ಋತುಚಕ್ರದ ವೇಳೆ ಮಹಿಳೆಯರಿಗೆ ಹಲವಾರು ಸಮಸ್ಯೆಗಳು ಕಾಡುತ್ತವೆ. ಮುಖ್ಯವಾಗಿ ಅನಿಯಮಿತವಾಗಿ ಋತುಚಕ್ರವಾಗುವುದು ಪಾಲಿಸಿಸ್ಟಿಕ್ ಒವೆರಿ ಸಿಂಡ್ರೋಮ್ (ಪಿಸಿಒಎಸ್) ಅಥವಾ ಥೈರಾಯ್ಡ್ ನ ಲಕ್ಷಣವಾಗಿರುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸುವುದು ಅತೀ ಅಗತ್ಯ. ಅನಿಯಮಿತ ಋತುಚಕ್ರಕ್ಕೆ ಮನೆಯಲ್ಲೇ ಔಷಧವಿದೆ. ಅದುವೇ ಯೋಗಾಸನ. ಇದರ ಕೆಲವೊಂದು ಭಂಗಿಗಳು ಅನಿಯಮಿತ ಋತುಚಕ್ರದ ಸಮಸ್ಯೆಯನ್ನು ನಿವಾರಿಸುತ್ತವೆ ಮತ್ತು ಆರೋಗ್ಯವನ್ನೂ ವೃದ್ಧಿಸುತ್ತವೆ.
ಸಂತಾನೋತ್ಪತ್ತಿ ವ್ಯವಸ್ಥೆಯ ಬಲವರ್ಧನೆಗೆ ಪರಿಣಾಮಕಾರಿ ಆಸನವಾದ ಧನುರಾಸನ ಹೊಟ್ಟೆ ಕೊಬ್ಬು ಕರಗಿಸುತ್ತದೆ, ಬೆನ್ನು ಹುರಿ, ತೊಡೆ, ಹಿಂಗಾಲುಗಳನ್ನು ಬಲಪಡಿಸುತ್ತದೆ. ನೆಲದ ಮೇಲೆ ಹೊಟ್ಟೆಯಲ್ಲಿ ಮಲಗಿ ನಿಧಾನವಾಗಿ ಉಸಿರಾಡಿ ಮತ್ತು ಕಾಲುಗಳನ್ನು ಹಿಂದಕ್ಕೆ ಮಡಚಬೇಕು. ಬಳಿಕ ಕೈಗಳನ್ನು ಹಿಂದಕ್ಕೆ ತಂದು ಹಿಂಗಾಲುಗಳನ್ನು ಹಿಡಿಯಬೇಕು. ದೇಹದ ಭಾರವೆಲ್ಲ ಹೊಟ್ಟೆಯ ಮೇಲಿರಬೇಕು. ಇದನ್ನು ದಿನಕ್ಕೆ ನಾಲ್ಕರಿಂದ ಐದು ಬಾರಿ ಮಾಡುವುದು ಒಳ್ಳೆಯದು.
ಅನಿಯಮಿತ ಋತುಚಕ್ರವನ್ನು ಸರಿಪಡಿಸುವ ಉಷ್ಟ್ರಾಸನ ನೋವನ್ನೂ ಕಡಿಮೆ ಮಾಡುತ್ತದೆ. ಅದೇ ರೀತಿ ಬೆನ್ನು ಹಾಗೂ ಭುಜಗಳನ್ನು ಬಲಪಡಿಸುತ್ತದೆ. ಮೊಣಕಾಲೂರಿ ಕುಳಿತು ಮೊಣಕೈ ಹಾಗೂ ಭುಜಗಳು ನೇರವಾಗಿರಿಸಿ ದೇಹವನ್ನು ಹಿಂದಕ್ಕೆ ಬಾಗಿಸಿ ಹಿಂಗಾಲುಗಳನ್ನು ಕೈಯಿಂದ ಹಿಡಿದುಕೊಳ್ಳಬೇಕು. ಸೊಂಟವನ್ನು ಮುಂದೆ ತಂದು, ತಲೆಯನ್ನು ಹಿಂದಕ್ಕೆ ಬಾಗಿಸಬೇಕು. ದಿನದಲ್ಲಿ ಇದನ್ನು ನಾಲ್ಕರಿಂದ ಐದು ಬಾರಿ ಮಾಡುವುದು ಉತ್ತಮ.
ಸಂತಾನೋತ್ಪತ್ತಿ ವ್ಯವಸ್ಥೆಗೆ ಪೂರಕವಾದ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುವ ಮಾಲಾಸನ ಹೊಟ್ಟೆ, ಸೊಂಟವನ್ನು ಬಲಪಡಿಸುವ ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸಿ, ತೊಡೆಗಳನ್ನು ಬಲಪಡಿಸುತ್ತದೆ. ಋತುಚಕ್ರದ ಯಾವುದೇ ಸಮಸ್ಯೆಗಳಿದ್ದರೂ ಬದ್ಧ ಕೋನಾಸನ ದೂರ ಮಾಡುತ್ತದೆ. ಸಂತಾನೋತ್ಪತ್ತಿ ವ್ಯವಸ್ಥೆಗೂ ಇದು ಒಳ್ಳೆಯದು. ಇದು ರಕ್ತ ಸಂಚಾರ ಸುಧಾರಿಸುವುದು, ಕಿಡ್ನಿ, ಮೂತ್ರಕೋಶದಂತಹ ಅಂಗಾಂಗಗಳನ್ನು ಉತ್ತೇಜಿಸುವುದು
ಮತ್ತು ಒತ್ತಡ ನಿವಾರಣೆಗೆ ಸಹಕಾರಿಯಾಗಿದೆ.
ಜೀರ್ಣಕ್ರಿಯೆ, ರಕ್ತಸಂಚಾರವನ್ನು ಸುಧಾರಿಸುವ ಭುಜಂಗಾಸನ ಅನಿಯಮಿತವಾದ ಋತುಚಕ್ರವನ್ನು ಸರಿಪಡಿಸಲು ನೆರವಾಗುತ್ತದೆ. ನೆಲದಲ್ಲಿ ಹೊಟ್ಟೆಯ ಮೇಲೆ ಮಲಗಿ ಕಾಲುಗಳನ್ನು ನೇರವಾಗಿರಿಸಿ. ನಿಧಾನವಾಗಿ ಉಸಿರಾಡುತ್ತ ದೇಹದ ಮೇಲಿನ ಭಾಗವನ್ನು ಮೇಲೆತ್ತಿ. ಅಂಗೈಗಳು ನೆಲಕ್ಕೆ ತಾಗಿರಲಿ. ಕುತ್ತಿಗೆಯನ್ನು ಆದಷ್ಟು ಹಿಂದಕ್ಕೆ ಬಾಗಿಸಿ. ಇದನ್ನು ದಿನದಲ್ಲಿ ಐದು ಬಾರಿ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.