ತಾನು ಶಾಂತಿಯನ್ನು ಅಪೇಕ್ಷಿಸುತ್ತೇನೆ ಎಂದು ತೋರಿಸಿಕೊಡಲು ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗೊಳಿಸಿರಬಹುದು. ಆದರೆ ಈ ಒಂದು ನಡೆಯಿಂದ ಪಾಕಿಸ್ತಾನ ವಿಶ್ವಾಸಾರ್ಹ ದೇಶವೇನೂ ಆಗುವುದಿಲ್ಲ. ವರ್ಧಮಾನ್ ಅವರನ್ನು ಬಿಡುಗಡೆಗೊಳಿಸುವುದು ಪಾಕ್ ಪಾಲಿಗೆ ಅನಿವಾರ್ಯವಾಗಿತ್ತೇ ಹೊರತು ಇದು ಶಾಂತಿಯ ಸಂದೇಶವೂ ಅಲ್ಲ , ಔದಾರ್ಯವೂ ಅಲ್ಲ.
ಬಿಡುಗಡೆಗೊಳಿಸದಿದ್ದರೆ ಭಾರತ ಯಾವ ರೀತಿಯ ಏಟು ಕೊಡಬಹುದು ಎಂದು ಊಹಿಸಲು ಅಸಾಧ್ಯವಾಗಿ ಪಾಕ್ ಈ ಕ್ರಮ ಕೈಗೊಂಡಿದೆ. ಇಡೀ ಜಗತ್ತು ತನ್ನ ವಿರುದ್ಧ ನಿಂತಿದೆ ಎಂದು ತಡವಾಗಿಯಾದರೂ ಆ ದೇಶಕ್ಕೆ ಅರಿವಾಗಿದೆ. ಆದರೆ ಇಷ್ಟರಿಂದಲೇ ಆ ದೇಶ ಪಾಠ ಕಲಿತುಕೊಂಡಿದೆ ಎಂದು ಭಾವಿಸಿದರೆ ತಪ್ಪಾಗಬಹುದು. ಏಕೆಂದರೆ ನಯವಂಚನೆ ಮತ್ತು ಬೆನ್ನಿಗಿರಿಯುವ ಬುದ್ಧಿ ಆ ದೇಶದ ಜಾಯಮಾನವೇ ಆಗಿದೆ. ಹೀಗಾಗಿ ಈಗ ಭಯೋತ್ಪಾದನೆ ವಿರುದ್ಧ ಪ್ರಾರಂಭಿಸಿರುವ ಹೋರಾಟ ಒಂದು ತಾರ್ಕಿಕ ಅಂತ್ಯ ತಲುಪುವ ತನಕ ವಿಶ್ರಮಿಸಬಾರದು. ಎಲ್ಲ ರೀತಿಯ ಒತ್ತಡಗಳನ್ನು ಹಾಕಿ ತನ್ನ ನೆಲದಲ್ಲಿರುವ ಭಯೋತ್ಪಾದಕರ ವಿರುದ್ಧ ಪಾಕ್ ಕ್ರಮ ಕೈಗೊಳ್ಳುವಂತೆ ಮಾಡುವುದೇ ಈ ಸಮಸ್ಯೆಗಿರುವ ಶಾಶ್ವತ ಪರಿಹಾರ. ಅದಕ್ಕೆ ಈಗ ಸಂದರ್ಭ ಪಕ್ಕಾ ಆಗಿದೆ. ಕಬ್ಬಿಣ ಕಾದಿರುವಾಗಲೇ ಬಡಿಯುವುದು ಬುದ್ಧಿವಂತಿಕೆ.
ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಪೂರ್ಣ ಪ್ರಮಾಣದ ಯುದ್ಧದಲ್ಲಿ ಭಾಗವಹಿಸುವ ಸ್ಥಿತಿಯಲ್ಲಿಲ್ಲ. ಒಂದೆಡೆ ಆ ದೇಶದ ಆರ್ಥಿಕ ಸ್ಥಿತಿ ಪಾತಾಳ ತಲುಪಿದೆ. ಇನ್ನೊಂದೆಡೆ ಅತ್ಯಾಪ್ತ ಎಂದು ಪರಿಗಣಿಸಿದ್ದ ಚೀನ ಸೇರಿದಂತೆ ಯಾವ ದೇಶದ ಬೆಂಬಲ ಸಿಗುವ ಸಾಧ್ಯತೆಯೂ ಇಲ್ಲ. ಹೀಗಾಗಿ ಪಾಕ್ ಪ್ರಧಾನಿ ಪದೇ ಪದೇ ನಾವು ಶಾಂತಿ ಬಯಸುತ್ತೇವೆ, ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳುತ್ತಿದ್ದಾರೆ. ಇದು ಪರಿಸ್ಥಿತಿಯ ಅನಿವಾರ್ಯತೆಯಿಂದ ಬಂದಿರುವ ಮಾತುಗಳೇ ಹೊರತು ಹೃದಯಂತರಾಳದ ನೈಜ ಅಪೇಕ್ಷೆಯಲ್ಲ. ಪಾಕಿಸ್ತಾನದ ನಿರಾಕರಣೆಗಳನ್ನು ಅಥವಾ ತನಿಖೆ ನಡೆಸುವ ಆಶ್ವಾಸನೆಗಳನ್ನು ನಂಬುವಂತಿಲ್ಲ. ಸದ್ಯಕ್ಕೇನೋ ಭಾರತದ ಕೊಟ್ಟ ಏಟಿನಿಂದ ಉಗ್ರ ಸಂಘಟನೆ ಗಳು ಥಂಡಾ ಹೊಡೆದಿರಬಹುದು. ಆದರೆ ಎಂದಿನ ತನಕ ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಪಡೆಯ ಬೆಂಬಲ ಸಿಗುತ್ತದೋ ಅಲ್ಲಿಯ ತನಕ ಈ ಉಗ್ರ ಪಡೆಗಳು ಚಿಗಿತುಕೊಳ್ಳುತ್ತಲೆೇ ಇರುತ್ತವೆ. ಇದೊಂದು ರೀತಿಯಲ್ಲಿ ರಕ್ತ ಬೀಜಾಸುರನ ಸಂತತಿಯಿದ್ದಂತೆ. ಅಲ್ಲಿ ಉಗ್ರವಾದ ಸಂಪೂರ್ಣ ಮೂಲೋತ್ಪಾಟನೆಯಾಗುವ ತನಕ ಶಾಂತಿ ಮರೀಚಿಕೆಯಾಗಿಯೇ ಇರಲಿದೆ. ಈ ಮಾದರಿಯ ಶಾಂತಿ ಮಾತುಕತೆಗಳನ್ನು ಹಲವಾರು ಬಾರಿ ನಡೆಸಲಾಗಿದೆ ಮತ್ತು ಅದರ ಫಲಿತಾಂಶವನ್ನೂ ನೋಡಿಯಾಗಿದೆ.
ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಜರ್‌ನನ್ನು ಜಾಗತಿಕ ಭಯೋ ತ್ಪಾದಕನೆಂದು ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮತ್ತೂಮ್ಮೆ ಮನವಿ ಮಾಡಿವೆ. ಇದೇ ವೇಳೆ ಪಾಕಿಸ್ತಾನವೂ ಮಸೂದ್ ತನ್ನಲ್ಲಿರುವುದನ್ನು ಮೊದಲ ಬಾರಿಗೆ ನೇರವಾಗಿ ಒಪ್ಪಿಕೊಂಡಿದೆ. ಇದು ಮಹತ್ವದ ಬೆಳವಣಿ ಗೆಯೇ ಆಗಿದ್ದರೂ ಇದೇ ವೇಳೆ ಅವನ ವಿರುದ್ಧ ಕ್ರಮ ಕೈಗೊಳ್ಳಲು ಸಾಕ್ಷಿ ಕೊಡಿ ಎನ್ನುವ ಮಾಮೂಲು ಆಲಾಪನೆಯನ್ನೂ ಅಲ್ಲಿನ ವಿದೇಶಾಂಗ ಸಚಿ ವರು ಮಾಡಿದ್ದಾರೆ. ಸಾಕ್ಷಿ ಕೊಡುವ ಬದಲು ಅಂತಾರಾಷ್ಟ್ರೀಯ ಒತ್ತಡದಿಂ ದಲೇ ಪಾಕಿಸ್ತಾನ ಮಸೂದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಲು ಭಾರತ ತನ್ನ ಎಲ್ಲ ರಾಜತಾಂತ್ರಿಕ ಕೌಶಲಗಳನ್ನು ಬಳಸಿಕೊಳ್ಳಬೇಕು. ಈ ನಿಟ್ಟಿ ನಲ್ಲಿ ರಶ್ಯಾವೂ ಸೇರಿದಂತೆ ಎಲ್ಲ ದೇಶಗಳ ನೆರವು ಪಡೆದುಕೊಳ್ಳಬಹುದು.
ಈ ಬಿಗುವಿನ ಪರಿಸ್ಥಿತಿಯಲ್ಲಿ ಭಾರತದ ರಾಜಕೀಯ ವ್ಯವಸ್ಥೆ ಸರಕಾರ ಮತ್ತು ಸೇನೆಯ ಬೆಂಬಲಕ್ಕೆ ನಿಲ್ಲುವುದು ಅತ್ಯಗತ್ಯ. ಅಂತೆಯೇ ಸರಕಾರವೂ ಪಾಕ್ ವಿರುದ್ಧ ಕೈಗೊಳ್ಳುವ ಕ್ರಮಗಳಲ್ಲಿ ರಾಜಕೀಯ ಲಾಭದ ಅಪೇಕ್ಷೆ ಇಟ್ಟುಕೊಳ್ಳಬಾರದು. ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಕಾರಣ ನಾವು ಗೆಲ್ಲುತ್ತೇವೆ ಎನ್ನುವುದು ಸಂಕುಚಿತ ದೃಷ್ಟಿಕೋನ ಮಾತ್ರವಲ್ಲದೆ ಹೊಣೆಗೇಡಿತನವೂ ಆಗುತ್ತದೆ. ಚುನಾವಣೆಯೇ ಬೇರೆ, ರಾಷ್ಟ್ರೀಯ ಭದ್ರತೆಯೇ ಬೇರೆ. ದೇಶದ ರಕ್ಷಣೆಯ ವಿಷಯಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಾಗಿರಬೇಕು. ಇಲ್ಲದಿದ್ದರೆ ಇದರ ಲಾಭವನ್ನು ಶತ್ರು ದೇಶ ಪಡೆದುಕೊಳ್ಳುತ್ತದೆ. ಇಂಥ ಒಂದು ಪ್ರಯತ್ನವನ್ನು ಈಗಾಗಲೇ ಪಾಕಿಸ್ತಾನ ಮಾಡಿ ಆಗಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಟ್ಟುಕೊಂಡು ಭಾರತವೇ ಈ ಸನ್ನಿವೇಶನ್ನು ಸೃಷ್ಟಿಸಿದೆ ಎಂಬ ರಂಗುಕೊಡಲು ಆ ದೇಶ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ನಮ್ಮ ರಾಜಕೀಯ ಪಕ್ಷಗಳ ವರ್ತನೆಯೂ ಇದನ್ನು ಸಮರ್ಥಿಸುವಂತಿದ್ದರೆ ಇದರ ಪರಿಣಾಮವನ್ನು ಅನುಭವಿಸಬೇಕಾಗುವುದು ದೇಶ ಎನ್ನುವ ಅರಿವು ಇರಬೇಕು.