Advertisement

ಗಾಂಧೀಜಿ ನಮ್ಮೊಡನೆ ಇದ್ದಾರೆಯೇ?

11:07 PM Oct 01, 2020 | Karthik A |

ಗಾಂಧೀಜಿ ಎಂಬ ಹೆಸರು ನಮಗೆ ಸದಾ ಪರಿಚಿತ ಮತ್ತು ಬಹಳ ಹತ್ತಿರ. ಆದರೆ ಅವರ ಚಿಂತನೆಗಳಿಂದ ತುಂಬಾ ದೂರ ಸರಿದಿದ್ದೇವೆ. ಪ್ರಸ್ತುತ ದಿನಮಾನದಲ್ಲಿ ಗಾಂಧೀಜಿ ಸಮರ್ಪಕವಾಗಿ ಅರ್ಥವಾಗಲು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣದಲ್ಲಿ ನಾವಿದ್ದೇವೆ.

Advertisement

ಇಡೀ ದೇಶವೇ ಅವರನ್ನು ಮಹಾತ್ಮಾ, ರಾಷ್ಟ್ರಪಿತ, ಬಾಪೂ ಎಂದು ಕರೆದರೂ ಅವರ ಚಿಂತನೆಗಳು, ತೋರಿಸಿದ ದಾರಿ ಎಲ್ಲವೂ ಪುಸ್ತಕದ ಬದನೆಕಾಯಿಯಾಗಿದೆ.

ಗಾಂಧೀಜಿ ಮನಸ್ಸು ಮಾಡಿದ್ದರೆ ದೇಶದ ಮೊದಲ ಪ್ರಧಾನಿ ಆಗಬಹುದಿತ್ತು. ಒಬ್ಬ ವ್ಯಕ್ತಿ ಯಾವುದೇ ಅಧಿಕಾರ, ಅಂತಸ್ತು ಇಲ್ಲದೆ ಚಿಂತನೆಗಳಿಂದಲೇ ಜಗತ್ತಿಗೆ ಆದರ್ಶವಾಗಬಹುದು ಎಂಬುದಕ್ಕೆ ಗಾಂಧೀಜಿಗಿಂತ ಸ್ಪಷ್ಟ ಉದಾಹರಣೆ ಬೇಕಿಲ್ಲ.

ಅವರು ಯಾವತ್ತೂ ಆಡಂಬರ ಪ್ರಿಯರಾಗಿರಲಿಲ್ಲ. ಮನುಷ್ಯ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿದರೆ ಅದು ಕದ್ದಂತೆ. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ ದುರಾಸೆಗೆ ಒಳಗಾಗದೆ ಸರಳ ಜೀವನ ಹೊಂದಬೇಕೆಂದು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಇಂಥ ಅದ್ಭುತ ಚೇತನ ಇಂದು ಪ್ರಚಾರದ ಸರಕಾಗಿರುವುದು ನೋವಿನ ಸಂಗತಿ. ಸಾವಿರಾರು ಕೋಟಿ ಕೊಳ್ಳೆ ಹೊಡೆದ ವ್ಯಕ್ತಿಗಳಿಂದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಸರಳತೆಯ ಪಾಠ ಎಂಥ ವಿಚಿತ್ರ! ಇಂಥವರಿಂದ ಲೋಕಕಲ್ಯಾಣ ಸಾಧ್ಯವೇ? ಬದುಕಿನ ಸ್ಥಿತ್ಯಂತರದಲ್ಲಿ ಗಾಂಧಿ ತಮ್ಮದೇ ವ್ಯಕ್ತಿತ್ವವನ್ನು ಕಟ್ಟಿಕೊಂಡರು. ಹೀಗಾಗಿಯೇ ಜಗತ್ತಿನ ಮಹಾನ್‌ ನಾಯಕರೂ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ.

2009ರಲ್ಲಿ ಅಮೆರಿಕದ ಅಧ್ಯಕ್ಷರಾದ ಹೊಸತರಲ್ಲಿ ಒಬಾಮ ಒಂದು ಶಾಲೆಗೆ ಭೇಟಿ ನೀಡಿದ್ದಾಗ ಅಲ್ಲಿನ ವಿದ್ಯಾರ್ಥಿ ಕೇಳಿದ ಒಂದು ಪ್ರಶ್ನೆ ಕುತೂಹಲಕರವಾದುದು. “ನೀವು ಜತೆಗೆ ಡಿನ್ನರ್‌ ಮಾಡಬಯಸುವ ಒಬ್ಬನೇ ಒಬ್ಬ ವ್ಯಕ್ತಿ ಇದ್ದರೆ ಯಾರದು?’ ಎಂದಾಗ ಒಬಾಮ ಕೊಟ್ಟ ಉತ್ತರ ಅದ್ಭುತವಾದದ್ದು. ಅವರ ಉತ್ತರ “ಮಹಾತ್ಮ ಗಾಂಧೀಜಿಯವರೊಡನೆ ಡಿನ್ನರ್‌ ಮಾಡಲು ಅವಕಾಶ ಸಿಕ್ಕಿದ್ದರೆ ನನ್ನ ಜನ್ಮ ಸಾರ್ಥಕವಾಗುತ್ತಿತ್ತು’ ಎಂದಾಗಿತ್ತು. ಒಬಾಮರ ಮೇಲೆಯೇ ಇಂಥ ಪ್ರಭಾವವನ್ನು ಬೀರಿದ್ದಾರೆಂದರೆ ಅವರೊಬ್ಬ ಅದ್ಭುತ ವ್ಯಕ್ತಿಯೆಂದು ಎಂಥವರಿಗೂ ವೇದ್ಯವಾಗುತ್ತದೆ.

Advertisement

ಮನುಕುಲದ ಹೋರಾಟದಲ್ಲೇ ಗಾಂಧಿ ತನ್ನ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡದ್ದು ಈಗ ಇತಿಹಾಸ. ಪತ್ರಕರ್ತ, ವಕೀಲ, ದಾರ್ಶನಿಕ, ಚಿಂತಕ, ಲೇಖಕ ಹೀಗೆ ಹಲವು ಬಗೆಯಲ್ಲಿ ಗಾಂಧಿಯನ್ನು ಕಂಡುಕೊಳ್ಳುವುದು ಸಾಧ್ಯ. ದೇಶದ ಹಲವು ರೋಗ, ವ್ಯಸನ, ಮನೋವಿಕಾರಗಳಿಗೆ ಅವರ ಚಿಂತನೆಯಲ್ಲಿ, ತತ್ವ, ಸಿದ್ಧಾಂತಗಳಲ್ಲಿ ಮದ್ದುಗಳಿವೆ. ಗಾಂಧೀಜಿ ಕುರಿತಂತೆಯೂ ರಾಜಕೀಯ ವಲಯದಲ್ಲಿ ಒಂದಷ್ಟು ಟೀಕೆ-ಟಿಪ್ಪಣಿಗಳು, ಭಿನ್ನಾಭಿಪ್ರಾಯಗಳು, ಕೇಳಿ ಬರುತ್ತವೆ. ಏನೇ ಆದರೂ ಅವರ ಮೌಲ್ಯಗಳು ನಮಗೆಲ್ಲ ಅನುಕರಣೀಯ.

ಇಂದಿನ ಜೀವನ ಶೈಲಿಯಲ್ಲಿ ಪೂರ್ಣಪ್ರಮಾಣದಲ್ಲಿ ಗಾಂಧೀಜಿ ಬದುಕನ್ನು ಅನುಕರಿಸಲು ಸಾಧ್ಯವಿಲ್ಲವೇನೋ! ಆದರೆ ದೈನಂದಿನ ಬದುಕಿನ ಅಗತ್ಯಗಳಾದ ಆಹಾರದಲ್ಲಿ ಮಿತವ್ಯಯ, ಕಡಿಮೆ ಖರ್ಚಿನ ಬದುಕಿನ ನಿರ್ವಹಣೆ, ಅನಗತ್ಯದ ದುಂದುವೆಚ್ಚದಲ್ಲಿ ಕಡಿವಾಣ, ಶಾಂತಿ ಸಹಬಾಳ್ವೆ, ಪರಿಸರ ನೈರ್ಮಲ್ಯಕ್ಕೆ ಒತ್ತು, ಶ್ರಮ ಸಂಸ್ಕೃತಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವತ್ಛತೆ ಹೀಗೆ ಬದುಕಿನ ವಿವಿಧ ಸಂದರ್ಭಗಳಲ್ಲಿ ಅವರ ಮೌಲ್ಯಗಳನ್ನು ರೂಢಿಸಿಕೊಂಡರೆ ನಿಜಕ್ಕೂ ಗಾಂಧಿ ಜಯಂತಿ ಅರ್ಥಪೂರ್ಣವಾಗುತ್ತದೆ.

 ಗಿರಿಜಾಶಂಕರ್‌ ಜಿ.ಎಸ್‌., ಇಡೇಹಳ್ಳಿ, ಹೊಳಲ್ಕೆರೆೆ ತಾ|,ಚಿತ್ರದುರ್ಗ ಜಿಲ್ಲೆ 

 

Advertisement

Udayavani is now on Telegram. Click here to join our channel and stay updated with the latest news.

Next