Advertisement

ನಗರಸಭಾಧ್ಯಕ್ಷರಿಗೆ ಅಗೌರವ: ನಗರ ಕಾಂಗ್ರೆಸ್‌ ಖಂಡನೆ

04:42 PM Mar 19, 2017 | Team Udayavani |

ಮಡಿಕೇರಿ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆ ಎನ್ನುವ ಗೌರವ ತೋರದೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರನ್ನು ಅಪಮಾನಿಸಿದ ಉಪಾಧ್ಯಕ್ಷರ ಕ್ರಮವನ್ನು ಖಂಡಿಸುವುದಾಗಿ ನಗರ ಕಾಂಗ್ರೆಸ್‌ ಅಧ್ಯಕ್ಷ ಕೆ.ಯು. ಅಬ್ದುಲ್‌ ರಜಾಕ್‌ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ “ಮಾನ ಮರ್ಯಾದೆ’ ಎನ್ನುವ ಪದ ಬಳಕೆ ಮಾಡಿ ಸದಸ್ಯರೊಬ್ಬರು ಅಗೌರವ ತೋರಿದ್ದರು. ಈ ಬಾರಿಯ ಸಭೆಯಲ್ಲಿ ತಾಳ್ಮೆ ಕಳೆೆದುಕೊಂಡ ಉಪಾಧ್ಯಕ್ಷರು ಅತಿರೇಕದ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು. 

Advertisement

ಸಿನೆಮಾ ನೋಡಿದ ಕಾಂಗ್ರೆಸ್‌ ಸದಸ್ಯರು
ಅಧ್ಯಕ್ಷರಿಗೆ ಅವಮಾನವಾಗುತ್ತಿದ್ದರೂ ಕಾಂಗ್ರೆಸ್‌ ಪಕ್ಷದ ಮಹಿಳಾ ಸದಸ್ಯರು ಮೌನಕ್ಕೆ ಶರಣಾಗಿದ್ದರು, ಅಲ್ಲದೆ ಬಾಲ್ಕನಿಯಲ್ಲಿ ಕುಳಿತು ಸಿನಿಮಾ ನೋಡುತ್ತಿದ್ದಂತೆ ನೋಡು ತ್ತಿದ್ದರು. ಕಾಂಗ್ರೆಸ್‌ ಸದಸ್ಯರ ಈ ಕ್ರಮ ಖಂಡನೀಯವೆಂದು ಅಬ್ದುಲ್‌ ರಜಾಕ್‌ ಅಸಮಾಧಾನ ವ್ಯಕ್ತಪಡಿಸಿದರು.

ಉಪಾಧ್ಯಕ್ಷರಾದವರಿಗೆ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಲು ನಿಯಮಾನುಸಾರ ಅವಕಾಶವಿಲ್ಲವೆಂದ ಅವರು, ನಗರದ ಪ್ರಥಮ ಪ್ರಜೆ ಕಾವೇರಮ್ಮ ಸೋಮಣ್ಣ ಅವರಿಗೆ ಆದ ಅವಮಾನ ಇಡೀ ಮಹಿಳಾ ಸಮೂಹಕ್ಕೆ ಆದ ಅವಮಾನವೆಂದು ಅಭಿಪ್ರಾಯಪಟ್ಟರು. ನಗರದ ಜನತೆ ಅಭಿವೃದ್ಧಿಯ ದೃಷ್ಟಿಯಿಂದ ಸದಸ್ಯರುಗಳನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆಯೇ ಹೊರತು ಗಲಾಟೆ ಮಾಡಲು, ಅವಾಚ್ಯ ಶಬ್ದಗಳನ್ನು  ಬಳಸಲು ಗೆಲ್ಲಿಸಿಲ್ಲವೆಂದರು. ತಮ್ಮ ಸ್ವಂತ ವಿಚಾರಗಳನ್ನು ಮನೆಯಲ್ಲಿಟ್ಟುಕೊಳ್ಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಅಬ್ದುಲ್‌ ರಜಾಕ್‌, ಜನಪರ ಕಾಳಜಿಯಿಂದ ಆರೋಗ್ಯ ಪೂರ್ಣ ಚರ್ಚೆ ನಡೆಸಲಿ ಎಂದು ಒತ್ತಾಯಿಸಿದರು.

ಕಣ್ಣಾಮುಚ್ಚಾಲೆ ಆಡುತ್ತಿದ್ದರೇ ? 
ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಮಹದೇವಪೇಟೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಆರಂಭದಲ್ಲೆ ಸಾರ್ವಜನಿಕರು ಕಳಪೆ ಕಾಮಗಾರಿಯ ಕುರಿತು ಪ್ರತಿಭಟನೆ ನಡೆಸಿದ್ದಾರೆ. ಅಂದು ಸಾರ್ವಜನಿಕರ ಕೂಗಿಗೆ ಸ್ಪಂದಿಸದ 23 ಸದಸ್ಯರುಗಳು ಇಂದು ಸಾಮಾನ್ಯ ಸಭೆಯಲ್ಲಿ ಕಳಪೆ ಕಾಮಗಾರಿ ಎಂದು ಧ್ವನಿ ಎತ್ತುತ್ತಿರುವುದರ ಉದ್ದೇಶವೇನೆಂದು ಪ್ರಶ್ನಿಸಿದರು. ಕಳಪೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಮಹದೇವಪೇಟೆ ವ್ಯಾಪ್ತಿಯಲ್ಲಿರುವ ನಗರಸಭೆಯ ನಾಲ್ವರು ಸದಸ್ಯರು ಕಣ್ಣಾ ಮುಚ್ಚಾಲೆ ಆಡುತ್ತಿದ್ದರೇ ಎಂದು ಅಬ್ದುಲ್‌ ರಜಾಕ್‌ ಖಾರವಾಗಿ ನುಡಿದರು.
ಈ ಹಿಂದೆ ಜುಲೇಕಾಬಿ ಹಾಗೂ ಶ್ರೀಮತಿ ಬಂಗೇರ ಅವರು ಅಧ್ಯಕ್ಷರಾಗಿದ್ದಾಗ ಯಾರೂ ಗಲಾಟೆ ಮಾಡುತ್ತಿರಲಿಲ್ಲ.

ಆದರೆ, ಕಾವೇರಮ್ಮ ಸೋಮಣ್ಣ ಅವರು ಕಾನೂನು ಮೀರಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಇದನ್ನು ಸಹಿಸದವರು ಸಭೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅಬ್ದುಲ್‌ ರಜಾಕ್‌ ಆರೋಪಿಸಿದರು. ನಗರಸಭೆಯ ಸಾಮಾನ್ಯ ಸಭೆಯಲ್ಲಿ ದಿನಕ್ಕೊಂದು ನಿರ್ಣಯಗಳಾಗುತ್ತಿದ್ದು, ರಸ್ತೆ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದವರೆ ಇಂದು ವ್ಯಾಪಾರಿಗಳನ್ನು ತೆರವುಗೊಳಿಸುವ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಯುಜಿಡಿ ವಿರುದ್ಧ ನಿರ್ಣಯವಾಗಿತ್ತು
ಸುಮಾರು 10 ವರ್ಷಗಳ ಹಿಂದೆಯೇ ಮಡಿಕೆೇರಿಗೆ ಹೊಂದಾಣಿಕೆ ಆಗುವುದಿಲ್ಲ ಎನ್ನುವ ಕಾರಣಕ್ಕಾಗಿ ಯುಜಿಡಿ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ, ಇಂದು ಅರ್ಧ ಕಾಮಗಾರಿ ಪೂರ್ಣಗೊಂಡ ಅನಂತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸುವುದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದರು. 

ಕಳಪೆ ಕಾಮಗಾರಿ ನಡೆದ ಪ್ರದೇಶಕ್ಕೆ ಯಾವ ಸದಸ್ಯರು ಕೂಡ ಭೇಟಿ ನೀಡಿಲ್ಲ ಮತ್ತು ಆಕ್ಷೇಪ ವ್ಯಕ್ತಪಡಿಸಿಲ್ಲ. ಮಾಧ್ಯಮಗಳಲ್ಲಿ ತೋರ್ಪಡಿಸಿಕೊಳ್ಳುವುದಕ್ಕಾಗಿ ಸಭೆಯಲ್ಲಿ ಮಾತ್ರ ಕೂಗಾಡಲಾಗುತ್ತಿದೆ ಎಂದು ಅಬ್ದುಲ್‌ ರಜಾಕ್‌ ಟೀಕಿಸಿದರು. ಸದಸ್ಯರುಗಳ ನ್ಯೂನತೆಯ ವಿರುದ್ಧ ಮುಂದಿನ ಚುನಾವಣೆಯಲ್ಲಿ ನಗರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ನಗರಸಭೆೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಮತ್ತು ಕಂದಾಯ ವಸೂಲಾತಿಯಲ್ಲಿ ಆಗಿರುವ ಅವ್ಯವಹಾರದ ಕುರಿತು ಸದಸ್ಯರು ಯಾಕೆ ಧ್ವನಿ ಎತ್ತುತ್ತಿಲ್ಲವೆಂದು ಪ್ರಶ್ನಿಸಿದ ಅಬ್ದುಲ್‌ ರಜಾಕ್‌, ಪೌರಾಯುಕ್ತರ ಕಾರ್ಯವೈಖರಿಯನ್ನು ಟೀಕಿಸಿದರು. ಅವ್ಯವಹಾರದ ಕುರಿತು ಹಿಂದಿನ ಜಿಲ್ಲಾಧಿಕಾರಿಗಳು ತನಿಖೆೆ ನಡೆಸಿ ಅಂತಿಮ ರೂಪ ನೀಡಿದ್ದಾರೆ. ಆದರೆ, ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಇನ್ನೂ ಕೂಡ ಬಹಿರಂಗ ಪಡಿಸಿಲ್ಲ. ಮುಂದಿನ ಒಂದು ತಿಂಗಳ ಒಳಗೆ ಪೌರಾಯುಕ್ತರು ಅವ್ಯವಹಾರದ ತನಿಖೆ ಕುರಿತು ಮಾಹಿತಿ ನೀಡಬೇಕೆಂದು ಅಬ್ದುಲ್‌ ರಜಾಕ್‌ ಒತ್ತಾಯಿಸಿದರು. 
 ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಮಾತನಾಡಿ, ನಗರ ಸಭೆಯ ವಿರೋಧ ಪಕ್ಷಕ್ಕೆ ತನ್ನ ಜವಾಬ್ದಾರಿ ಮತ್ತು ವಿಪಕ್ಷ ಸ್ಥಾನದ ಪರಿಕಲ್ಪನೆಯೆ ಇಲ್ಲವೆಂದು ಟೀಕಿಸಿದರು. ನಗರದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಆದರೆ, ಬಾರೊಂದರ ಎದುರು ಹಾಕಲಾಗಿರುವ ಇಂಟರ್‌ ಲಾಕ್‌ ಬಗ್ಗೆ ಚರ್ಚೆ ನಡೆಸಿರುವುದು ವಿಷಾದನೀಯವೆಂದರು. 

ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರಿಗೆ ಪ್ರತಿಯೊಬ್ಬ ಸದಸ್ಯರೂ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು. ಜಿಲ್ಲೆಯಲ್ಲಿ ಆಪರೇಷನ್‌ ಕಮಲದ ಭೀತಿ ಇದ್ದು, ಕಾಂಗ್ರೆಸ್‌ ಪಕ್ಷ ಇದರ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆಯೆಂದು ಮೈನ ತಿಳಿಸಿದರು.     ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಟಿ.ಪಿ. ನಾಣಯ್ಯ, ಪ್ರಧಾನ ಕಾರ್ಯದರ್ಶಿ ಮುನೀರ್‌ ಮಾಚರ್‌ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಸಂಘ‌ಟನಾ ಕಾರ್ಯದರ್ಶಿ ಎಚ್‌. ಪಿ. ಚಂದ್ರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next