Advertisement

ಎಣ್ಣೆಹೊಳೆಯಲ್ಲಿ ಬೃಹತ್‌ ನೀರಾವರಿ ಯೋಜನೆ

10:51 PM Feb 29, 2020 | Sriram |

ವಿಶೇಷ ವರದಿ- ಅಜೆಕಾರು: ಸ್ವರ್ಣಾ ನದಿಗೆ ಎಣ್ಣೆಹೊಳೆ ಸೇತುವೆ ಬಳಿ ಅಣೆಕಟ್ಟು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಬೃಹತ್‌ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲಿದೆ. 108 ಕೋಟಿ ರೂ. ವೆಚ್ಚದ ಬೃಹತ್‌ ಅಣೆಕಟ್ಟು ಇದಾಗಿದ್ದು, ಸುಮಾರು 1,500 ಹೆಕ್ಟೇರ್‌ ಕೃಷಿ ಭೂಮಿಗೆ ನೀರು ಪೂರೈಸಲಿದೆ.

Advertisement

ಏತ ನೀರಾವರಿ ಯೋಜನೆ
ಅಜೆಕಾರು ಎಣ್ಣೆಹೊಳೆ ಸ್ವರ್ಣಾನದಿ ಲಿಫ್ಟ್ ಇರಿಗೇಷನ್‌ (ಏತ ನೀರಾವರಿ) ಯೋಜನೆಯಡಿ ಅಣೆಕಟ್ಟು ನಿರ್ಮಾಣ ಗೊಳ್ಳಲಿದೆ. ನದಿಗೆ ಅಡ್ಡಲಾಗಿ 125 ಮೀ. ಉದ್ದದ 3 ಮೀ. ಎತ್ತರದ ಬ್ಯಾರೇಜ್‌ ಕಟ್ಟಿ ನೀರು ತಡೆಗಟ್ಟಲಾಗುತ್ತದೆ. ಅಲ್ಲಿಂದ 450 ಎಚ್‌ಪಿ ಸಾಮರ್ಥ್ಯದ ಎರಡು ಪಂಪುಗಳನ್ನು ಬಳಸಿ 3 ಕಿ.ಮೀ. ಉದ್ದದ ಪೈಪ್‌ ಲೈನ್‌ ಮೂಲಕ ನೀರು ಹರಿಸಲಾಗುತ್ತದೆ.

ಬ್ಯಾರೇಜ್‌ನ ಎಡ ಭಾಗ ಪ್ರದೇಶಗಳಿಗೆ 935 ಎಚ್‌ಪಿ ಸಾಮರ್ಥ್ಯದ 3 ಪಂಪುಗಳನ್ನು ಬಳಸಿ 9.93 ಕಿ.ಮೀ ಉದ್ದದ ಪೈಪ್‌ಲೈನ್‌ ಮೂಲಕ ನೀರು ಹರಿಸಲಾಗುತ್ತದೆ. ಈ ಯೋಜನೆಯಡಿ ಸುಮಾರು 40 ಚೆಕ್‌ ಡ್ಯಾಮ್‌ಗಳನ್ನು ನಿರ್ಮಿಸಿ ಅವಶ್ಯ ನೀರು ಪೂರೈಕೆಯ ಮಾಡುವ ಯೋಜನೆ ಮಾಡಲಾಗಿದೆ.

ಕಾರ್ಕಳ ಕೆರೆಗಳಿಗೂ ನೀರು
ಕಾರ್ಕಳದ ಇತಿಹಾಸ ಪ್ರಸಿದ್ಧ ಕೆರೆಗಳಾದ ರಾಮಸಮುದ್ರ ಮತ್ತು ಆನೆಕೆರೆಗೆ ಈ ನೀರಾವರಿ ಯೋಜನೆಯ ಮೂಲಕವೇ ಜಲಮರುಪೂರಣ ಮಾಡುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ.

ಕೃಷಿಕರಿಗೆ ಅನುಕೂಲ
ಎಣ್ಣೆಹೊಳೆಯ ಇಕ್ಕೆಲಗಳಲ್ಲಿ ಇರುವ ಮರ್ಣೆ ಮತ್ತು ಹಿರ್ಗಾನ ಪಂಚಾಯತ್‌ ವ್ಯಾಪ್ತಿಯ ಕೃಷಿಕರಿಗೆ ಹೆಚ್ಚಿನ ಅನುಕೂಲ ಈ ನೀರಾವರಿ ಯೋಜನೆಯಿಂದ ಲಭ್ಯವಾಗಲಿದೆ. ಕಂದಾಯ ಗ್ರಾಮಗಳಾದ ಹೆರ್ಮುಂಡೆ, ಮರ್ಣೆ, ಹಿರ್ಗಾನ ಗ್ರಾಮಗಳ ಭತ್ತ, ತೆಂಗು, ಅಡಿಕೆ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ.

Advertisement

ಅಂತರ್ಜಲ ವೃದ್ಧಿಗೆ ಸಹಕಾರಿ
ಈ ಯೋಜನೆಯಿಂದಾಗಿ ಹಲವು ಗ್ರಾಮಗಳು ಮತ್ತು ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಹಿರ್ಗಾನ ಗ್ರಾಮದ ಹರಿಯಪ್ಪ ಕೆರೆ ಸಹಿತ ಸುತ್ತಲ ಗ್ರಾಮಗಳ ಸಣ್ಣ ಸಣ್ಣ ಕೆರೆಗಳಲ್ಲಿ ಜಲಮರುಪೂರಣಗೊಂಡು ಕೃಷಿಯ ಜತೆಗೆ ಕುಡಿಯುವ ನೀರು ಪೂರೈಕೆ ಮಾಡಲು ಸಹಕಾರಿಯಾಗಲಿದೆ.

ಓವರ್‌ಹೆಡ್‌ ಟ್ಯಾಂಕ್‌
ಯೋಜನೆಯಡಿ ವಿವಿಧೆಡೆ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಿ ನೀರು ಪೂರೈಕೆ ಮಾಡಲೂ ಉದ್ದೇಶಿಸಲಾಗಿದೆ. ವಿವಿಧೆಡೆ ನಿರ್ಮಿಸುವ ಕಿಂಡಿ ಅಣೆಕಟ್ಟುಗಳಿಗೆ ಏತ ನೀರಾವರಿ ಮೂಲಕ ನೀರು ಹಾಯಿಸಿ ಅನಂತರ ಕೃಷಿಕರು ಆ ನೀರನ್ನು ಕೃಷಿಗೆ ಬಳಸುವಂತೆ ಮಾಡಲಾಗುತ್ತದೆ.

ಪ್ರವಾಸೋದ್ಯಮಕ್ಕೂ ಅವಕಾಶ
ಅಣೆಕಟ್ಟು ನಿರ್ಮಾಣವಾಗುವ ಪ್ರದೇಶದ ಸನಿಹದಲ್ಲೇ ಸುಮಾರು ಒಂದು ಎಕರೆಯಷ್ಟು ವಿಶಾಲ ಬಯಲು ಪ್ರದೇಶವಿದ್ದು, ಇಲ್ಲಿ ಉದ್ಯಾನವನ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.

ಎಣ್ಣೆಹೊಳೆ ಪೇಟೆಗೆ ಹೊಂದಿಕೊಂಡಂತೆ ಇರುವ ಜಾಗ ಇದಾಗಿದ್ದು ಪಂಚಾಯತ್‌ ಅಧೀನದಲ್ಲಿದೆ. ಈ ಜಾಗದ ಸಮಗ್ರ ಅಭಿವೃದ್ಧಿಯಾದರೆ ಪ್ರವಾಸೋದ್ಯಮದಿಂದಲೂ ಆದಾಯ ಸಂಪಾದಿಸಬಹುದಾಗಿದೆ. ಎಣ್ಣೆಹೊಳೆಯ ಮಾರ್ಗವಾಗಿ ಶಿವಮೊಗ್ಗ, ಧರ್ಮಸ್ಥಳಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು ಉದ್ಯಾನವನ ನಿರ್ಮಾಣವಾದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಬಹುದು.

ತೂಗುಸೇತುವೆಗೆ ಮನವಿ
ಎಣ್ಣೆಹೊಳೆ ಪೇಟೆಯಿಂದ ನೆಲ್ಲಿಕಟ್ಟೆ ದೇವಸ್ಥಾನ ಸಂಪರ್ಕ ಕಲ್ಪಿಸುವಂತೆ ನದಿಗೆ ತೂಗು ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಈಗಾಗಲೇ ಮನವಿ ಮಾಡಿದ್ದು ತೂಗುಸೇತುವೆ ನಿರ್ಮಾಣವಾದಲ್ಲಿ ಪ್ರವಾಸಿ ತಾಣಕ್ಕೆ ಪೂರಕವಾಗಲಿದೆ.

ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣ
ಎಣ್ಣೆಹೊಳೆ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಲು 2021ರ ಜೂನ್‌ವರೆಗೆ ಅವಕಾಶವಿದೆಯಾದರೂ ಸಹ 2020ರ ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಂಡು ಮುಂದಿನ ಬೇಸಗೆಗೆ ನೀರು ಪೂರೈಕೆ ನಡೆಯಲಿದೆ.
-ಪ್ರವೀಣ್‌, ಕಾರ್ಯಪಾಲಕ ಎಂಜಿನಿಯರ್‌, ವಾರಾಹಿ ಯೋಜನೆ

ಕೃಷಿಕರಿಗೆ ಅನುಕೂಲ
ಎಣ್ಣೆಹೊಳೆ ಏತ ನೀರಾವರಿ ಯೋಜನೆಯಿಂದಾಗಿ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರ ಜತೆಗೆ ಅಂತರ್ಜಲ ವೃದ್ಧಿಯಾಗಿ ಕೆರೆ, ಬಾವಿಗಳ ನೀರಿನ ಮಟ್ಟ ಹೆಚ್ಚಳಗೊಳ್ಳಲಿದೆ. ವಿವಿಧ ಪಂಚಾಯತ್‌ ಹಾಗೂ ಪುರಸಭೆ ವ್ಯಾಪ್ತಿಗೆ ನೀರು ಪೂರೈಕೆಯಾಗಲಿದೆ.
-ಸುನೀಲ್‌ ಕುಮಾರ್‌, ಶಾಸಕರು, ಕಾರ್ಕಳ

ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ
ನೀರಾವರಿ ಯೋಜನೆಯಿಂದಾಗಿ ಮರ್ಣೆ ಹಾಗೂ ಹಿರ್ಗಾನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರೆಯಲಿದೆ. ನೀರಿನ ಸಮಸ್ಯೆಯಿಂದ ಪಾಳು ಬಿದ್ದ ಭೂಮಿಯಲ್ಲಿ ಕೃಷಿ ಮಾಡಲು ಸಾಧ್ಯವಾಗಲಿದೆ.
-ಹರೀಶ್‌ ನಾಯಕ್‌, ಉಪಾಧ್ಯಕ್ಷರು, ತಾ.ಪಂ. ಕಾರ್ಕಳ

ಅನುದಾನದ ಭರವಸೆ
ಈಗಾಗಲೇ ನೀರಾವರಿ ಯೋಜನೆ ಪ್ರಾರಂಭಗೊಂಡ ನದಿ ತಟದಲ್ಲಿ ಉದ್ಯಾನವನ, ವಾಕಿಂಗ್‌ ಟ್ರ್ಯಾಕ್‌, ಓಪನ್‌ ಜಿಮ್‌, ಬಯಲು ರಂಗಮಂದಿರ ನಿರ್ಮಾಣ ಮಾಡುವ ಬಗ್ಗೆ ಪಂಚಾಯತ್‌ ನಿರ್ಣಯ ಕೈಗೊಂಡು ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನದ ಭರವಸೆ ನೀಡಿದ್ದಾರೆ.
-ಗೌತಮ್‌ ನಾಯಕ್‌, ಸ್ಥಳೀಯ ಪಂಚಾಯತ್‌ ಸದಸ್ಯರು, ಮರ್ಣೆ

Advertisement

Udayavani is now on Telegram. Click here to join our channel and stay updated with the latest news.

Next