Advertisement

ಧೋನಿಗೂ ಅಂತಿಮ ಪಂದ್ಯವೇ?

12:58 AM Jul 04, 2019 | Sriram |

ಬರ್ಮಿಂಗ್‌ಹ್ಯಾಮ್‌: ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕನಾಗಿ, ಹಲವಾರು ಪಂದ್ಯಗಳಲ್ಲಿ ಟೀಮ್‌ ಇಂಡಿಯಾವನ್ನು ಯಶಸ್ವಿಯಾಗಿ ಗೆಲ್ಲಿಸಿ ಇದೀಗ ಸಾಮಾನ್ಯ ಆಟಗಾರನಾಗಿ ವಿಶ್ವಕಪ್‌ ಆಡುತ್ತಿರುವ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಸಮೀಪಿಸಿದ್ದಾರೆಂಬುದು ಎಲ್ಲರಿಗೂ ಗೊತ್ತು. ಈ ವಿಶ್ವಕಪ್‌ನಲ್ಲಿ ಭಾರತ ಆಡಲಿರುವ ಕೊನೆಯ ಪಂದ್ಯ ಧೋನಿಯ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ. ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

ಸ್ಮರಣೀಯ ವಿದಾಯ?
ಪ್ರಸಕ್ತ ವಿಶ್ವಕಪ್‌ ಕೂಟದ ಲೀಗ್‌ ಹಂತದ ಪಂದ್ಯದಲ್ಲಿ ಭಾರತ ಪ್ರಚಂಡ ಪ್ರದರ್ಶನ ನೀಡಿ ಸೆಮಿಫೈನಲ್‌ ಹಂತಕ್ಕೆ ತಲುಪಿದೆ. ಒಂದು ವೇಳೆ ಭಾರತ ಸೆಮಿಫೈನಲ್‌ನಲ್ಲಿ ಸೋತರೆ ಧೋನಿಗೆ ಅದೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ ಎನ್ನಲಾಗಿದೆ ಅಥವಾ ಭಾರತ ಫೈನಲ್‌ಗೆ ಪ್ರವೇಶಿಸಿ ಅಲ್ಲಿ ಕಪ್‌ ಗೆದ್ದರೆ ಧೋನಿಗೆ ಅದು ಅವಿಸ್ಮರಣೀಯ ವಿದಾಯವಾಗುವ ಸಾಧ್ಯತೆಯೂ ಇದೆ. 2011ರಲ್ಲಿ ಭಾರತ ಕಪ್‌ ಗೆದ್ದಾಗ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ಗೆ ಅದು ಸ್ಮರಣೀಯ ವಿದಾಯವಾಗಿದ್ದನ್ನು ಸ್ಮರಿಸಬಹುದು.

“ಧೋನಿ ವಿದಾಯ ಹೇಳುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಯಾರು ಕೂಡ ನಿವೃತ್ತಿ ಆಗಿ ಎಂದು ಅವರಿಗೆ ಹೇಳಿಲ್ಲ. ಆದರೆ ವಿಶ್ವಕಪ್‌ ಬಳಿಕ ಅವರು ತಂಡದಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೂತನ ಆಯ್ಕೆ ಸಮಿತಿ
ಸದ್ಯದಲ್ಲೇ ಬಿಸಿಸಿಐಗೆ ಹೊಸ ಆಯ್ಕೆ ಸಮಿತಿ ನೇಮಕವಾಗಲಿದೆ. ಆಸ್ಟ್ರೇಲಿಯ ಆತಿಥ್ಯದ ಮುಂಬರುವ ಟಿ20 ವಿಶ್ವಕಪ್‌ ಗಮನದಲ್ಲಿರಿಸಿಕೊಂಡು ಹೊಸ ಬದಲಾವಣೆ ತರುವ ಸಾಧ್ಯತೆ ಇದೆ. 2017ರಲ್ಲೇ ಧೋನಿ ನಿವೃತ್ತಿಯ ಕುರಿತಂತೆ ಚರ್ಚೆ ಆಗಿತ್ತು. ಬಳಿಕ ಧೋನಿ ಮುಂದಿನ 2 ವರ್ಷ ಕ್ರಿಕೆಟ್‌ ಆಡುವ ಇಂಗಿತ ವ್ಯಕ್ತಪಡಿಸಿ ತಂಡದಲ್ಲಿ ಮುಂದುವರಿದಿದ್ದರು. ಸದ್ಯ ಧೋನಿ ವಿಶ್ವಕಪ್‌ನಲ್ಲಿ 223 ರನ್‌ ಬಾರಿಸಿದ್ದರೂ ನಿಧಾನ ಗತಿಯ ಆಟದಿಂದ ಟೀಕೆಗೆ ಗುರಿಯಾಗಿದ್ದಾರೆ.

ರಕ್ತ ಸುರಿಸಿದ್ದ ಧೋನಿ!
ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ್ದಕ್ಕೆ ಧೋನಿಯ ನಿಧಾನ ಗತಿಯ ಆಟವೇ ಕಾರಣ ಎಂದು ಟೀಕಿಸಲಾಗಿತ್ತು. ಆದರೆ ಧೋನಿ ಆ ಪಂದ್ಯದಲ್ಲಿ ರಕ್ತ ಸುರಿಸಿಕೊಂಡು ಆಡಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಧೋನಿ ತನ್ನ ಹೆಬ್ಬೆರಳಿನಿಂದ ಬಂದ ರಕ್ತವನ್ನು ಹೀರಿ ಹೊರಕ್ಕೆ ಉಗಿಯುತ್ತಿರುವ ಫೋಟೋ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next