ಬಾದಾಮಿ: ಐತಿಹಾಸಿಕ ಚಾಲುಕ್ಯರ ಕಾಲದ ಗತವೈಭವ ಕಲೆ, ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ನಡೆಯುತ್ತಿರು ಚಾಲುಕ್ಯ ಉತ್ಸವ ಕಳೆದ ಮೂರು ವರ್ಷಗಳಿಂದ ನಡೆದಿಲ್ಲ. ಕಳೆದ ಬಾರಿ ವಿಧಾನಸಭೆ ಚುನಾವಣೆ ನಿಮಿತ್ತ ಕೊನೆಯ ಕ್ಷಣದಲ್ಲಿ ರದ್ದುಗೊಂಡಿತ್ತು. ಈಗ ಬಾದಾಮಿಯಲ್ಲಿ ಬದಲಾವಣೆಯನ್ನು ಜನರು ಬಯಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾರಣ ಈ ಬಾರಿಯಾದರೂ ಚಾಲುಕ್ಯ ಉತ್ಸವ ನಡೆಯುತ್ತದೆ ಎಂದು ಇಲ್ಲಿನ ಜನರು ಕಾತರದಿಂದ ಕಾಯುತ್ತಿದ್ದಾರೆ.
ಕಳೆದ ವರ್ಷ ಜಿಲ್ಲಾಮಟ್ಟದಲ್ಲಿ ರನ್ನ ಮತ್ತು ಚಾಲುಕ್ಯ ಉತ್ಸವ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದಂತೆ ರನ್ನ ಉತ್ಸವವನ್ನು ಫೆಬ್ರುವರಿ ಮೂರನೇ ವಾರ ಮತ್ತು ಚಾಲುಕ್ಯ ಉತ್ಸವವನ್ನು ಮಾರ್ಚ್ ಮೊದಲ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. 2018 ಫೆಬ್ರುವರಿ 23, 24, 25 ರಂದು ಮುಧೋಳದಲ್ಲಿ ರನ್ನ ಉತ್ಸವ ನಡೆಸಲಾಯಿತು. ಜಿಲ್ಲಾಮಟ್ಟದ ತೀರ್ಮಾನದಂತೆ ಮಾರ್ಚ್ ಮೊದಲ ವಾರ ನಡೆಯಬೇಕಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಿಧಾನಸಭೆ ಚುನಾವಣೆ ಕರಿನೆರಳಿನಲ್ಲಿ ಚಾಲುಕ್ಯ ಉತ್ಸವ ಕಳೆದ ವರ್ಷವೂ ನಡೆಯಲಿಲ್ಲ.
2015ರಲ್ಲಿ ಫೆ. 8ರಿಂದ 10ರವರೆಗೆ ಚಾಲುಕ್ಯ ಉತ್ಸವವನ್ನು ಐಹೊಳೆಯಲ್ಲಿ ನಡೆಸಲಾಗಿತ್ತು. 2016, 2017 ಮತ್ತು 2018 ಮೂರು ವರ್ಷಗಳ ಕಾಲ ಸತತ ಬರಗಾಲದ ಹಿನ್ನೆಲೆಯಲ್ಲಿ ಉತ್ಸವ ರದ್ದುಪಡಿಸಲಾಗಿತ್ತು. ಪ್ರತಿ ವರ್ಷ ದಸರಾ, ಹಂಪಿ ನಡೆಸಲಾಗುತ್ತಿದೆ. ದಸರಾ ಮತ್ತು ಹಂಪಿ ಉತ್ಸವಕ್ಕಿಲ್ಲದ ಬರ ಚಾಲುಕ್ಯ ಉತ್ಸವ ಏಕಿಲ್ಲ ಎಂಬುದು ಪ್ರಜ್ಞಾವಂತರ ಪ್ರಶ್ನೆ.
2019ರ ಮೇನಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುವ ಮುನ್ನವೇ ಈ ಬಾರಿ ಚಾಲುಕ್ಯ ಉತ್ಸವ ನಡೆಸಬೇಕು ಎಂಬುದು ಇಲ್ಲಿನ ನಾಗರಿಕರ ಒತ್ತಾಸೆ. ಇದಕ್ಕೆ ಜಿಲ್ಲಾಡಳಿತ ಸಾಕಷ್ಟು ತಯಾರಿ ಮಾಡಬೇಕಾಗುತ್ತದೆ. ಇದರಿಂದ ಚುನಾವಣೆ ತಯಾರಿಗೆ ಅಡ್ಡಿಯಾಗುತ್ತದೆ ಎನ್ನಲಾಗುತ್ತಿದೆ.
ಹಂಪಿ ಉತ್ಸವ, ಕಿತ್ತೂರ ಉತ್ಸವ ನಡೆಸುವ ಸರಕಾರ ಬರಗಾಲದ ನೆಪವೊಡ್ಡಿ ಕಳೆದ ಮೂರು ವರ್ಷಗಳಿಂದ ಚಾಲುಕ್ಯ ಉತ್ಸವ, ರನ್ನ ಉತ್ಸವ ಮುಂದೂಡುತ್ತಾ ಬಂದಿದ್ದಾರೆ. ಈಗ ಎಲ್ಲವೂ ಚೆನ್ನಾಗಿದೆ ಎನ್ನುತ್ತಿರುವಾಗ ಕಳೆದ ವರ್ಷ ರನ್ನ ಉತ್ಸವ ಮಾಡಿ, ಚಾಲುಕ್ಯ ಉತ್ಸವ ನಡೆಸಲಿಲ್ಲ. ಕಳೆದ ಮೂರು ವರ್ಷಗಳಿಂದ ಚಾಲುಕ್ಯ ಉತ್ಸವ ನಡೆಸದಿರುವುದು ಜನರಲ್ಲಿ ಆತಂಕದ ಕಾರ್ಮೋಡ ಮೂಡಿದೆ. ಜಿಲ್ಲಾಡಳಿತ ಮತ್ತು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರು ಈ ಬಾರಿಯಾದರೂ ಚಾಲುಕ್ಯ ಉತ್ಸವ ನಡೆಯುವಂತೆ ಮಾಡುತ್ತಾರೆಯೇ ಎಂಬುದನ್ನು ವಾತಾಪಿ ಜನರು ಕಾತರದಿಂದ ಕಾಯುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ವಿವಿಧ ಕಾರಣಗಳಿಂದ ಚಾಲುಕ್ಯ ಉತ್ಸವ ನಡೆಸಿಲ್ಲ. ಈ ಬಾರಿ ಚಾಲುಕ್ಯ ಉತ್ಸವ ನಡೆಸಲು ಅಧಿ ಕಾರಿಗಳಿಂದ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ.
ಸಿದ್ದರಾಮಯ್ಯ,
ಮಾಜಿ ಸಿಎಂ, ಶಾಸಕರು ಬಾದಾಮಿ
ಕಳೆದ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ರನ್ನ ಉತ್ಸವ ಮಾಡಿ ಚಾಲುಕ್ಯ ಉತ್ಸವ ಮಾಡಲಿಲ್ಲ. ಈ ಬಾರಿಯಾದರೂ ಚಾಲುಕ್ಯ ಉತ್ಸವ ನಡೆಸಲಿ.
. ಕುಮಾರ ರೋಣದ,
ತಾಪಂ ಸದಸ್ಯರು ಪಟ್ಟದಕಲ್ಲ.