ಒಂದು ಸಲ ಹಾಸ್ಟೆಲ್‌ನ ಬಚ್ಚಲು ಮನೆಯಲ್ಲಿ ಶಿಳ್ಳೆ ಹೊಡೆಯುತ್ತ ಸ್ನಾನ ಮಾಡುತ್ತಿರಬೇಕಾದರೆ, ಹೊರಗೆ ಸಾಲಿನಲ್ಲಿ ನಿಂತ ಕೆಲ ಹುಡುಗಿಯರು ನನ್ನನ್ನು ಪ್ರಶಂಸಿಸಿದ್ದರು. ಇನ್ನು ಕೆಲವರು, ಹಾಸ್ಟೆಲ್ ಲೀಡರ್‌ಗೆ ಕಂಪ್ಲೇಂಟ್ ಕೊಟ್ಟು ಅವಳನ್ನೂ ಅಲ್ಲಿಗೆ ಕರೆ ತಂದಿದ್ದರು! ಆಗ ನನಗೆ, ಶಿಳ್ಳೆ ಹೊಡೆಯುವುದು ನನ್ನ ಪ್ರತಿಭೆಯೋ ಅಥವಾ ಕೆಟ್ಟ ಚಾಳಿಯೋ ಎಂದು ಗೊಂದಲವಾಯ್ತು…
ಶಿಳ್ಳೆ ಹೊಡೆಯುವುದು ಎಂದೊಡನೆ, ಅಪಾರ್ಥ ಮಾಡಿಕೊಳ್ಳುವ ಜನರೇ ಹೆಚ್ಚು. ಶಿಳ್ಳೆ ಎಂಬುದು ಲೈಂಗಿಕ ಪ್ರಚೋದನೆಗೆ ಸಂಬಂಧಪಟ್ಟಿದ್ದು ಎಂಬ ಭಾವ ಮೂಡುತ್ತದೆ. ವ್ಯಕ್ತಿಯ ಮನೋಭಾವ ಕೊಂಚ ಮೇಲ್ಮಟ್ಟದ್ದಾದರೆ, ಸಿನಿಮಾ ಥಿಯೇಟರ್‌ನಲ್ಲಿ ನಾಯಕ/ನಾಯಕಿ ಎಂಟ್ರಿ ಆದಾಗ ಹೊಡೆಯುವ ಶಿಳ್ಳೆ ನೆನಪಾಗುತ್ತದೆ. ಆದರೆ, ಹುಡುಗಿಯೊಬ್ಬಳು ಶಿಳ್ಳೆ ಹೊಡೆಯುವುದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಠಿಣವೇ ಸರಿ. ಆ ಹುಡುಗಿ ತುಂಬಾ “ಜೋರು’ ಎಂಬ ಪಟ್ಟವಂತೂ ಕಟ್ಟಿಟ್ಟ ಬುತ್ತಿ!
ಚಿಕ್ಕಂದಿನಿಂದಲೂ ನನಗೆ ಕೊಳಲು ಕಲಿಯಬೇಕೆಂಬ ಆಸೆ ಇತ್ತು. ಆದರೆ ಕಲಿಯುವ ಅವಕಾಶ ದೊರೆಯದೇ, ಆಸೆ ಎದೆಯಾಳದಲ್ಲಿ ಉಳಿಯಿತು. ಅದರ ಪ್ರತಿಫಲವಾಗಿ ನಾನು ಶಿಳ್ಳೆ ಹೊಡೆಯುವುದನ್ನು ಕಲಿತೆ. ಎಷ್ಟರ ಮಟ್ಟಿಗೆ ಎಂದರೆ, ಬಹುತೇಕ ಎಲ್ಲ ಹಾಡುಗಳನ್ನೂ ಅವುಗಳ ಧಾಟಿಯಲ್ಲೇ ಶಿಳ್ಳೆಯ ದನಿಯಲ್ಲೇ ಕೇಳಿಸಬಲ್ಲೆ.
ಒಂದು ಸಲ ಹಾಸ್ಟೆಲ್‌ನ ಬಚ್ಚಲು ಮನೆಯಲ್ಲಿ ಶಿಳ್ಳೆ ಹೊಡೆಯುತ್ತ ಸ್ನಾನ ಮಾಡುತ್ತಿರಬೇಕಾದರೆ, ಹೊರಗೆ ಸಾಲಿನಲ್ಲಿ ನಿಂತ ಕೆಲ ಹುಡುಗಿಯರು ನನ್ನನ್ನು ಪ್ರಶಂಸಿಸಿದ್ದರು. ಇನ್ನು ಕೆಲವರು, ಹಾಸ್ಟೆಲ್ ಲೀಡರ್‌ಗೆ ಕಂಪ್ಲೇಂಟ್ ಕೊಟ್ಟು ಅವಳನ್ನೂ ಅಲ್ಲಿಗೆ ಕರೆ ತಂದಿದ್ದರು! ಆಗ ನನಗೆ, ಶಿಳ್ಳೆ ಹೊಡೆಯುವುದು ನನ್ನ ಪ್ರತಿಭೆಯೋ ಅಥವಾ ಕೆಟ್ಟ ಚಾಳಿಯೋ ಎಂದು ಗೊಂದಲವಾಯ್ತು.
ಚಿಕ್ಕ ವಯಸ್ಸಿನಲ್ಲಿ ಶಿಳ್ಳೆ ಹೊಡೆಯುವುದನ್ನು ಕೇಳಿದ್ದ ಅಮ್ಮ ಏನೂ ತಕರಾರು ಎತ್ತಿರಲಿಲ್ಲ. ಬೆಳೀತಾ ಬೆಳೀತಾ ಹೆಚ್ಚು ಕಡಿಮೆ ಎಲ್ಲ ಸುಪ್ರಸಿದ್ಧ ಹಾಡುಗಳನ್ನು ಶಿಳ್ಳೆ ಹೊಡೆಯುವುದನ್ನು ಕಂಡು ಕೆಂಡಾಮಂಡಲರಾಗಿದ್ದರು. ಇವೆಲ್ಲ ಚಿಕ್ಕ ವಯಸ್ಸಿನಲ್ಲಷ್ಟೇ ಚಂದ ಎಂದು ಖಾರವಾಗಿ ಹೇಳಿದ್ದರು. ಬಹುತೇಕ ಎಲ್ಲ ಅಮ್ಮಂದಿರೂ ಹಾಗೇ ಹೇಳಿರುತ್ತಿದ್ದರು. ಇವೆರಡೂ ಘಟನೆಗಳಿಗೆ ವಿರುದ್ಧವಾದಂತೆ ನಡೆದ ಘಟನೆಯೆಂದರೆ, ಶಾಲೆಯಲ್ಲಿ¨ªಾಗ ಪಕ್ಷಿವೀಕ್ಷಣೆಗೆಂದು ಹೋದಾಗ, ಹಕ್ಕಿಗಳಂತೆ ಶಿಳ್ಳೆ ಹಾಕಿ ಗುರುಗಳಿಂದ ಶಹಬ್ಟಾಸ್‌ಗಿರಿ ಪಡೆದಿದ್ದು!
ಶಿಳ್ಳೆ ಹೊಮ್ಮಿಸುವುದರಿಂದ ಆರೋಗ್ಯಕ್ಕೂ ಲಾಭವಾಗುತ್ತದೆ ಅಂತ ಮಾತ್ರ ಇತ್ತೀಚೆಗೆ ತಿಳಿಯಿತು. ಅದೂ ವೈದ್ಯೆಯಾಗಿರುವ ಅಕ್ಕ ಹೇಳಿದಾಗಲೇ! ಆಕೆ ಹೇಳಿದಂತೆ, ಶಿಳ್ಳೆ ಹೊಡೆಯುವುದರಿಂದ ಏನೇನಾಗುತ್ತೆ ಗೊತ್ತಾ?
– ಇದು ಉಸಿರಾಟಕ್ಕೆ ಸಂಬಂಧಪಟ್ಟಿದ್ದರಿಂದ ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚುತ್ತದೆ.
– ಅತಿಯಾದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಶಿಳ್ಳೆ ಹೊಡೆಯುವುದು ಒಂದು ಉತ್ತಮ ವಿಧಾನ.
– ಯೋಗ ಶಾಸ್ತ್ರದ ಪ್ರಕಾರ, ಶಿಳ್ಳೆ ಹೊಡೆಯುವುದರಿಂದ ವೇಗಸ್ ನರ್ವ್ ಸಿಸ್ಟಮ್ ಉತ್ತೇಜನಗೊಳ್ಳುತ್ತದೆ.
– ಶಿಳ್ಳೆ ಹೊಡೆಯುವಾಗ ಮುಖದ ಭಾಗವು ಕ್ರಿಯಾಶೀಲವಾಗುವುದರಿಂದ ಅಧಿಕ ಕೊಬ್ಬು ಕರಗಿ, ವ್ಯಕ್ತಿಯ ವಯಸ್ಸನ್ನು ಮರೆಮಾಚುತ್ತದೆ.
ಮತ್ತಿನ್ಯಾಕೆ ಅಂಜಿಕೆ? ನೀವೂ ಶಿಳ್ಳೆ ಹೊಡೆದುಬಿಡಿ…
ಅನುಪಮಾ ಕೆ. ಬೆಣಚಿನಮರ್ಡಿ