಟದಲ್ಲಿ ಗೆಲ್ಲಲಾಗದೆ ಇರಲು ಸ್ಥಾನವಿಲ್ಲದೆ ಅಲೆದಾಡುತ್ತ ನಮ್ಮ ನಗರ ಪಟ್ಟಣಗಳತ್ತ ಬರುತ್ತಿದೆ. ಅವುಗಳ ವಾಸಸ್ಥಾನವನ್ನು ಕಸಿದುಕೊಂಡು ನಮ್ಮ ಸ್ಥಾನಕ್ಕೆ ಬರುವಾಗ ಅಟ್ಟಿಸಿಬಿಡುವುದು ನಿಜಕ್ಕೂ ಬೇಸರದ ಸಂಗತಿ.
ಪರಿವರ್ತನೆಯನ್ನು ಬಯಸುವ ಮಾನವನು ಜೀವ ಸಂಕುಲದ ಬಗ್ಗೆ ಏಕೆ ಯೋಚಿಸುವುದಿಲ್ಲ. ಭಾವನೆಗಳಿಗೆ ಸ್ಪಂದಿಸುವ ಮಾನವನು ಪ್ರಾಣಿಗಳ ವೇದನೆಯನ್ನೇಕೆ ಕೇಳನು. ಮಾನವನು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಪ್ರಕೃತಿಯ ಉಳಿವಿಗೆ ಮುಂದಾಗಬೇಕು. ಪ್ರಕೃತಿ ಇದ್ದರೆ ಮಾತ್ರ ತನ್ನ ಉಸಿರೆ ಎಂಬ ವಿಚಾರ ವನ್ನು ಅರಿತು ನಮ್ಮ ಈ ಸುಂದರ ಜೀವ ಸಂಕುಲವನ್ನು ಬೆಳೆಸಿ ಮುಂದಿನ ಪೀಳಿಗೆಗೂ ಉಳಿಸುವ ಕಾರ್ಯ ನಮ್ಮದಾಗಬೇಕು.
ವಿಜಯಲಕ್ಷ್ಮೀ ಬಿ. ಕೆಯ್ಯೂರು, ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು