Advertisement
ಹೌದು, ಆಗಸ್ಟ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನೂತನ ಮುಖ್ಯಸ್ಥ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ವಿರಾಟ್- ರೋಹಿತ್ ಟಿ20 ಭವಿಷ್ಯದ ಬಗ್ಗೆ ಮತ್ತೆ ಬೆಳಕು ಚೆಲ್ಲಿದೆ.
Related Articles
Advertisement
ಗುಜರಾತ್ ಟೈಟಾನ್ಸ್ ತಂಡವನ್ನು ಒಮ್ಮೆ ಚಾಂಪಿಯನ್ ಮತ್ತೊಮ್ಮೆ ರನ್ನರ್ ಅಪ್ ಮಾಡಿದ ನಾಯಕ ಹಾರ್ದಿಕ್ ಪಾಂಡ್ಯ ಸದ್ಯ ಭಾರತ ತಂಡವನ್ನು ಚುಟುಕು ಮಾದರಿಯಲ್ಲಿ ಮುನ್ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್ ಬಳಿಕ ಒಂದೇ ಒಂದು ಟಿ20 ಸರಣಿಗೂ ರೋಹಿತ್- ವಿರಾಟ್ ಆಯ್ಕೆಯಾಗಿಲ್ಲ. ತಂಡ ಪ್ರಕಟವಾದಾಗೆಲ್ಲಾ ಮುಂದಿನ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಅವರಿಗೆ ವಿರಾಮ ನೀಡಲಾಗಿದೆ ಎಂಬ ಸಿದ್ದ ಉತ್ತರ ಬರುತ್ತದೆ. ಆದರೆ ಇಬ್ಬರು ದಿಗ್ಗಜರ ಹೊರಗುಳಿಯುವಿಕೆಯ ಹಿಂದೆ ವಿರಾಮ ಮಾತ್ರ ಕಾರಣ ಅಲ್ಲ ಎನ್ನುವುದು ಸಾಮಾನ್ಯ ಕ್ರಿಕೆಟ್ ಅಭಿಮಾನಿಗೂ ಅರ್ಥವಾಗುವ ಸಂಗತಿ.
ಇದಕ್ಕೆ ಪುರಾವೆ ಎನ್ನುವಂತೆ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ಸೇರಿರುವ ಯುವ ಆಟಗಾರರು. ಸೂರ್ಯಕುಮಾರ್ ಯಾದವ್ ಗೆ ಉಪ ನಾಯಕತ್ವ ನೀಡಿರುವ ಆಯ್ಕೆ ಸಮಿತಿಯು ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾರಂತಹ ಯುವ ಆಟಗಾರರಿಗೆ ಮೊದಲ ಬಾರಿಗೆ ತಂಡಕ್ಕೆ ಕರೆಸಿದೆ. ವಿರಾಟ್ ಕೊಹ್ಲಿ ಜಾಗದಲ್ಲಿ ಈ ಇಬ್ಬರು ಆಟಗಾರರಲ್ಲಿ ಒಬ್ಬರನ್ನು ಪ್ರಯೋಗ ಮಾಡುವುದು ಬಹುತೇಕ ಖಚಿತ. ತಿಲಕ್ ಮತ್ತು ಯಶಸ್ವಿ ಇಬ್ಬರೂ ವಿರಾಟ್ ರೀತಿಯ ಬ್ಯಾಟರ್ ಗಳು. ಹೀಗಾಗಿ ವಿರಾಟ್ ಜಾಗಕ್ಕೆ ಸರಿಯಾದ ಯುವ ಉತ್ತರಾಧಿಕಾರಿಯನ್ನು ತರಲು ಹೊರಟಿದೆ ಬಿಸಿಸಿಐ.
ರೋಹಿತ್ ಶರ್ಮಾಗೆ ಇದೀಗ 36 ವರ್ಷ. ವಿರಾಟ್ ಕೊಹ್ಲಿಗೆ 34 ವರ್ಷ. ಉತ್ತಮವಾಗಿ ಆಡುತ್ತಿದ್ದರೂ, ಅನುಭವಿಗಳಾಗಿದ್ದರೂ ಮುಂದಿನ ಟಿ20 ವಿಶ್ವಕಪ್ ವೇಳೆಗೆ ಇವರಿಬ್ಬರ ಅವಲಂಬನೆಯಿಂದ ಸಂಪೂರ್ಣ ಹೊರಬರಲು ಬಿಸಿಸಿಐ ಚಿಂತಿಸುತ್ತಿದೆ. ಹೀಗಾಗಿ ಐಪಿಎಲ್ ಮಿಂಚುತ್ತಿರುವ ಯುವಕರಿಗೆ ಈಗಲೇ ಅವಕಾಶ ಕೊಟ್ಟು, ತಪ್ಪು ತಿದ್ದಿಕೊಳ್ಳಲು ಸಮಯ ನೀಡುವ ಯೋಚನೆಯಲ್ಲಿದೆ.
ಐಪಿಎಲ್ ನಲ್ಲಿ ಯಶಸ್ಸು- ವಿಶ್ವಕಪ್ ಸಿಗುತ್ತಿಲ್ಲ: 2007ರ ಟಿ20 ವಿಶ್ವಕಪ್ ಗೆಲುವು ಭಾರತದಲ್ಲಿ ಐಪಿಎಲ್ ಎಂಬ ಕ್ರಿಕೆಟ್ ಕೂಟದ ಹುಟ್ಟಿಗೆ ಕಾರಣವಾಯಿತು. ವಿಶ್ವದ ಶ್ರೀಮಂತ ಕ್ರಿಕೆಟ್ ಕೂಟ ಐಪಿಎಲ್ ಹುಟ್ಟಿ 15 ಸೀಸನ್ ಕಳೆದರೂ ಭಾರತ ಬಳಿಕ ಒಂದೇ ಒಂದು ವಿಶ್ವಕಪ್ ಗೆದ್ದಿಲ್ಲ. ವಿಶ್ವ ಶ್ರೇಷ್ಠ ಕ್ರಿಕೆಟಿಗರ ಎದುರು ತಮ್ಮ ಪ್ರತಿಭೆ ಪ್ರದರ್ಶಿಸುವ ಯುವ ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದ್ದು ಕಡಿಮೆ.