ಹೊಸದಿಲ್ಲಿ: ದೇಶದಲ್ಲಿ ಕೋವಿಡ್ 19 ಸೋಂಕುಪೀಡಿತರ ಒಟ್ಟು ಸಂಖ್ಯೆ 31.50 ಲಕ್ಷಕ್ಕೆ ಏರಿಕೆಯಾಗಿದೆ ಮತ್ತು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 60,975 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ತಜ್ಞರು ಹೊಸ ಆತಂಕ ಒಂದನ್ನು ಹೊರ ಹಾಕಿದ್ದಾರೆ. ಅದೇನೆಂದರೆ ನಮ್ಮಲ್ಲಿ ವಯಸ್ಸಿನ ಬೇಧವಿಲ್ಲದೆ ಈ ಸೋಂಕು ವ್ಯಾಪಕವಾಗಿ ಹರಡುತ್ತಿದೆ.
ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸರಿಯಾಗಿ ಮಾಸ್ಕ್ ಧರಿಸದಿರುವಿಕೆ ಮತ್ತು ಇನ್ನಿತರ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಇರುವಂತ ವ್ಯಕ್ತಿಗಳೇ ಈ ಸೋಂಕಿನ ವಾಹಕರಾಗಿದ್ದಾರೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಕೋವಿಡ್ 19 ಸೋಂಕಿಗೆ ಯುವಕರು ಅಥವಾ ವಯಸ್ಸಾದ ವ್ಯಕ್ತಿಗಳೇ ಒಳಗಾಗುತ್ತಿದ್ದಾರೆ ಎಂದು ನಾನು ಖಚಿತವಾಗಿ ಹೇಳಲಾರೆ. ಆದರೆ ನಮ್ಮಲ್ಲಿ ಬೇಜವಾಬ್ದಾರಿತನ ತೋರುವವರೇ ಈ ಸೋಂಕಿನ ವಾಹಕರಾಗಿದ್ದಾರೆ ಎಂಬುದನ್ನು ಮಾತ್ರ ನಾನು ಖಚಿತವಾಗಿ ಹೇಳಬಲ್ಲೆ’ ಎಂದು ICMRನ ಡೈರೆಕ್ಟರ್ ಜನರಲ್ ಡಾ. ಬಲರಾಮ ಭಾರ್ಗವ ಅವರು ಹೇಳಿದ್ದಾರೆ.
Related Articles
ಕೋವಿಡ್ 19 ಸೋಂಕಿಗೆ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆ ಭರದಿಂದ ಸಾಗಿದೆ ಎಂದು ಡಾ. ಭಾರ್ಗವ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಸೀರಂ ಇನ್ ಸ್ಟಿಟ್ಯೂಟ್ ಹೊರತರಲು ಉದ್ದೇಶಿಸಿರುವ ಲಸಿಕೆ 2ಬಿ ಹಂತದಲ್ಲಿದೆ ಹಾಗೂ ಭಾರತ್ ಬಯೋಟೆಕ್ ಮತ್ತು ಝೈಡಸ್ ಕ್ಯಾಡಿಲ್ಲಾ ಲಸಿಕೆಗಳು ಒಂದನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.