Advertisement

ಜಮೀನಿಗೆ ನೀರು ತಲುಪದಿದ್ದರೆ ಪ್ರತಿಭಟನೆ

04:26 PM Nov 15, 2020 | Suhan S |

ಯಾದಗಿರಿ: ಬಂದಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಜಲಾಶಯದಿಂದ ನೀರು ತಲುಪುತ್ತಿಲ್ಲ ಎಂದು ಗ್ರಾಮದ ರೈತರು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಅಭಿಯಂತರರು ಸಕಾಲಕ್ಕೆ ಸರ್ಕಾರದಿಂದ 2 ಜಲಾಶಯಗಳ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆಯಾಗುತ್ತಿಲ್ಲ ಹಾಗಾಗಿ ಸಮಸ್ಯೆ ಉದ್ಭವಿಸಿದೆ ಎಂದು ಹೇಳುತ್ತಿದ್ದಂತೆ ಆಕ್ರೋಶಗೊಂಡ ಶಾಸಕರು ರೈತರೊಂದಿಗೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಶನಿವಾರ ಹತ್ತಿಕುಣಿ ಜಲಾಶಯ ಆವರಣದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಮುಂಗಾರು ಮಳೆ ಉತ್ತಮವಾಗಿರುವುದು ತಾಲೂಕಿನ ಹತ್ತಿಕುಣಿ ಜಲಾಶಯ ಹಾಗೂ ಸೌದಾಗರ ಜಲಾಶಯ ಭರ್ತಿಯಾಗಿದ್ದು, ರೈತರಲ್ಲಿ ಸಂತಸ ಮೂಡಿದೆ. ಆದರೆ ಉಭಯ ಜಲಾಶಯಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಕಂಡು ಬಂದಿದೆ. ಕೂಡಲೇ ಯಂತ್ರಗಳ ಬಳಕೆಯಿಂದ ಕಾಲುವೆಗಳಲ್ಲಿರುವ ಹೂಳು ತೆಗೆದು ನೀರು ಬಿಡಬೇಕು ಎಂದು ಗುರುಮಠಕಲ್‌ ಮತಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳು ನನ್ನ ಗಮನಕ್ಕೆ ಇಲ್ಲಿನ ಸಿಬ್ಬಂದಿ ಕೊರತೆ ಹಾಗೂ ಕಾಲುವೆಗಳ ದುರಸ್ತಿ ಕಾಮಗಾರಿ ಇನ್ನಿತರ ಸಮಸ್ಯೆಗಳನ್ನು ಸಕಾಲಕ್ಕೆ ತಂದಿಲ್ಲ. ವರ್ಷದಲ್ಲಿ ಕೆಲ ಬಾರಿ ಜಲಾಶಯಗಳಿಗೆ ಬಂದು ಹೋದರೆ ರೈತರ ವಾಸ್ತವಿಕ ಪರಿಸ್ಥಿತಿ ತಿಳಿಯುವುದು ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.

ಈ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಅವಧಿಯಲ್ಲಿ 2 ಜಲಾಶಯಗಳ ಅಭಿವೃದ್ಧಿಗಾಗಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ 20 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದೆ, ಆದರೆ ನಮ್ಮ ದುರ್ದೈವ ಬಿಜೆಪಿ ಪಕ್ಷದ ಮೋಸದಿಂದ ಸರ್ಕಾರ ಪತನವಾಯಿತು ಎಂದು ವಿಷಾದಿಸಿದರು. ರೈತರು ಕೂಡ ಸಹಕಾರದಿಂದ ಜಲಾಶಯದ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ ತಮ್ಮ ಬೆಳೆಗೆ ಬಳಸಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.

ಹೊನಗೇರಾ ರೈತರು ಮಾತನಾಡಿ, ದುಬಾರಿ ಬೆಲೆಯ ಶೇಂಗಾ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿ, 1 ತಿಂಗಳು ಕಳೆದಿದೆ, ನೀರಿಲ್ಲದೆ ಬೆಳೆ ಬಾಡುತ್ತಿದೆ ಕೂಡಲೇ 4-5 ದಿನಗಳಲ್ಲಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಹತ್ತಿಕುಣಿ ಜಲಾಶಯದಿಂದ 15 ಉಪ ಕಾಲುವೆವರೆಗೆ ಶೇಂಗಾ ಬಿತ್ತನೆ ಮಾಡಿದ ರೈತರಿಗೆ ನೀರು ಪೂರೈಸುವುದು, 18 ಉಪ ಕಾಲುವೆವರೆಗೆ ಜೋಳ ಬಿತ್ತನೆ ಮಾಡಿದ ರೈತರಿಗೆ ನೀರು ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಧಿಕಾರಿಗಳು ಹೇಳಿದರು.

ಸೌದಾಗರ ಜಲಾಶಯ ಕುರಿತು ರೈತರೊಂದಿಗೆ ಹಾಗೂ ಅಧಿ ಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ಕೊನೆಗೆ ಜಲಾಶಯದ 9 ಉಪ ಕಾಲುವೆವರೆಗೆ ನೀರು ಬಿಡಲು ನಿರ್ಧರಿಸಿ ಮೊದಲು ನ.22 ರಂದು ಹತ್ತಿಕುಣಿ ಜಲಾಶಯದಿಂದ  ಕಾಲುವೆಗೆ ನೀರು ಬಿಡಬೇಕು. ನಂತರ ನ.28 ರಂದು ಸೌದಾಗರ ಜಲಾಶಯದಿಂದ ನೀರು ಬಿಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಸಂಗಮನಾಥ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೈಲಾಸ್‌ ಅನವಾರ್‌, ಇಂಜಿನಿಯರಗಳಾದ ಸಿದ್ದಾರೂಢ, ಪ್ರಭಾಕರ, ಭೀಮಣ್ಣ, ಹತ್ತಿಕುಣಿ ನೀರು ಬಳಕೆದಾರ ಸಹಕಾರ ಸಂಘ ಮಹಾ ಮಂಡಳದ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ, ಸೌದಾಗರ ಜಲಶಾಯ ನೀರು ಬಳಕೆದರ ಸಹಕಾರ ಸಂಘ ಮಹಾ ಮಂಡಳದ ಅಧ್ಯಕ್ಷ ಮಹಿಪಾಲರೆಡ್ಡಿ ಹತ್ತಿಕುಣಿ, ಅಮೀನರೆಡ್ಡಿ, ಶರಣಪ್ಪ ದುಗ್ಗಾಣಿ, ಸುಭಾಸಶ್ಚಂದ್ರ ಹೊನಗೇರಾ, ಭೊಜಣಗೌಡ ಯಡ್ಡಳ್ಳಿ, ರವಿಗೌಡ ಪಾಟೀಲ್‌ ಹತ್ತಿಕುಣಿ, ಚಂದ್ರಾರೆಡ್ಡಿ ದಳಪತಿ, ಲಿಂಗಾರೆಡ್ಡಿ ಯಡ್ಡಳ್ಳಿ, ಸುಭಾಶ ನಾಯಕ, ದೇವಿಂದ್ರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next