ಟೀಂ ಇಂಡಿಯಾ ಆಧುನಿಕ ದಿನಗಳಲ್ಲಿ ಕಂಡ ಏಸ್ ಸ್ಪಿನ್ನರ್, ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್, ಟೆಸ್ಟ್ ಕ್ರಿಕೆಟ್ ನ ಉತ್ತಮ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಬುಧವಾರ (ಡಿ.18) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಮಳೆಯ ಕಾರಣದಿಂದ ನೀರಸ ಡ್ರಾ ಕಂಡ ಪಂದ್ಯದ ಬಳಿಕ ಎಲ್ಲರಿಗೂ ಶಾಕ್ ನೀಡಿದ ಅಶ್ವಿನ್ ಸರಣಿಯಲ್ಲಿ ಇನ್ನೆರಡು ಪಂದ್ಯ ಇರುವಾಗಲೇ ತಂಡ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.
ಬಾರ್ಡರ್ ಗಾವಸ್ಕರ್ ಟ್ರೋಫಿ ಕೆಲವು ಆಟಗಾರರಿಗೆ ಕೊನೆಯ ಸರಣಿ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅದರಲ್ಲಿ ಅಶ್ವಿನ್ ಹೆಸರು ಪ್ರಮುಖವಾಗಿರಲಿಲ್ಲ. ಅಲ್ಲದೆ ಸರಣಿಯ ನಡುವೆಯೇ ಈ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಯಾರೂ ಅಂದಾಜಿಸಿರಲಿಲ್ಲ.
ಹಾಗಾದರೆ
ಇದು ಆತುರದ ನಿರ್ಧಾರವೇ?
ಇದಕ್ಕೆ ಹೌದು- ಇಲ್ಲ ಎಂದು ಈಗಲೇ ಹೇಳುವುದು ಕಷ್ಟ. ಯಾಕೆಂದರೆ ಅಶ್ವಿನ್ ಇನ್ನೂ ತನ್ನ ನಿವೃತ್ತಿಯ ಹಿಂದಿನ ಕಾರಣಗಳ ಬಗ್ಗೆ ಮುಕ್ತವಾಗಿ ಮಾತನಾಡಿಲ್ಲ. ಆದರೆ ಬುಧವಾರದ ಕೆಲವು ಹೇಳಿಕೆಗಳು, ಘಟನೆಗಳನ್ನು ಗಮನಿಸಿ ಒಂದು ಅವಲೋಕನ ಮಾಡಬಹುದಷ್ಟೆ.
106 ಟೆಸ್ಟ್‌ಗಳಲ್ಲಿ 537 ವಿಕೆಟ್ ಗಳನ್ನು ಪಡೆದಿರುವ 38 ವರ್ಷದ ಅಶ್ವಿನ್ ಅವರ ನಿರ್ಧಾರಕ್ಕೆ ಈ ಎರಡು ಅಂಶಗಳು ಪ್ರಭಾವ ಬೀರಿದೆ ಎಂದು ವರದಿಗಳು ಬಹಿರಂಗಪಡಿಸಿವೆ. ಗಾಯದ ಸಮಸ್ಯೆಗಳು ಮತ್ತು ಭಾರತದ ಟೆಸ್ಟ್ ತಂಡದಲ್ಲಿ ಅವರ ಭವಿಷ್ಯ. ವರದಿಯ ಪ್ರಕಾರ, ಅಶ್ವಿನ್ ಪರ್ತ್‌ನಲ್ಲಿನ ಮೊದಲ ಟೆಸ್ಟ್ ಗೆ ಮುಂಚಿತವಾಗಿ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದರು. ಆದರೆ ನಿರ್ಧಾರ ಅಂತಿಮಗೊಳಿಸಿರಲಿಲ್ಲ. ಮಂಗಳವಾರ ರಾತ್ರಿಯಷ್ಟೇ ನಿವೃತ್ತಿ ನಿರ್ಧಾರವನ್ನು ತಮ್ಮ ಕುಟುಂಬಕ್ಕೆ ತಿಳಿಸಿದ್ದರು.
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಅಶ್ವಿನ್ ಅವರ ನಿರಂತರ ಮೊಣಕಾಲಿನ ಸಮಸ್ಯೆಯು ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುಂಚಿತವಾಗಿ ನಿವೃತ್ತಿಯ ಬಗ್ಗೆ ಯೋಚಿಸುವಂತೆ ಮಾಡಿದೆ. ಇದರ ಜತೆಗೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದಲ್ಲಿ ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಶ್ವಿನ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.
ಪರ್ತ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಅದರಲ್ಲಿ ವಾಷಿಂಗ್ಟನ್ ಸುಂದರ್ ಆಯ್ಕೆಯಾಗಿದ್ದರು. ಇದೇ ವೇಳೆ ವಿದಾಯಕ್ಕೆ ಮನಸ್ಸು ಮಾಡಿದ್ದರು ಎಂದು ನಾಯಕ ರೋಹಿತ್ ಶರ್ಮಾ ಅವರು ಬುಧವಾರ ಹೇಳಿಕೆ ನೀಡಿದ್ದಾರೆ. ಪರ್ತ್ ಪಂದ್ಯದ ಬಳಿಕ ಅಶ್ವಿನ್ ನಿವೃತ್ತಿ ಪಡೆಯುವ ಅಂದಾಜಿನಲ್ಲಿದ್ದರು. ಅದರೆ ಪಿಂಕ್ ಬಾಲ್ ಪಂದ್ಯಕ್ಕೆ ಮುಂದುವರಿಯುಂತೆ ಮನವೊಲಿಸಿದೆವು” ಎಂದು ಶರ್ಮಾ ಹೇಳಿದ್ದರು. ಅದರಂತೆ ಅಶ್ವಿನ್ ಅವರು ಅಡಿಲೇಡ್ ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಬ್ರಿಸ್ಬೇನ್ ಪಂದ್ಯಕ್ಕೆ ಅಶ್ವಿನ್ ಜಾಗದಲ್ಲಿ ರವೀಂದ್ರ ಜಡೇಜಾ ಆಡಿದ್ದರು.
ವರದಿಯೊಂದರ ಪ್ರಕಾರ ತನ್ನ ಫಿಟ್ನೆಸ್ ಮತ್ತು ತವರಿನ ಟೆಸ್ಟ್ ಪಂದ್ಯಕ್ಕೆ ಇನ್ನು ಹಲವು ತಿಂಗಳುಗಳು ಕಾಯಬೇಕಾದ ಸ್ಥಿತಿ ಇರುವ ಕಾರಣದಿಂದ ಆಸೀಸ್ ನೆಲಕ್ಕೆ ಹಾರುವ ಮೊದಲೇ ಅಶ್ವಿನ್ ನಿವೃತ್ತಿ ನಿರ್ಧಾರದ ಬಗ್ಗೆ ಯೋಚನೆ ಮಾಡಿದ್ದರು. ಆದರೆ ಇದರ ಬಗ್ಗೆ ಮತ್ತೆ ಯೋಚಿಸುವಂತೆ ಮನೆಯವರು ತಿಳಿಸಿದ್ದರು. ಆದರೆ ಮಂಗಳವಾರ ರಾತ್ರಿ ಅಂತಿಮವಾಗಿ ಅಶ್ವಿನ್ ಮನೆಯವರೊಂದಿಗೆ ನಿರ್ಧಾರ ಪ್ರಕಟಿಸಿದ್ದರು.
ವಿರಾಟ್ ಗೆ ವಿಷಯವೇ ಗೊತ್ತಿರಲಿಲ್ಲ..!
ಅಶ್ವಿನ್ ನಿವೃತ್ತಿ ವಿಚಾರ ಮೊದಲ ಬಾರಿಗೆ ಬಹಿರಂಗವಾಗಿದ್ದು ವಿರಾಟ್ ಮತ್ತು ಅಶ್ವಿನ್ ಅವರು ಪೆವಿಲಿಯನ್ ನಲ್ಲಿ ಕುಳಿತು ಭಾವುಕವಾಗಿ ಮಾತನಾಡಿತ್ತಿದ್ದಾಗ. ಅಶ್ವಿನ್ ಮಾತು ಕೇಳುತ್ತಿದ್ದ ವಿರಾಟ್ ಅವರನ್ನು ಅಪ್ಪಿಕೊಂಡಿದ್ದು ನೇರಪ್ರಸಾರವಾದಾಗ ಏನೋ ನಡೆಯಲಿದೆ ಎನ್ನುವ ಬಗ್ಗೆ ಮಾತುಕತೆ ಆರಂಭವಾಗಿತ್ತು. ಆದರೆ ಮೊದಲ ಪಂದ್ಯದಿಂದಲೂ ಅಶ್ವಿನ್ ನಿವೃತ್ತಿ ಬಗ್ಗೆ ಡ್ರೆಸ್ಸಿಂಗ್ ರೂಂ ನಲ್ಲಿ ಚರ್ಚೆಯಾಗಿದ್ದರೂ ವಿರಾಟ್ ಕೊಹ್ಲಿಗೆ ಮಾತ್ರ ಅಧಿಕೃತ ಪ್ರಕಟಣೆಗೆ ಕೆಲವೇ ನಿಮಿಷಗಳ ಮೊದಲು ಗೊತ್ತಾಗಿದೆ. ಇದು ಕೆಲವು ಗುಸುಗುಸುಗಳಿಗೆ ಕಾರಣವಾಗಿದೆ.
ಅಶ್ವಿನ್ ವಿದಾಯದ ಬಳಿಕ ನಾಯಕ ರೋಹಿತ್ ಪರ್ತ್ ಟೆಸ್ಟ್ ಸಮಯದ ತಮ್ಮ ಸಂಭಾಷಣೆಯ ಬಗ್ಗೆ ಹೇಳಿದ್ದರು. (ಮೇಲೆ ಓದಿದಂತೆ). ಆದರೆ ವಿರಾಟ್ ಕೊಹ್ಲಿ ಅವರು ತನ್ನ ಪೋಸ್ಟ್ ನಲ್ಲಿ “ನಾನು ನಿಮ್ಮೊಂದಿಗೆ 14 ವರ್ಷಗಳಿಂದ ಆಡಿದ್ದೇನೆ, ನೀವು ಇಂದು ನಿವೃತ್ತರಾಗುತ್ತಿದ್ದೀರಿ ಎಂದು ನೀವು ನನಗೆ ಹೇಳಿದಾಗ, ಅದು ನನ್ನನ್ನು ಸ್ವಲ್ಪ ಭಾವುಕರನ್ನಾಗಿಸಿತು. ಆ ಎಲ್ಲಾ ವರ್ಷಗಳಲ್ಲಿ ಒಟ್ಟಿಗೆ ಆಡಿದ ನೆನಪುಗಳು ಮರುಕಳಿಸಿದವು” ಎಂದು ವಿರಾಟ್ ಹೇಳಿದರು.
ಸದ್ಯ ಟೀಂ ಇಂಡಿಯಾದಲ್ಲಿ ವಿರಾಟ್ ಅತ್ಯಂತ ಸೀನಿಯರ್ ಆಟಗಾರ. ಅಶ್ವಿನ್ ರಂತಹ ಮತ್ತೋರ್ವ ಸೀನಿಯರ್ ನಿವೃತ್ತಿ ಹೊಂದುವ ನಿರ್ಧಾರ ರೋಹಿತ್ ಗೆ ಎರಡು ವಾರದ ಮೊದಲು ಗೊತ್ತಿದ್ದರೂ ವಿರಾಟ್ ಗೆ ಗೊತ್ತಿಲ್ಲ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೀರ್ತನ್ ಶೆಟ್ಟಿ ಬೋಳ