ವಾಷಿಂಗ್ ಟನ್: ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿಯನ್ನು ಉತ್ತರ ಸಿರಿಯಾದಲ್ಲಿ ಅಮೆರಿಕಾ ಪಡೆಗಳು ನಡೆಸಿದ ಕ್ಷಿಪ್ರ ಕಾರ್ಯಾಚರನೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಈತನಾಗಿದ್ದು, ಐಸಿಸ್ ಸಂಘಟನೆಯ ನೇತೃತ್ವವನ್ನು ವಹಿಸಿದ್ದ. 2014 ರಿಂದ ಭೂಗತನಾಗಿದ್ದ ಈತ ಕಳೆದ ಏಪ್ರಿಲ್ ನಲ್ಲಿ ಏಕಾಏಕಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದ. 2017 ರಲ್ಲಿ ಅಮೇರಿಕಾ ನಡೆಸಿದ ವಾಯುದಾಳಿಯಲ್ಲಿ ಬಾಗ್ದಾದಿ ಗಂಭೀರ ಗಾಯಗೊಂಡಿದ್ದ ಎಂದು ಅಮೇರಿಕಾ ಸೇನೆ ಹೇಳಿತ್ತು. ಆದರೇ ತನ್ನ ಪ್ರದೇಶ ಸಂಪೂರ್ಣವಾಗಿ ನಾಶವಾದ ಬಳಿಕ ತಲೆಮರೆಯಿಸಿಕೊಂಡಿದ್ದ ಬಾಗ್ದಾದಿ ಎಲ್ಲಿದ್ದಾನೆ ಎಂದು ಸುಳಿವು ನೀಡಿದವರಿಗೆ 25 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿಯೂ ಅಮೆರಿಕ ಘೋಷಣೆ ಮಾಡಿತ್ತು. ಅದರೇ ಇಂದು ನಡೆದ ದಾಳಿಯಲ್ಲಿ ಅಮೇರಿಕ ಸೇನೆ ಬಾಗ್ದಾದಿಯನ್ನು ಹತ್ಯೆ ಮಾಡಿದೆ ಎಂದು ಮಾಧ್ಯಮ ವರದಿ ಮಾಡಿದೆ. ಇದಕ್ಕೆ ಅಮೇರಿಕ ಸೇನೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಒಂದು ವೇಳೆ ಅಮೇರಿಕ ಮಾದ್ಯಮಗಳು ಹೇಳುತ್ತಿರುವಂತೆ ಬಾಗ್ದಾದಿಯ ಹತ್ಯೆಯಾಗಿದ್ದಲ್ಲಿ 2011 ರ ಒಸಮಾ ಬಿನ್ ಲಾಡೆನ್ ಹತ್ಯೆಯ ನಂತರ ಅಮೇರಿಕಾ ಸೇನೆಗೆ ಸಿಕ್ಕ ಅತೀ ದೊಡ್ಡ ಜಯ ಎನಿಸಿಕೊಳ್ಳಲಿದೆ.
ಇತ್ತೀಚಿಗಷ್ಟೆ ಇಸ್ಲಾಮಿಕ್ ಸ್ಟೇಟ್ ಉಗ್ರ ನಾಯಕ ಅಬುಬಕರ್ ಅಲ್ ಬಾಗ್ದಾದಿಯನ್ನು ಗುರಿಯಾಗಿರಿಸಿ ಅಮೇರಿಕಾ ಸೇನೆ ನಡೆಸಲು ಉದ್ದೇಶಿಸಿದ್ದ ವಿಶೇಷ ಕಾರ್ಯಾಚರಣೆಗೆ ಟ್ರಂಪ್ ಅನುಮತಿ ನೀಡಿದ್ದರು ಎಂದು ಅಮೇರಿಕಾ ನಿಯತಕಾಲಿಕೆ ನ್ಯೂಸ್ ವೀಕ್ ವರದಿ ಮಾಡಿತ್ತು. ಅಮೇರಿಕಾದ ಅಧ್ಯಕ್ಷ ಇಂದು ಮುಂಜಾನೆ ಟ್ವೀಟ್ ಒಂದನ್ನು ಮಾಡಿ “ಅತ್ಯಂತ ಮಹತ್ತರವಾದ ಘಟನೆ ಈಗಷ್ಟೆ ಘಟಿಸಿದೆ” ಎಂದು ತಿಳಿಸಿದ್ದರು. ಇದು ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.