ತಿ.ನರಸೀಪುರ: ರೈತರು ಕೃಷಿಯಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಳಸಿ, ಸಾಗುವಳಿ ವೆಚ್ಚ ಕಡಿಮೆ ಮಾಡಿ ಉತ್ಪಾದನೆಯನ್ನು ವೃದ್ಧಿಸಿಕೊಂಡು ಅಧಿಕ ಲಾಭ ಪಡೆಯಬೇಕು. ಮಿತ ನೀರಿನ ಬಳಕೆಗಾಗಿ ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ದೊರೆಯುವ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಉಪಾಧ್ಯಕ್ಷ ಕೈಯಂಬಳ್ಳಿ ಜಿ.ನಟರಾಜು ಹೇಳಿದರು.
ಪಟ್ಟಣದ ಬಾಬು ಜಗಜೀವನ್‌ರಾಂ ಸಮುದಾಯ ಭವನದಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರನ್ನು ಜಾಗೃತಿಗೊಳಿಸಲು ಕೃಷಿ ಅಭಿಯಾನಕ್ಕೆ ಯಶಸ್ವಿಯಾಗುತ್ತಿದ್ದು, ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯಗಳು ಶೇ.90ರ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು, ಉತ್ತಮ ಆರೋಗ್ಯಕ್ಕಾಗಿ ರೈತರು ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ಕೃಷಿ ಇಲಾಖೆಯಿಂದ ನೀಡಬೇಕು ಎಂದರು.
ತಾಪಂ ಅಧ್ಯಕ್ಷ ಸಿ.ಚಾಮೇಗೌಡ ಮಾತನಾಡಿ, ರೈತರು, ಕೃಷಿ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇದ್ದರೆ ಕೃಷಿಯ ಪ್ರಗತಿಗೆ ಸರ್ಕಾರ ಜಾರಿಗೆ ತರುವ ಎಲ್ಲಾ ಯೋಜನೆಗಳು ಕಾಲ ಕಾಲಕ್ಕೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತವೆ. ಕೃಷಿಗೆ ಪೂರಕವಾಗಿರುವ ಇಲಾಖೆಗಳು ಕೂಡ ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು. ಕೃಷಿ ಅಧಿಕಾರಿಗಳು ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಹೆಚ್ಚು ನಿಗಾವಹಿಸಿ ಕೆಲಸ ನಿರ್ವಹಿಸಲು ಸಲಹೆ ನೀಡಿದರು.
ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದ ವ್ಯಾಪ್ತಿಯ ಕಸಬಾ ಹೋಬಳಿಯ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಸಹಭಾಗಿತ್ವ ವಹಿಸಬೇಕಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಕಿಡಿಕಾರಿದ ತಾಪಂ ಸದಸ್ಯ ಎಂ.ರಮೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನಡಾವಳಿಯಲ್ಲಿ ಗೈರು ಹಾಜರಾದವರ ಅಧಿಕಾರಿಗಳ ಹೆಸರನ್ನು ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸು ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎನ್.ಕೃಷ್ಣಮೂರ್ತಿ ಅವರನ್ನು ಒತ್ತಾಯಿಸಿದರು.
ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಗಗೇಶ್ವರಿ ಜಿಪಂ ಕ್ಷೇತ್ರದ ಸದಸ್ಯೆ ಜಯಮ್ಮ ಶಿವಸ್ವಾಮಿ ಕೃಷಿ ಅಭಿಯಾನದ ಬಗ್ಗೆ ವಿವರ ಪಡೆದುಕೊಂಡರು. ಕೃಷಿ ವಿಜಾnನಿ ಅರಸು ಮಲ್ಲಯ್ಯ ಬೇಸಾಯ ಪದ್ಧತಿ ಬಗ್ಗೆ ತಿಳಿಸಿಕೊಟ್ಟರೆ, ರೇಷ್ಮೆ ಸಹಾಯಕ ನಿರ್ದೇಶಕ ಕೃಷ್ಣ ಹಾಗೂ ಪಶುಪಾಲನೆ ಸಹಾಯಕ ನಿರ್ದೇಶಕ ಡಾ.ಚಿನ್ನಸ್ವಾಮಿ ಇಲಾಖೆಯಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ಬಿ.ಶಂಕರಯ್ಯ, ತಾಪಂ ಸದಸ್ಯ ಪುಷ್ಪ ಪ್ರಭುಸ್ವಾಮಿ, ಬಿ.ಸಾಜಿದ್ ಅಹಮ್ಮದ್, ಮಾಜಿ ಅಧ್ಯಕ್ಷ ತುಂಬಲ ಅಂದಾನಿ, ಕೃಷಿಕ ಸಮಾಜದ ಉಪಾಧ್ಯಕ್ಷ ಆಲಗೂಡು ನಾಗರಾಜು, ಕಸಬಾ ಪಿಎಸಿಸಿಎಸ್ ಅಧ್ಯಕ್ಷ ಮಲ್ಲಣ್ಣ, ಗ್ರಾಪಂ ಉಪಾಧ್ಯಕ್ಷೆ ಚಂದ್ರಮ್ಮ, ಮಾಜಿ ಅಧ್ಯಕ್ಷ ಚುಂಚೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಬಿ.ಶಿವಸ್ವಾಮಿ, ಪ್ರಗತಿಪರ ರೈತ ಬನ್ನೂರು ನಾರಾಯಣ,
-ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಕಿರಗಸೂರು ಶಂಕರ್, ಕೃಷಿ ಅಧಿಕಾರಿಗಳಾದ ವಿಜಯಲಕ್ಷಿ, ಹೆಚ್.ಎಸ್.ಸುಧಾ, ಕೃಷ್ಣ, ಸ್ವಾಮಿ, ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್, ಲೆಕ್ಕಾಧಿಕಾರಿ ಎಂ.ಮಹೇಂದ್ರ, ಎನ್.ರಂಗಸ್ವಾಮಿ, ಅನುವುಗಾ ರರವಾದ ಎಂ.ಸಂಜೀವ್, ಡಿ.ಸತೀಶ್, ಶಿವಮೂರ್ತಿ, ಎ.ರವಿ, ಆರ್.ಸಿದ್ದರಾಜು, ಸೋಸಲೆ ಚಂದ್ರಶೇಖರ್, ಮುದ್ದಪ್ಪ, ಗುರುಸ್ವಾಮಿ ಹಾಗೂ ರೈತರು ಹಾಜರಿದ್ದರು.