Advertisement

ಮುಕ್ತಾಯದ ಹಂತಕ್ಕೆ ಏತ ನೀರಾವರಿ ಕಾಮಗಾರಿ

04:00 PM Oct 09, 2022 | Team Udayavani |

ಯಲಬುರ್ಗಾ: ಬಹುನಿರೀಕ್ಷಿತ ಕೊಪ್ಪಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ನವೆಂಬರ್‌ ತಿಂಗಳೊಳಗೆ ಕ್ಷೇತ್ರದ ಕೆರೆಗಳಿಗೆ ನೀರು ಹರಿಸಲು ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದು ಇದು ತಾಲೂಕಿನ ರೈತಾಪಿ ಸಮೂಹದಲ್ಲಿ ಆಶಾಭಾವ ಮೂಡಿಸಿದೆ.

Advertisement

ಮೊದಲ ಹಂತದಲ್ಲಿ ಸರಕಾರ 1130 ಕೋಟಿ ರೂ. ಅನುದಾನ ನೀಡಿತ್ತು. ನಾರಾಯಣಪುರ ಜಲಾಶಯದಿಂದ ಮುರೋಳ, ಬಲಕುಂದಿ, ಕುಷ್ಟಗಿ ತಾಲೂಕಿನ ಕಲಾಲಬಂಡಿವರೆಗೆ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.

ಎರಡನೇ ಹಂತದ ಕಾಮಗಾರಿಗೆ 1,864 ಕೋಟಿ ಅನುದಾನದಲ್ಲಿ ಕೆಲಸಗಳು ನಡೆದಿವೆ. ಕುಷ್ಟಗಿ ತಾಲೂಕಿನ ಕಲಾಲಬಂಡಿಯಿಂದ ಹಗೇದಾಳ, ಗುನ್ನಾಳ ಎರಡು ಪ್ರಮುಖ ಜಾಕ್‌ವೆಲ್‌ಗ‌ಳ ಮೂಲಕ ತಾಲೂಕಿನ 24 ಕೆರೆಗಳಿಗೆ ನೀರು ಹರಿಯಲಿದ್ದು, ಪೈಪ್‌ ಲೈನ್‌ ಜೋಡಣೆ, ವಿದ್ಯುತ್‌ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೇನು ಕೆಲ ದಿನಗಳಲ್ಲಿ ಬಾಕಿ ಇರುವ ಎಲ್ಲ ಕಾಮಗಾರಿಗಳು ಮುಕ್ತಾಯವಾಗಲಿವೆ. ಎರಡನೇ ಹಂತದ ಯೋಜನೆಗೆ 0.875 ಟಿಎಂಸಿ ಅಡಿ ನೀರು ಲಭ್ಯವಾಗಲಿದ್ದು, ಕ್ಷೇತ್ರದ 12 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಬಳಕೆಯಾಗಲಿದೆ.

24 ಕೆರೆಗಳಿಗೆ ನೀರು: ಬಳೂಟಗಿ, ಬಸಾಪುರ, ಯಲಬುರ್ಗಾ ಕೆಂಪುಕೆರೆ, ಕುದರಿಕೋಟಗಿ, ಮಲಕಸಮುದ್ರ, ಬೂನಕೊಪ್ಪ, ದಮ್ಮೂರು, ತಲ್ಲೂರು, ಚಿಕ್ಕಮ್ಯಾಗೇರಿ-1, ಚಿಕ್ಕಮ್ಯಾಗೇರಿ-2, ಮುರುಡಿ, ಬೆಣಕಲ್‌, ಬೇವೂರು, ವಟಪರ್ವಿ, ನೆಲಜೇರಿ, ಕುದರಿಮೋತಿ, ಗುನ್ನಾಳ, ನಿಲೋಗಲ್‌, ಹುಣಸಿಹಾಳ, ಕಲಭಾವಿ, ತಾಳಕೇರಿ, ಗಾಣಧಾಳ, ಗುಳೆ, ಕಟಗಿಹಳ್ಳಿ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ.

ಕಟ್ಟುನಿಟ್ಟಿನ ಸೂಚನೆ: ಕ್ಷೇತ್ರದ ಶಾಸಕರು, ಸಚಿವ ಹಾಲಪ್ಪ ಆಚಾರ್‌ ಅವರು ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ. 2013ರಲ್ಲಿ ಆರಂಭಗೊಂಡ ಯೋಜನೆ ಬಾಗಲಕೋಟೆ ಜಿಲ್ಲೆಯಲ್ಲಿ ಸಾಕಷ್ಟು ವಿಳಂಬವಾಗಿದೆ. ಸಚಿವ ಹಾಲಪ್ಪ ಆಚಾರ್‌ ಅವರು ಅಲ್ಲಿನ ಜಿಲ್ಲಾಧಿ ಕಾರಿಗಳ ಹಾಗೂ ಪೊಲೀಸ್‌ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಅಲ್ಲಿನ ರೈತರ ಮನವೋಲಿಸಿ ಯೋಜನೆ ಸಮರೋಪಾದಿಯಲ್ಲಿ ಸಾಗಲು ಸಾಕಷ್ಟು ಶ್ರಮವಹಿಸಿದ್ದಾರೆ. ಪ್ರತಿ ತಿಂಗಳು ಕೃಷ್ಣಾ ಭಾಗ್ಯ ಜಲನಿಮಗದ ಅಧಿ ಕಾರಿಗಳ ಜೊತೆ ನಿರಂತರ ಸಭೆ ನಡೆಸುವ ಕಾರ್ಯ ಮಾಡಿದ್ದಾರೆ.

Advertisement

ವರದಾನ: ಒಣಬೇಸಾಯ ಪ್ರದೇಶವಾದ ತಾಲೂಕಿಗೆ ಕೆರೆ ತುಂಬಿಸುವ ಯೋಜನೆ ವರದಾನವಾಗಲಿದೆ. ಸತತ ಬರದಿಂದ ತತ್ತರಿಸುವ ಈ ಭಾಗದ ಜನರಿಗೆ ಅಂರ್ತಜಲಮಟ್ಟ ಹೆಚ್ಚಳಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ತಾಲೂಕಿನ ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸಲಾಗುತ್ತಿದೆ.

ಕೆರೆಗಳ ಅಭಿವೃದ್ಧಿ: ತಾಲೂಕಿನ 24 ಕೆರೆಗಳನ್ನು ಈಗಾಗಲೇ ಸಣ್ಣನೀರಾವರಿ ಯೋಜನೆಯಡಿ ಕೆರೆ ಹೂಳೆತ್ತುವುದು, ಒಡ್ಡು ನಿರ್ಮಾಣ, ಜಂಗಲ್‌ ಕಟಿಂಗ್‌, ಸುತ್ತಲೂ ತಂತಿಬೇಲಿ ಅಳವಡಿಕೆ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಲಾಗಿದೆ.

ಇದೊಂದು ಒಳ್ಳೆಯ ಯೋಜನೆಯಾಗಿದ್ದು, ರೈತರಿಗೆ ಅನುಕೂಲವಾಗಲಿದೆ. ಏತ ನೀರಾವರಿ ಯೋಜನೆ ಯಶಸ್ಸು ಸಚಿವ ಹಾಲಪ್ಪ ಆಚಾರ್‌ ಅವರಿಗೆ ಸಲ್ಲಬೇಕಾಗುತ್ತದೆ. ಎರಡನೇ ಹಂತದ ಯೋಜನೆಗೆ 1864 ಕೋಟಿ ಅನುದಾನವನ್ನು ಸರಕಾರದಿಂದ ತಂದಿದ್ದಾರೆ. ನಿತ್ಯ ಯೋಜನೆ ಬಗ್ಗೆ ಅಧಿಕಾರಿಗಳ ಜತೆ ಸಂಪರ್ಕದಲ್ಲಿರುತ್ತಾರೆ. ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇದ್ದು, ನವೆಂಬರ್‌ ತಿಂಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುತ್ತದೆ. ತಾಲೂಕಿನ 24 ಕೆರೆಗಳಿಗೆ ನೀರು ಹರಿಸಲು ಈಗಾಗಲೇ ಪೈಪ್‌ಲೈನ್‌ ಪೂರ್ಣಗೊಂಡಿದೆ. ವಿದ್ಯುತ್‌ ಕಾಮಗಾರಿಯಷ್ಟೇ ಬಾಕಿ.  –ಮುರಳಿ ಮನೋಹರ, ಅಭಿಯಂತರರು, ಕೆಬಿಜಿಎನ್‌ಎಲ್‌

ನೀರಾವರಿ ವಿಚಾರದಲ್ಲಿ ನನ್ನ ಬದ್ಧತೆ ಕೆಲವೇ ದಿನಗಳಲ್ಲಿ ಸಾಬೀತು ಪಡಿಸುತ್ತೇನೆ. ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕ್ಷೇತ್ರದ ಕೆರೆಗಳಿಗೆ ನೀರು ಹರಿಸುತ್ತೇನೆ. ಕ್ಷೇತ್ರದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಲಾಗುತ್ತದೆ. ಡಿಸೆಂಬರ್‌ನೊಳಗೆ ನೀರು ತುಂಬಿಸಲಾಗುತ್ತದೆ. ಈ ನಿಟ್ಟಿನಲ್ಲಿ ಹಲವಾರು ಕ್ರಮ ವಹಿಸಲಾಗಿದೆ.  –ಹಾಲಪ್ಪ ಆಚಾರ್‌, ಸಚಿವರು

ಕ್ಷೇತ್ರದ ಶಾಸಕರಾದ ಸಚಿವ ಹಾಲಪ್ಪ ಆಚಾರ್‌ ಅವರು ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿಗೆ ಒತ್ತು ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಕೊಪ್ಪಳ ಏತ ನೀರಾವರಿ ಯೋಜನೆ ಮುಕ್ತಾಯ ಹಂತಕ್ಕೆ ತಲುಪಿದ್ದು ಸಂತಸ ತಂದಿದೆ.  -ವೀರಣ್ಣ ಹುಬ್ಬಳ್ಳಿ, ಭೂ ನ್ಯಾಯ ಮಂಡಳಿ ಸದಸ್ಯ

„ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next