ಮುಂಬೈ: ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ (53) ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ವಿಧಿವಶರಾಗಿರುವುದಾಗಿ ಮೂಲಗಳು ತಿಳಿಸಿವೆ. ಖಾನ್ ನಿಧನ ಬಾಲಿವುಡ್ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಗಣ್ಯರು ಕಂಬನಿ ಮಿಡಿದಿದ್ದಾರೆ.
ದೊಡ್ಡ ಕರುಳು ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರನ್ನು ಮಂಗಳವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗದ ಬಗ್ಗೆ ಆಪ್ತ ಕಾರ್ಯದರ್ಶಿ ಪ್ರಕಟಣೆ ಮೂಲಕ ತಿಳಿಸಿದ್ದರು.
ಇರ್ಫಾನ್ ಅವರು ದೊಡ್ಡ ಕರುಳಿನ ಸೋಂಕಿನ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ವಿವರಿಸಿತ್ತು. ನಟನ ಅಧಿಕೃತ ವಕ್ತಾರ ನೀಡಿರುವ ಪ್ರಕಟಣೆ ಪ್ರಕಾರ, ಹೌದು…ಇರ್ಫಾನ್ ಖಾನ್ ಅವರು ಕೋಕಿಲಾಬೆನ್ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ. ನಾವು ಪ್ರತಿ ಸಮಯದ ವಿವರವನ್ನು ತಿಳಿಸುತ್ತೇವೆ. ಇರ್ಫಾನ್ ಅವರು ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೂ ಅವರ ಧೈರ್ಯ ಮತ್ತು ಸಾಮರ್ಥ್ಯವೇ ಅವರಿಗೆ ಹೋರಾಡಲು ಶಕ್ತಿ ನೀಡಿತ್ತು. ಅವರಲ್ಲಿ ಅದ್ಭುತವಾದ ಇಚ್ಛಾಶಕ್ತಿ ಇದೆ. ಅವರು ಆರೋಗ್ಯದಿಂದ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ತಿಳಿಸಿದ್ದರು.
ಇತ್ತೀಚೆಗೆ ಇರ್ಫಾನ್ ತಾಯಿ ಸಯೀದಾ ಬೇಗಂ(95ವರ್ಷ) ಅವರು ವಯೋಸಹಜ ಖಾಯಿಲೆಯಿಂದ ಜೈಪುರದಲ್ಲಿ ನಿಧನರಾಗಿದ್ದರು. ಆದರೆ ಪುತ್ರ ಇರ್ಫಾನ್ ಗೆ ಲಾಕ್ ಡೌನ್ ನಿಂದಾ ಮುಂಬೈನಲ್ಲಿ ಇದ್ದಿದ್ದು, ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲವಾಗಿತ್ತು.
ನಟ ಇರ್ಫಾನ್ ಖಾನ್ (54ವರ್ಷ) ಅವರು ನ್ಯೂರೋಎಂಡೋಕ್ರೈನ್ ಸಮಸ್ಯೆಯಿಂದ ಬಳಲುತ್ತಿದ್ದು, ಇದಕ್ಕಾಗಿ ತಾನು ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು 2018ರಲ್ಲಿ ಘೋಷಿಸಿದ್ದರು. ಇದಕ್ಕಾಗಿ ಅವರು ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದರು.
ಬಾಲಿವುಡ್ ನ ವಾರಿಯರ್, ಮಕ್ಬೂಲ್, ಹಾಸಿಲ್, ಪಾನ್ ಸಿಂಗ್ ತೋಮರ್, ರೋಗ್. ಲೈಫ್ ಆಫ್ ಪೈ, ನೇಮ್ ಸೇಕ್, ಸೇರಿದಂತೆ ಹಲವು ಚಿತ್ರಗಳ ಮೂಲಕ ಇರ್ಫಾನ್ ಚಿತ್ರಪ್ರೇಮಿಗಳ ಮನಗೆದ್ದಿದ್ದರು.