ಧಾರವಾಡ: ಇಲ್ಲಿಯ ಶ್ರೀನಗರ ಸರ್ಕಲ್‌ನಲ್ಲಿ ಇರುವ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯ ಧಾರವಾಡ ವಿಭಾಗೀಯ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಚೇರಿಯನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರ ನಿರ್ಧಾರದಿಂದ ಸರಕಾರ ಹಿಂದೆ ಸರಿದಿದೆ.
ನಿಗಮದ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಲು ಆದೇಶ ಹೊರಡಿಸಿ, ಅದರ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆದರೆ ರೈತಮುಖಂಡರ ಹೋರಾಟಕ್ಕೆ ಮಣಿದು ಸೋಮವಾರ ಸರಕಾರ ಮರು ಆದೇಶ ಹೊರಡಿಸಿ, ಕಚೇರಿಯ ಸ್ಥಳಾಂತರ ಆದೇಶ ಹಿಂಪಡೆದಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಉಂಟಾಗಿರುವ ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ನಂತರ ಅಲ್ಲಿಗೆ ಸರ್ಕಾರದ ಕೆಲ ಇಲಾಖೆಗಳ ಕಚೇರಿಗಳು ಸ್ಥಳಾಂತರವಾಗಬೇಕು ಎನ್ನುವ ಕೂಗು ಆರಂಭಗೊಂಡಿತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕೂಗಿಗೆ ಇನ್ನಷ್ಟು ಒತ್ತಡ ಹೆಚ್ಚಿತು ಕೂಡ. ಆದರೆ ಕಳೆದ ಕೆಲ ವಾರಗಳ ಹಿಂದೆ ಇದ್ದಕ್ಕಿದ್ದಂತೆ ಧಾರವಾಡದಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿಯನ್ನು ಸರ್ಕಾರ ಸುವರ್ಣ ಸೌಧಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಈ ಭಾಗದ ಜನರ ಬೇಡಿಕೆ ಇರುವುದು ಬೆಂಗಳೂರಿನಲ್ಲಿನ ಕಚೇರಿ ಸ್ಥಳಾಂತರ ಮಾಡಬೇಕು. ಆದರೆ ಅದನ್ನು ಬಿಟ್ಟು ಧಾರವಾಡದಲ್ಲಿನ ಕಚೇರಿ ಸ್ಥಳಾಂತರದ ನಿರ್ಧಾರ ಈ ಭಾಗದ ರೈತ ಮುಖಂಡರನ್ನು ಕೆರಳಿಸಿತ್ತು. ಹೀಗಾಗಿ ಇದಕ್ಕೆ ಈ ಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ರೈತ ಸೇನೆ ಮುಖ್ಯಸ್ಥ ವೀರೇಶ ಸೊಬರದಮಠ ಹಾಗೂ ಹೋರಾಟಗಾರ ಬಿ.ಡಿ. ಹಿರೇಮಠ ಅವರು, ಸರ್ಕಾರದ ಈ ಕ್ರಮದ ವಿರುದ್ಧ ತೀವ್ರ ಹೋರಾಟ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಕಚೇರಿ ಸ್ಥಳಾಂತರ ವಿಚಾರ ಈ ಭಾಗದ ರೈತ ಮುಖಂಡರು ಮತ್ತು ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗುತ್ತಿದ್ದಂತೆಯೇ ಎಚ್ಚೆತ್ತ ಸರ್ಕಾರ ಇದೀಗ ಸ್ಥಳಾಂತರ ರದ್ದು ಮಾಡಿದೆ.
ಅಹೋರಾತ್ರಿ ಧರಣಿ ಅಂತ್ಯ: ಸೆ.11ರಿಂದ ನಿಗಮದ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದ್ದ ರೈತ ಸೇನಾ ಕರ್ನಾಟಕ ಅಧ್ಯಕ್ಷ ವಿರೇಶ ಸೊಬರದಮಠ ಹೋರಾಟಕ್ಕೆ ಹಿರಿಯ ಹೋರಾಟಗಾರ ಬಿ.ಡಿ.ಹಿರೇಮಠ, ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡಿದ್ದವು. ಅದಕ್ಕಾಗಿ ಡಿಸಿ ಕಚೇರಿ ಎದುರು ಪ್ರತಿಭಟನೆ ಕೈಗೊಂಡಿದ್ದವು. ಇದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ನಿಯೋಗ ತೆರಳಿ ಕಚೇರಿ ಸ್ಥಳಾಂತರ ಆಗದಂತೆ ಮನವಿ ಸಲ್ಲಿಸುವುದರ ಜತೆಗೆ ಕಚೇರಿಗೆ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿತ್ತು. ಇದಲ್ಲದೇ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ನೇರವಾಗಿ ಭೇಟಿ ಮಾಡಿ ಕಚೇರಿ ಸ್ಥಳಾಂತರ ಮಾಡದಂತೆ ಮನವಿ ಮಾಡಲಾಗಿತ್ತು. ಕಳೆದ 10 ದಿನಗಳಿಂದ ಹೋರಾಟದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಹೋದ ಪರಿಣಾಮ ಈಗ ಸರಕಾರ ಕಚೇರಿ ಸ್ಥಳಾಂತರ ಕೈಬಿಟ್ಟಿದ್ದು, ಇದರಿಂದ ರೈತರ ಮುಖಂಡರ ಅಹೋರಾತ್ರಿ ಧರಣಿಯೂ ಅಂತ್ಯಗೊಂಡಿದೆ.
ಕಳೆದ ಹತ್ತು ದಿನಗಳಿಂದ ನಡೆದ ರೈತ ಪರ ಹೋರಾಟಕ್ಕೆ ಕೊನೆಗೂ ಮಣಿದು ಸರಕಾರ ಸ್ಪಂದಿಸಿದೆ. ಇದಲ್ಲದೇ ಕಚೇರಿಗೆ ಇರುವ ಕಟ್ಟಡದ ಕೊರತೆ ನೀಗಿಸಲು ಸಹ ಮುಂದಾಗಬೇಕು. ನುಗ್ಗಿಕೇರಿ ಹನುಮಪ್ಪನ ದೇವಸ್ಥಾನ ಎದುರಿನ ಗುಡ್ಡದ 2 ಎಕರೆ ಜಾಗವನ್ನು ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿದ್ದು, ಆದಷ್ಟು ಬೇಗ ಈ ಜಾಗ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಇದಾದ ಬಳಿಕ 2018ರಲ್ಲಿಯೇ ಮೀಸಲಿಟ್ಟಿರುವ 4.20 ಕೋಟಿ ಹಣದಿಂದ ಕಟ್ಟದ ನಿರ್ಮಾಣಕ್ಕೂ ಚಾಲನೆ ನೀಡಬೇಕು. –
ವೀರೇಶ ಸೊಬರದಮಠ, ಅಧ್ಯಕ್ಷ, ರೈತ ಸೇನಾ ಕರ್ನಾಟಕ
ನೀರಾವರಿ ನಿಗಮ ಕಚೇರಿ ಧಾರವಾಡದಲ್ಲಿ ಉಳಿಸಿದರೆ ಸಾಲದು. ಬೆಂಗಳೂರು ವಿಧಾನ ಸೌಧದಲ್ಲಿನ ಆಡಳಿತ ಕಚೇರಿ ಪ್ರಮುಖ ಇಲಾಖೆಗಳು ಸಹ ಬೆಳಗಾವಿ ಸುವರ್ಣ ಸೌಧಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಕ್ರಮ ವಹಿಸಬೇಕು.
– ಬಿ.ಡಿ.ಹಿರೇಮಠ, ಹಿರಿಯ ಹೋರಾಟಗಾರ
ರೈತರ ಮುಖಂಡ ಹೋರಾಟದ ಫಲದಿಂದ ಧಾರವಾಡದಲ್ಲಿ ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿಯನ್ನು ಧಾರವಾಡದಲ್ಲೇ ಮುಂದುವರಿಸಲು ಸರ್ಕಾರ ಆದೇಶ ಮಾಡಿದೆ. ಈ ಹೋರಾಟಕ್ಕೆ ಬೆಂಬಲಿಸಿದ ಎಲ್ಲ ಸಂಘಟನೆಗಳಿಗೆ ಹಾಗೂ ರೈತರಿಗೆ, ಜನಪ್ರತಿನಿಧಿಗಳಿಗೆ ಅಭಿನಂದನೆಗಳು.-
ಎನ್.ಎಚ್.ಕೋನರೆಡ್ಡಿ, ಮಾಜಿ ಶಾಸಕ.