ಬೆಂಗಳೂರು: ಕೋವಿಡ್ 19 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದ ಪರಿಣಾಮ ಸರಿಯಾಗಿ ಚಿಕಿತ್ಸೆ ಪಡೆಯಲಾಗಿದೆ ಪರಿತಪಿಸುವ ದೃಶ್ಯಗಳು ರಾಜ್ಯದಲ್ಲಿ ಕೆಲವು ದಿನಗಳಿಂದ ಸಾಮಾನ್ಯವಾಗಿದೆ. ಆದರೆ ಇದೀಗ ಈ ಬೆಡ್ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಡ್ ಹಂಚಿಕೆ ಸಾಫ್ಟ್ ವೇರ್ ನಲ್ಲಿ ಯಾವಾಗಲೂ ಬೆಡ್ ಖಾಲಿ ಇಲ್ಲದೇ ಇರುವುದನ್ನು ತನಿಖೆ ಮಾಡಿದಾಗ ಹಲವು ಮಾಹಿತಿಗಳು ಲಭ್ಯವಾಗಿದ್ದು, ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಮಿತ್ರ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿಗಳು ಸೇರಿ ಕೃತಕ ಬೆಡ್ ಅಭಾವ ಸೃಷ್ಟಿಸಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ:ಕೋವಿಡ್ ಹತೋಟಿಗೆ ಲಾಕ್ ಡೌನ್ ಮಾತ್ರವಲ್ಲ.. : ಸಾಂಕ್ರಾಮಿಕ ರೋಗ ತಜ್ಞ ಫೌಸಿ ಹೇಳಿದ್ದೇನು.?
ಕೋವಿಡ್19 ಸೋಂಕಿನ ಯಾವುದೇ ಗುಣ ಲಕ್ಷಣಗಳು ಇಲ್ಲದೆ ಇರುವ ವ್ಯಕ್ತಿಯ ಹೆಸರಿಗೆ ಬೆಡ್ ನೋಂದಣಿ ಮಾಡಿ, ಕೆಲವೇ ಕ್ಷಣಗಳಲ್ಲಿ ಅದೇ ಬೆಡ್ ನ್ನು ಹಣಕ್ಕಾಗಿ ಬೇರೆಯವರ ಹೆಸರಿಗೆ ನೋಂದಣಿ ಮಾಡಲಾಗುತ್ತಿದೆ. ಹೀಗಾಗಿ ಅವಶ್ಯಕತೆ ಇರುವವರಿಗೆ ಬೆಡ್ ಸಿಗದೆ, ಹಣ ನೀಡಿದವರಿಗೆ ಅಕ್ರಮವಾಗಿ ಬೆಡ್ ಸಿಗುತ್ತಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಸಿಎಂ ಬಿ ಎಸ್ ಯಡಿಯೂಪ್ಪ ಅವರಿಗೆ ಈ ಬಗ್ಗೆ ತಿಳಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.