ಎಚ್.ಡಿ.ಕೋಟೆ: ಸರಗೂರು ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಭಾಗದಲ್ಲೂ ಕಳೆದ ಮೂರ್‍ನಾಲ್ಕು ದಿನಗಳಿಂದ ಸೆಸ್ಕ್ ಅಧಿಕಾರಿಗಳು ಅನಿಯಮಿತ ಲೋಡ್ ಶೆಡ್ಡಿಂಗ್ ಕೈಗೊಂಡಿರುವುದರಿಂದ ಸಾಕಷ್ಟು ತೊಂದರೆಯಾಗಿದೆ. ಪಟ್ಟಣದ ವರ್ತಕರು ಹಾಗೂ ತಾಲೂಕು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸೇರಿದಂತೆ ತಾಲೂಕಿನ ಜನತೆಗೆ ನಷ್ಟದ ಜೊತೆಗೆ ಕಿರಿಕಿರಿ ಉಂಟಾಗಿದೆ.
ಎಚ್.ಡಿ.ಕೋಟೆ ಮತ್ತು ಸರಗೂರು ಉಪವಿಭಾಗದ ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮದ ಅಧಿಕಾರಿಗಳು ಕಳೆದ ಶುಕ್ರವಾರದಿಂದಲೂ ಒಂದಲ್ಲ ಒಂದು ಕಾರಣ ನೀಡಿ ಅನಿಯಮಿತ ಲೋಡ್ ಶೆಡ್ಡಿಂಗ್ ನಡೆಸುತ್ತಿರುವುದರಿಂದ ವರ್ತಕರು, ಹೋಟೆಲ್ ಮಾಲೀಕರು ನಷ್ಟ ಅನುಭವಿಸಿದರೆ, ಬೆಳಗ್ಗೆ 10 ರಿಂದ ಸಂಜೆ ಸೂರ್ಯ ಮುಳುಗುವವರೆಗೂ ಕರೆಂಟ್ ಇರದ ಕಾರಣ ಯಾವ ಕಚೇರಿಗೆ ಹೊದರೂ ಕರೆಂಟ್ ಸಮಸ್ಯೆಯಿಂದ ಕಂಪ್ಯೂಟರ್ ಆನ್ ಅಗುತ್ತಿಲ್ಲ, ನಾಳೆ ಬನ್ನಿ ಎಂಬ ಉತ್ತರ ಸಿಗುತ್ತಿದೆ. ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಮೊಬೈಲ್ ಸ್ವಿಚ್ ಆಫ್: ಇನ್ನೂ ದಿನೇ ದಿನೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಎಂದು ಕಂಡರಿಯದ ಬಿಸಿಲಿನ ಬೇಗೆಗೆ ಜನರು ಹೈರಾಣಾಗಿದ್ದಾರೆ. ಕರೆಂಟ್ ಇಲ್ಲದ ಕಾರಣ ಮನೆಯಲ್ಲಿ ಫ್ಯಾನ್ ಚಾಲನೆ ಕಾಣದೆ ಕುಟುಂಬದ ಜನರು ಮನೆಯಲ್ಲಿ ಕೂರಲಾಗದೆ ತೊಳಲಾಡುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಇಲ್ಲಿನ ಸೆಸ್ಕ್ ಅಧಿಕಾರಿಗಳಿಗೆ ಕರೆ ಮಾಡಿದರೆ ಲೈನ್‌ಮ್ಯಾನ್‌ನಿಂದ ಸಹಾಯಕ ಕಾರ್ಯಪಾಲಕರ ವರೆಗೂ ಸ್ವೀಚ್ ಆಫ್ ಎನ್ನುವ ಸಂದೇಶ ಕೇಳಿ ಬರುತ್ತದೆ.
ಈ ಬಗ್ಗೆ ಸೆಸ್ಕ್ ಕಚೇರಿ ಬಳಿ ಬಂದು ಅಧಿಕಾರಿಗಳನ್ನು ಏಕೆ ಹೀಗೆ ಅನಿಯಮಿತವಾಗಿ ಲೋಡ್ ಶೆೆಡ್ಡಿಂಗ್ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರೆ, ಲೈನ್‌ಮ್ಯಾನ್ ವೈರ್ ಕಟ್ಟಾಗಿದೆ ಸರ್ ಎಂದರೆ, ಇನ್ನೋರ್ವ ಸಿಬ್ಬಂದಿ ಹೋಗಿ ಜೆಇ ಕೇಳಿ ಎನ್ನುವ ಉಡಾಫೆ ಉತ್ತರ ನೀಡುತ್ತಾರೆ. ಇನ್ನು ಜೆಇ ಅವರನ್ನು ಕೇಳಿದರೇ, “ಸರ್ ನಿನ್ನೆ ವೈರ್ ಕಟ್ಟಾಗಿತ್ತು, ಇಂದು ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದೆ. ಸಂಜೆ 4 ರವರೆಗೆ ಕರೆಂಟ್ ಬರುತ್ತದೆ’ ಎಂದು ಗ್ರಾಹಕರನ್ನು, ಇಲ್ಲಿನ ನಾಗರೀಕರನ್ನು ಅಲೆದಾಡುತ್ತಿದ್ದಾರೆ.
ಇಷ್ಟು ದಿನ ಇಲ್ಲಿನ ಸೆಸ್ಕ್ ಅಧಿಕಾರಿಗಳು ತಾಲೂಕಿನ ರೈತರು ಬೆಳೆಗಳನ್ನು ಬೆಳೆಯಲು ನೀರು ಹಾಯಿಸಲು ಸರಿಯಾಗಿ ಕರೆಂಟ್ ಕೋಡದೆ ನಷ್ಟ ಉಂಟು ಮಾಡುತ್ತಿದ್ದರು. ಈಗ ಪಟ್ಟಣ ಪ್ರದೇಶದ ಜನರಿಗೂ, ವರ್ತಕರಿಗೂ ನಷ್ಟವುಂಟು ಮಾಡಲು ಅನಿಯಮಿತ ಲೋಡ್ ಶೆೆಡ್ಡಿಂಗ್ ನಡೆಸುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಎಚ್.ಬಿ.ಶಿವಲಿಂಗಪ್ಪ ಮತ್ತಿತರರು ಕಿಡಿಕಾರಿದ್ದಾರೆ
ಪ್ರತಿಭಟನೆ ಎಚ್ಚರಿಕೆ: ಸೆಸ್ಕ್ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಹಾಗೂ ಅನಿಯಮಿತ ಲೋಡ್ ಶೆೆಡ್ಡಿಂಗ್ ತಾಲೂಕಿನ ರೈತರು, ವರ್ತಕರು, ಮಿಲ್, ಹೋಟೆಲ್, ಕಂಪ್ಯೂಟರ್ ಸೆಂಟರ್ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಾಳೆಯೂ ಇದೆ ರೀತಿ ಅನಿಯಮಿತ ಲೋಡ್ ಶೆಡ್ಡಿಂಗ್ ಕೈಗೊಂಡರೆ ನಾಳೆ ಇಲ್ಲಿನ ಸೆಸ್ಕ್ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ನಾಗರಿಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಎಚ್ಚರಿಕೆ ನೀಡಿದ್ದಾರೆ.
ನಂಜನಗೂಡಿನ ಕಡಕೊಳ ಸೆಸ್ಕ್ ಮುಖ್ಯ ವಿದ್ಯುತ್ ವಿತರಣೆ ಕೇಂದ್ರದಲ್ಲಿ ಕಳೆದ ಶುಕ್ರವಾರದಿಂದ ಒಂದಲ್ಲ ಒಂದು ದೋಷ ಕಾಣಿಸಿಕೊಳ್ಳುತ್ತಿರುವುದರಿಂದ ಅಲ್ಲಯೇ ಲೈನ್ ಆಫ್ ಮಾಡುತ್ತಿದ್ದಾರೆ. ಮಂಗಳವಾರದಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಸಮಸ್ಯೆ ಇರುವುದಿಲ್ಲ.
-ಮಹೇಶ್‌ಕುಮಾರ್, ಸೆಸ್ಕ್ ಎಇಇ