Advertisement

ಅನಿಯಮಿತ ವಿದ್ಯುತ್‌ ವ್ಯತ್ಯಯ; ಗ್ರಾಮೀಣ ಜನತೆಗೆ ಸಮಸ್ಯೆ

12:16 AM Feb 16, 2023 | Team Udayavani |

ಉಡುಪಿ: ಉಭಯ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿತ್ಯವೂ ಪೂರ್ವಸೂಚನೆಯಿಲ್ಲದೇ ವಿದ್ಯುತ್‌ ನಿಲುಗಡೆಯಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

Advertisement

ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತೀ ದಿನ 26 ಮಿಲಿಯ ಯುನಿಟ್‌ ವಿದ್ಯುತ್‌ ಅಗತ್ಯವಿದೆ. ಈ ಪೈಕಿ ಸುಮಾರು 4.50 ಮಿ. ಯುನಿಟ್‌ ಉಡುಪಿ ಜಿಲ್ಲೆಗೆ ಹಾಗೂ ಸುಮಾರು 7 ಮಿ. ಯುನಿಟ್‌ಗೂ ಅಧಿಕ ವಿದ್ಯುತ್‌ ದಕ್ಷಿಣ ಕನ್ನಡಕ್ಕೆ ಅಗತ್ಯವಿದೆ. ನಿತ್ಯ ಮೆಸ್ಕಾಂ ವ್ಯಾಪ್ತಿಗೆ ಬರುವ 25 ಮಿ. ಯುನಿಟ್‌ ವಿದ್ಯುತ್‌ ನಿರ್ದಿಷ್ಟ ಬೇಡಿಕೆಗಿಂತ ಕಡಿಮೆಯಿದೆ. ಈ ಅಸಮತೋಲನವನ್ನು ಸರಿದೂಗಿಸಲು ಅನಿವಾರ್ಯವಾಗಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಸಮಸ್ಯೆ
ಉಡುಪಿ, ದ.ಕ. ಜಿಲ್ಲೆಯ ಹಲವು ಕಡೆಗಳಲ್ಲಿ ನಿತ್ಯವೂ ಸಂಜೆ ಅರ್ಧ ಗಂಟೆಯಿಂದ 1 ಗಂಟೆ ಕಾಲ ವಿದ್ಯುತ್‌ ಪೂರೈಕೆ ಸ್ಥಗಿತ ಮಾಡಲಾಗುತ್ತಿದೆ. ಗ್ರಾಮೀಣ ಜನ ಜೀವನದ ಮೇಲೆ ಇದು ನೇರ ಪರಿಣಾಮ ಬೀರುತ್ತದೆ. ವಿದ್ಯುತ್‌ ವ್ಯತ್ಯಯವಾಗುತ್ತಿರುವುದರಿಂದ ಮನೆಯಲ್ಲಿ ಆ ವೇಳೆ ಅಡುಗೆ ಕಾರ್ಯ ಸಹಿತ ಬೇರ್ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಲೋಡ್‌ಶೆಡ್ಡಿಂಗ್‌ ಭೀತಿ
ಸದ್ಯ ಲೋಡ್‌ಶೆಡ್ಡಿಂಗ್‌ ಇಲ್ಲ. ಆದರೆ ಇದೇ ಪರಿಸ್ಥಿತಿ ಮುಂದು ವರಿದು ವಿದ್ಯುತ್‌ ಬೇಡಿಕೆಗಿಂತ ಪೂರೈಕೆ ಕಡಿಮೆಯಾದರೆ ಅನಿ ವಾರ್ಯವಾಗಿ ಲೋಡ್‌ಶೆಡ್ಡಿಂಗ್‌ ಮಾಡಲೇ ಬೇಕಾಗುತ್ತದೆ. ಕೊರತೆ ಹೆಚ್ಚಾದಂತೆ ಅದನ್ನು ಸರಿದೂಗಿಸಲು ಅಗತ್ಯ ಪ್ರಮಾಣದಲ್ಲಿ ವಿದ್ಯುತ್‌ ಖರೀದಿಸಬೇಕಾಗುತ್ತದೆ. ಖರೀದಿ ಪ್ರಕ್ರಿಯೆ ವಿಳಂಬವಾದರೂ ಲೋಡ್‌ಶೆಡ್ಡಿಂಗ್‌ಗೂ ಕಾರಣವಾಗಬಹುದು. ಲೋಡ್‌ಶೆಡ್ಡಿಂಗ್‌ ಆರಂಭವಾದರೆ ಗ್ರಾಮೀಣ ಜನರ ಬದುಕು ಇನ್ನಷ್ಟು ಕಷ್ಟವಾಗಲಿದೆ. ಕನಿಷ್ಠ ಎರಡರಿಂದ ಮೂರು ಗಂಟೆ ನಿತ್ಯವೂ ವಿದ್ಯುತ್‌ ವ್ಯತ್ಯಯವಾಗಬಹುದು.

ಪರೀಕ್ಷೆ ಸಮಯ
ಎಸೆಸೆಲ್ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ. ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಇದೇ ತಿಂಗಳಲ್ಲಿ ಪೂರ್ವ ಸಿದ್ಧತೆ ಪರೀಕ್ಷೆ ನಡೆಯಲಿದೆ. 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸೆಮಿಸ್ಟರ್‌ ಪರೀಕ್ಷೆಯೂ ಸಮೀಪಿಸುತ್ತಿದೆ. ಸಂಜೆ ವಿದ್ಯಾರ್ಥಿಗಳ ಅಧ್ಯಯನದ ಸಮಯವಾಗಿರುವುದರಿಂದ ವಿದ್ಯುತ್‌ ಕಡಿತವಾದರೆ ಶೈಕ್ಷಣಿಕ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಲೋಡ್‌ಶೆಡ್ಡಿಂಗ್‌ ಅಥವಾ ವಿದ್ಯುತ್‌ ವ್ಯತ್ಯಯ ಆಗದಂತೆ ಅಧಿಕಾರಿಗಳು, ಸರಕಾರ ಎಚ್ಚರ ವಹಿಬೇಕಾಗಿದೆ.

Advertisement

ಪ್ರತೀ ಮಂಗಳವಾರ ಕರೆಂಟ್‌ ಇರುವುದಿಲ್ಲ
ಯಾವುದೋ ಒಂದು ಫೀಡರ್‌ ಅಥವಾ ವಿದ್ಯುತ್‌ ಮಾರ್ಗದಲ್ಲಿ ನಿರ್ವಹಣ ಕಾಮಗಾರಿಯಿದ್ದರೆ ಆ ಪ್ರದೇಶದ ಬಹುತೇಕ ಎಲ್ಲ ಮಾರ್ಗದ ವಿದ್ಯುತ್‌ ಪೂರೈಕೆ ಸ್ಥಗಿತವಾಗುತ್ತದೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ದಶಕಗಳಿಂದಲೂ ಇದೆ. ಮಂಗಳವಾರ ಎಂದರೆ ವಿದ್ಯುತ್‌ ಇರುವುದಿಲ್ಲ. ಅದೇ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿದ್ದಾರೆ. ಮಂಗಳವಾರ ಬೆಳಗ್ಗೆ ಹೋದ ವಿದ್ಯುತ್‌ ಸಂಜೆಯವರೆಗೂ ಬರುವುದಿಲ್ಲ. ನಿರ್ವಹಣ ಕಾಮಗಾರಿ ಮಧ್ಯಾಹ್ನದ ವೇಳೆಗೆ ಮುಗಿದರೂ ವಿದ್ಯುತ್‌ ಬರುವಾಗ ಸಂಜೆಯೇ ಆಗಿರುತ್ತದೆ.

ವಿದ್ಯುತ್‌ ದರ ಪರಿಷ್ಕರಣೆ: ನಾಳೆ ಸಾರ್ವಜನಿಕ ವಿಚಾರಣೆ
ಉಡುಪಿ: ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ವಿದ್ಯುತ್ಛಕ್ತಿ ದರ ಪರಿಷ್ಕರಣೆ ಕುರಿತು ಮೆಸ್ಕಾಂ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಆಯೋಗವು ಫೆ. 17ರ ಬೆಳಗ್ಗೆ 10ಕ್ಕೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ವಿಚಾರಣೆಯನ್ನು ಆಯೋಜಿಸಿದೆ. ಆಸಕ್ತರು ಭಾಗವಹಿಸಬಹುದು ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next