Advertisement

ಐರೋಡಿ ದಂಡಬೆಟ್ಟು ರಸ್ತೆ: ಮಳೆಗಾಲದಲ್ಲೂ ಸಂಚಾರ ದುಸ್ತರ

12:15 AM Jun 04, 2019 | Team Udayavani |

ಕೋಟ: ಐರೋಡಿ ಗ್ರಾಮದ ದಂಡೆಬೆಟ್ಟು ಬಾಳ್ಕುದ್ರು ಸಂಪರ್ಕ ರಸ್ತೆಯಲ್ಲಿ ಸುಮಾರು 400 ಮೀ.ನಷ್ಟು ಅಭಿವೃದ್ಧಿ ಬಾಕಿ ಇದ್ದು ಪ್ರತಿ ಮಳೆಗಾಲದಲ್ಲಿ ಇಲ್ಲಿ ಸಂಚಾರ ದುಸ್ತರವಾಗುತ್ತದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

Advertisement

ರಾಡಿಯಾಗುವ ರಸ್ತೆ
ಈ ರಸ್ತೆ ಐರೋಡಿ, ಬಾಳ್ಕುದ್ರು ಎರಡು ಗ್ರಾಮಸಂಪರ್ಕಿಸುವ ಕೊಂಡಿಯಾಗಿದೆ. ಸ್ಥಳೀಯ ನೂರಾರು ಮನೆಗಳವರು ಇಲ್ಲಿ ಸಂಚಾರ ನಡೆಸುತ್ತಾರೆ. ಹತ್ತು ವರ್ಷದ ಹಿಂದೆ ಡಾಮರು ಕಾಮಗಾರಿ ಆಗಿದ್ದು ಆಗ ಸುಮಾರು 400 ಮೀ.ನಷ್ಟು ಕಾಮಗಾರಿ ಬಾಕಿ ಉಳಿಸಲಾಗಿತ್ತು. ಅನಂತರ ಉಳಿದ ಕಾಮಗಾರಿ ಕೈಗೊಂಡಿಲ್ಲ. ಗದ್ದೆ ಹಾಗೂ ತೋಟದ ಮಧ್ಯ ರಸ್ತೆ ಹಾದು ಹೋಗುವುದರಿಂದ ಪ್ರತಿ ಮಳೆಗಾಲದಲ್ಲಿ ತೋಟ, ಗದ್ದೆಯ ನೀರು ನುಗ್ಗಿ ರಾಡಿಯಾಗುತ್ತದೆ. ನೀರು ನಿಂತು ಸಂಚಾರ ದುಸ್ತರವಾಗುತ್ತದೆ.

ಏಳು ಶಾಲಾ ಬಸ್‌ಗಳ ಸಂಚಾರ
ವಿವಿಧ ಶಾಲೆಗಳ ಸುಮಾರು ಏಳು ಬಸ್‌ಗಳು ಇಲ್ಲಿ ಸಂಚಾರ ನಡೆಸುತ್ತವೆ. ಆದರೆ ಮಳೆಗಾಲದಲ್ಲಿ ರಸ್ತೆ ಸಮಸ್ಯೆಯಿಂದ ಬಸ್‌ ಬರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪ್ರಯಾಸದಿಂದ ಶಾಲೆ ತಲುಪುತ್ತಾರೆ ಹಾಗೂ ರಿಕ್ಷಾ ,ಕಾರಿನವರು ಬಾಡಿಗೆಗೆ ಬರುವುದಿಲ್ಲ.

ಅಪಾಯದಲ್ಲಿದೆ ಕಾಂಕ್ರೀಟ್‌ ರಸ್ತೆ
ಈ ರಸ್ತೆಯ ಆರಂಭದಲ್ಲಿ ಧೂಳಂಗಡಿ ಶಾಲೆ ಯಿಂದ ಸ್ವಲ್ಪ ಮುಂದೆ ನಾಲ್ಕೈದು ವರ್ಷದ ಹಿಂದೆ ಕಾಂಕ್ರೀಟ್‌ ಕಾಮಗಾರಿ ಮಾಡಲಾಗಿದೆ. ಆದರೆ ಚರಂಡಿ ವ್ಯವಸ್ಥೆ ಹಾಗೂ ರಿವೀಟ್‌ಮೆಂಟ್‌ ಇಲ್ಲದಿರುವುದರಿಂದ ಮಳೆಗಾಲದಲ್ಲಿ ರಸ್ತೆ ಹಾಗೂ ಗದ್ದೆಯ ನೀರಿನ ಸೆಳೆತದಿಂದ ರಸ್ತೆಯ ಒಂದು ಭಾಗ ಕುಸಿಯುತ್ತಿದೆ. ಇದರಲ್ಲಿ ಶಾಲಾ ಬಸ್‌ ಮುಂತಾದ ಘನವಾಹನಗಳು ಸಂಚರಿಸುವುದರಿಂದ ರಿವೀಟ್‌ಮೆಂಟ್‌ ನಿರ್ಮಿಸದಿದ್ದಲ್ಲಿ ರಸ್ತೆ ಕುಸಿದು ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಹಲವು ಬಾರಿ ಮನವಿ
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವ ಜನಿಕರು ರಸ್ತೆ ದುರಸ್ತಿಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಮನವಿಗೆ ಸರಿಯಾದ ಪುರಸ್ಕಾರ ಸಿಕ್ಕಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಅಭಿಪ್ರಾಯ.

Advertisement

ಮಳೆಗಾಲದಲ್ಲಿ ಸಂಚಾರ ಕಷ್ಟ
ಪ್ರತಿ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ರಾಡಿಯಾಗುತ್ತದೆ. ಇದರಿಂದಾಗಿ ಶಾಲಾ ಬಸ್ಸುಗಳು ಈ ರಸ್ತೆಗೆ ಬರುವುದಿಲ್ಲ ಹಾಗೂ ಮಕ್ಕಳು ಮೈ ಕೆಸರು ಮಾಡಿಕೊಂಡು ಶಾಲೆಗೆ ಹೋಗಬೇಕಿದೆ. ಈ ಕುರಿತು ಎಷ್ಟೇ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.
-ರೆನಾಲ್ಡ್‌ ಲೂವೀಸ್‌,
ಸ್ಥಳೀಯ ನಿವಾಸಿ

ಪಂ. ಅನುದಾನದಲ್ಲಿ ಅಭಿವೃದ್ಧಿ ಅಸಾಧ್ಯ
ರಸ್ತೆ ದುರಸ್ತಿ ಗ್ರಾ.ಪಂ. ಅನುದಾನದಲ್ಲಿ ಸಾಧ್ಯವಿಲ್ಲ. ಹೀಗಾಗಿ ಸ್ಥಳೀಯ ಶಾಸಕರಿಗೆ ಪಕ್ಷಭೇದ ಮರೆತು ಮನವಿ ಮಾಡಿದ್ದೇವೆ ಹಾಗೂ ಹಲವು ಬಾರಿ ಗಮನಕ್ಕೆ ತಂದಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ರಸ್ತೆಯ ಆರಂಭದಲ್ಲಿ ಪಂಚಾಯತ್‌ ಅನುದಾನದಲ್ಲೇ ರಿವೀಟ್‌ಮೆಂಟ್‌ ಕಟ್ಟಲಾಗಿದೆ. ಇನ್ನೊಂದುಭಾಗಕ್ಕೆ ಹೆಚ್ಚಿನ ಅನುದಾನ ಅಗತ್ಯವಿರುವುದರಿಂದ ಕಾಮಗಾರಿ ಸಾಧ್ಯವಾಗಿಲ್ಲ. ಶಾಸಕರ ಬಳಿ ಇನ್ನೊಮ್ಮೆ ಮನವಿ ಸಲ್ಲಿಸಲಿದ್ದೇವೆ.
-ಆನಂದ ಗಾಣಿಗ, ಸ್ಥಳೀಯ ವಾರ್ಡ್‌ ಸದಸ್ಯರು, ಐರೋಡಿ ಗ್ರಾ.ಪಂ.

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next