ಕೋಲಾರ: ನಗರದಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟವು 334 ನೇ ದಿನ ಪೂರೈಸಿದ್ದು, ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಧರಣಿಯನ್ನು ಮುಂದುವರೆಸಿದರು. ಮುಖಂಡರಾದ ವಿ.ಮುನಿವೆಂಕಟೇಶಪ್ಪ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಲಾಭದಾಯಕ ಕೆಲಸಗಳಲ್ಲಿ ನಿರತರಾಗಿದ್ದಾರೆ.
ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ತಮ್ಮ ಕೆಲಸಗಳಿಗೆ ಹಾಗೂ ಅಧಿಕಾರದ ಅನುಕೂಲಕ್ಕಾಗಿ ತಮ್ಮ ಬೆಂಬಲಿಗರ ಕೆಲಸಗಳನ್ನು ಮಾಡಿಸುತ್ತಾ ಸಾರ್ವಜನಿಕರಿಗೆ ಒಂದು ಸಣ್ಣ ಕೆಲಸವಾಗಬೇಕಾದರೂ ಸಹ ತಿಂಗಳು ಕಟ್ಟಲೆ ಅಲೆದಾಡಿಸುತ್ತಾರೆ. ಈ ನಿಟ್ಟಿನಲ್ಲಿ ಜನತೆಯು ವೋಟನ್ನು ಹಾಕಿ ಗೆಲ್ಲಿಸಿದ ಪರಿಣಾಮ ಈ ಪರಿಸ್ಥಿತಿ ಬಂದೊದಗಿದೆ. ಪ್ರತಿನಿತ್ಯವೂ ನೀರಿಗಾಗಿ ಬೀದಿಗಳಲ್ಲಿ ನೀರಿನ ಕೊಡಗಳನ್ನು ಹಿಡಿದು ಮಹಿಳೆಯರು ಎಲ್ಲಿ ನೀರುಬರುತ್ತದೆಯೋ ಎಂದು ಕಾದುನೋಡುವ ಪರಿಸ್ಥಿತಿ ಉಂಟಾಗಿದೆ ಎಂದು ವಿಷಾದಿಸಿದರು.
ಹೋರಾಟಕ್ಕಿಲ್ಲ ಕಿಮ್ಮತ್ತು: ಸಂಚಾಲಕ ಡಾ.ರಮೇಶ್ ಮಾತನಾಡಿ, ಜಿಲ್ಲೆಗೆ ಶಾಶ್ವತ ನದಿ ನೀರನ್ನು ಹರಿಸುವ ಸ್ಪಷ್ಠ ತೀರ್ಮಾನಗಳನ್ನು ಸರ್ಕಾರವಾಗಲಿ ಜಿಲ್ಲೆಯ ಜನಪ್ರತಿನಿಧಿಗಳಾಗಲಿ ಜನರಿಗೆ ತಿಳಿಸದೆ ಮೂರ್ಖರಾಗಿ ಆಡಳಿತ ನಡೆಸುತ್ತಿದ್ದಾರೆ. ಸುಮಾರು 30 ವರ್ಷಗಳಿಂದಲೂ ಶಾಶ್ವತ ನೀರಾವರಿಗಾಗಿ ಹೋರಾಟಗಳು ನಡೆದರೂ ಕೇವಲ ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನಗೊಳಿಸದೆ ಈತನಕ ಯಾಮಾರಿಸಿಕೊಂಡು ಬಂದಿದ್ದಾರೆ.
ಈಗಲೂ ಸಹ ಎತ್ತಿನಹೊಳೆ ಯೋಜನೆಯು ಕೋಲಾರ ಜಿಲ್ಲೆಯ ತನಕ ಹರಿದು ಬರುವುದು ಅನುಮಾನವಾಗಿದೆ. ಆದರೂ ಸರ್ಕಾರ ಮತ್ತು ಜನಪ್ರತಿನಿಧಿಗಳು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು. ಸಂಚಾಲಕ ನಗರಸಭಾ ಸದಸ್ಯರು ಮಾತನಾಡಿ, ಒಂದು ವರ್ಷದ ಹಿಂದೆ ಮುಖ್ಯಮಂತ್ರಿಗಳು ಕೃಷ್ಣಾದಲ್ಲಿ ಹೋರಾಟಗಾರರು ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ
-ನಿರ್ಧಿಷ್ಠವಾದ ನೀರಿನ ಲಭ್ಯತೆ ಇಲ್ಲವೆಂದು ಸಾಭೀತುಪಡಿಸಿದಾಗ ಅಂದಿನ ಸಭೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ಬೇರೆ ಬೇರೆ ನದಿ ಮೂಲಗಳನ್ನು ತಿರುಗಿಸುವ ಸಮಿತಿಯ ವರದಿಯನ್ನು ಪಡೆದು ಅನುಷ್ಠಾನಗೊಳಿಸುವುದಾಗಿ ತಿಳಿಸಿ ಈತನಕ ಕೇವಲ ಒಂದು ಸಭೆಯನ್ನು ಕಾಟಾಚಾರಕ್ಕೆ ಮಾಡಿದ್ದು, ಕೊಟ್ಟ ಮಾತನ್ನು ನೆರವೇರಿಸದೆ ವಚನ ಭ್ರಷ್ಠರಾಗಿದ್ದಾರೆ ಗಂಭೀರ ಆರೋಪ ಮಾಡಿದ್ದಾರೆ.
ನೀರಾವರಿ ಸಂಚಾಲಕರಾದ ಕುರುಬರಪೇಟೆ ವೆಂಕಟೇಶ್, ಅಹಿಂದ ಮಂಜುನಾಥ್, ವಿ.ಕೆ. ರಾಜೇಶ್, ಗಾಂಧಿನಗರ ಮುಖಂಡರಾದ ಶ್ರೀನಿವಾಸ್, ಶ್ರೀರಂಗಣ್ಣ, ಆಂಜನೇಯರೆಡ್ಡಿ, ಆನಂದರೆಡ್ಡಿ, ರುದ್ರೇಶ್, ಉಮೇಶ್, ರಮೇಶ್, ಉದಯ್, ಶ್ರೀನಾಥ್, ಅಮರ್, ಮಂಜು, ನಾಗೇಂದ್ರ, ವಿಶ್ವನಾಥ್, ಶಾಂತ ಕುಮಾರ್ ಮತ್ತಿತರರು ಹಾಜರಿದ್ದರು.