Advertisement

ವಟಗಲ್‌ ಬಸವೇಶ್ವರ ಏತ ನೀರಾವರಿಗೆ ಅಪಸ್ವರ!

05:29 PM Aug 24, 2021 | Team Udayavani |

ಮಸ್ಕಿ: ಮಸ್ಕಿ ಉಪ ಚುನಾವಣೆಯಲ್ಲಿ ರಾಜಕೀಯ ಅಸ್ತ್ರವಾಗಿದ್ದ ನಾರಾಯಣಪುರ ಬಲದಂಡೆ ಶಾಖಾ ಕಾಲುವೆ 5ಎ, ಇದಕ್ಕೆ ಪರ್ಯಾಯವಾಗಿ
ಹುಟ್ಟಿಕೊಂಡ ವಟಗಲ್‌ ಬಸವೇಶ್ವರ ಏತ ನೀರಾವರಿ ಯೋಜನೆಗೆ ಪರ ಮತ್ತು ವಿರೋಧ ಸಂಘರ್ಷ ಮತ್ತೆ ಶುರುವಾಗಿದೆ!.

Advertisement

ಕೇವಲ ರೈತರು ಮಾತ್ರವಲ್ಲದೇ ಈಗ ಹಾಲಿ ಮಾಜಿ ಶಾಸಕರೇ ಈ ಪರ-ವಿರೋಧದ ಸಾರಥ್ಯ ವಹಿಸಿದ್ದಾರೆ. ಮೌಖಿಕ ಶಿಫಾರಸು ಮಾತ್ರವಲ್ಲ; ಲಿಖಿತ ಶಿಫಾರಸು ಮಾಡಲಾಗುತ್ತಿದ್ದು, ಪರ -ವಿರೋಧದ ನಡುವೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ನಡೆಯಬೇಕಿದ್ದ ಸರ್ವೇ ಕಾರ್ಯವನ್ನೂ ಸ್ಥಗಿತ ಮಾಡಲಾಗಿದೆ.

ಏನಿದೆ ಹಿನ್ನೆಲೆ?: ಮಸ್ಕಿ ತಾಲೂಕಿನ 30ಕ್ಕೂ ಹೆಚ್ಚು ಹಳ್ಳಿ ಸೇರಿ ನೆರೆಯ ತಾಲೂಕು ಒಳಗೊಂಡಂತೆ 31ಸಾವಿರ ಹೆಕ್ಟೇರ್‌ ಪ್ರದೇಶಕ್ಕೆನೀರಾವರಿ ಭಾಗ್ಯ ಕಲ್ಪಿಸುವ ನಾರಾಯಣಪುರ ಬಲದಂಡೆ ಮೂಲಕ 5ಎ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ಈ ಭಾಗದಲ್ಲಿ ಹೋರಾಟ ನಿರಂತರ ನಡೆದಿದೆ. ಆದರೆ ಸರ್ಕಾರ ಈ ಯೋಜನೆಗೆ ತಾಂತ್ರಿಕ ಅಡ್ಡಿ ಇದ್ದು ಇದು ಸಾಧ್ಯವಾಗದು ಎಂದು ಇದಕ್ಕೆ ಪರ್ಯಾಯವಾಗಿ ನಂದವಾಡಗಿ ಏತ ನೀರಾವರಿ ಮೂಲಕ ವಟಗಲ್‌ ಬಸವೇಶ್ವರ ಏತ ನೀರಾವರಿ ಜಾರಿಗೆ ಮುಂದಾಗಿತ್ತು. ಮಸ್ಕಿ ಉಪ ಚುನಾವಣೆಯಲ್ಲಿ ಈ ಯೋಜನೆ ರಾಜಕೀಯ ಅಸ್ತ್ರವಾಗಿತ್ತು. ಇದರ ಪರಿಣಾಮವೂ ನಡೆದು ಹೋಗಿದೆ. ಆದರೂ ಈಗ ಈ ಎರಡು ಯೋಜನೆಗಳ ಕುರಿತು ಇರುವ ಭಿನ್ನ ನಡೆ ಇನ್ನೂ ನಿಂತಿಲ್ಲ. ಚುನಾವಣೆ ಬಳಿಕ ಪರ-ವಿರೋಧ ತಿಕ್ಕಾಟ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ:ಲಾಸ್ಟ್‌ ಡೇ ಪಾಲಿಕೆಗೆ ಉಮೇದುವಾರಿಕೆ ಭರಾಟೆ

ಪರ-ವಿರೋಧ: ಶಾಸಕ ಆರ್‌.ಬಸನಗೌಡ ತುರುವಿಹಾಳ ವಟಗಲ್‌ ಬಸವೇಶ್ವರ ಏತ ನೀರಾವರಿ ಯೋಜನೆ ಜಾರಿ ಮಾಡುವುದು ಬೇಡ. ಈ ಭಾಗದಲ್ಲಿ ರೈತರು ಇದನ್ನು ವಿರೋಧಿ ಸುತ್ತಿದ್ದಾರೆ. 5ಎ ಕಾಲುವೆಯೇ ಬೇಕೆಂದು ಪಟ್ಟು ಹಿಡಿದಿದ್ದು, ಹೀಗಾಗಿ ವಟಗಲ್‌ ಬಸವೇಶ್ವರ ಏತ ನೀರಾವರಿಗೆ ಸಂಬಂಧಿ ಸಿದಂತೆ ಯಾವುದೇ ಪ್ರಕ್ರಿಯೆ ನಡೆಸಕೂಡದು ಎಂದು ಪತ್ರ ಬರೆದಿದ್ದಾರೆ. ಆದರೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಈ ಯೋಜನೆ ಜಾರಿ ಮಾಡಲೇಬೇಕು ಎಂದು ನೀರಾವರಿ ಇಲಾಖೆ, ಕೃಷ್ಣ ಭಾಗ್ಯ ಜಲ ನಿಗಮದ ಅಧಿ  ಕಾರಿಗಳಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. ಏತ ನೀರಾವರಿ ಜಾರಿಗೆ ಇಲ್ಲಿನ ರೈತರಿಂದ ಬೇಡಿಕೆ ಇದೆ. ಇದನ್ನು ಜಾರಿ ಮಾಡಬೇಕು. ಬೇಕಿದ್ದರೆ ಪರ್ಯಾಯವಾಗಿ 5ಎ ಕಾಲುವೆ
ಹೊಸ ಶಾಸಕರು ಜಾರಿ ಮಾಡಿಸಿಕೊಳ್ಳಲಿ ಎಂದು ಪಟ್ಟು ಹಿಡಿದಿದ್ದಾರೆ. ಹಾಲಿ-ಮಾಜಿ ಶಾಸಕರ ನಡುವೆ ಸಂಘರ್ಷ ಶುರುವಾಗಿದ್ದು ಇಬ್ಬರ ಹಿಂದೆಯೂ ಪರ-ವಿರೋಧವಾಗಿ ರೈತರು ಧ್ವನಿಗೂಡಿಸಿದ್ದಾರೆ.

Advertisement

ಸರ್ವೇ ಕಾರ್ಯ ಸ್ಥಗಿತ: ಈಗಾಗಲೇ ವಟಗಲ್‌ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬೇಕಾದ ಸಿದ್ಧತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ. ಸರ್ವೇ ಕಾರ್ಯ ನಡೆಸಿ ಡಿಪಿಆರ್‌ ನೀಡಲು ಖಾಸಗಿ ಏಜೆನ್ಸಿಗೆ ಟೆಂಡರ್‌ ಹಂಚಿಕೆ ಮಾಡಿದ್ದು,
ಏಜೆನ್ಸಿಯಿಂದ ಇತ್ತೀಚೆಗೆ ಏತ ನೀರಾವರಿ ವ್ಯಾಪ್ತಿಗೆ ಒಳಪಡುವ ಹಳ್ಳಿಗಳು, ಕೃಷಿ ಪ್ರದೇಶದ ಸರ್ವೇ ಕಾರ್ಯ ಆರಂಭವಾಗಿದೆ. ತಾಲೂಕಿನ ಅಮೀನಗಡ, ವಟಗಲ್‌, ಚಿಲ್ಕರಾಗಿ, ಹರ್ವಾಪುರ, ಮುದಬಾಳಕ್ರಾಸ್‌ ಸೇರಿ ಹಲವು ಕಡೆ ಸರ್ವೇ ನಡೆದಿದೆ. ಆದರೆ ವಿಷಯ ತಿಳಿದ ರೈತರು ಈ ಸರ್ವೇ ಕಾರ್ಯವನ್ನೂ ವಿರೋ ಧಿಸಿದ್ದಾರೆ. ಏತ ನೀರಾವರಿ ಬೇಡ, 5ಎ ಕಾಲುವೆ ಯೋಜನೆಯೇ ಬೇಕು ಎಂದು ಪಟ್ಟು ಹಿಡಿದಿದ್ದರು. ಶಾಸಕ ಆರ್‌. ಬಸನಗೌಡ ತುರುವಿಹಾಳ ಕೂಡ ಮಧ್ಯಪ್ರವೇಶಿಸಿ, ಕೂಡಲೇ ಸರ್ವೇ ಕಾರ್ಯ ನಿಲ್ಲಿಸುವಂತೆ ಏಜೆನ್ಸಿಯವರಿಗೆ ಸೂಚನೆ ನೀಡಿದ್ದಾರೆ.
ಹೀಗಾಗಿ ಸದ್ಯಕ್ಕೆ ಸರ್ವೇ ಕಾರ್ಯವೂ ಬಂದಾಗಿದೆ.

ರೈತರ ಬೇಡಿಕೆ 5ಎ ಕಾಲುವೆಯದ್ದಾಗಿದೆ. ಹೀಗಾಗಿ ನಂದವಾಡಗಿ ಏತ ನೀರಾವರಿಗೆ ನಮ್ಮ ವಿರೋಧವಿದೆ. ಹೀಗಾಗಿ ಕೂಡಲೇ ಇದನ್ನು ನಿಲ್ಲಿಸಬೇಕು.
-ನಾಗರೆಡ್ಡಿ ಬುದ್ದಿನ್ನಿ, 5ಎ ಕಾಲುವೆ ಹೋರಾಟಗಾರ

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next