ನವಿಮುಂಬಯಿ: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಐರೋಲಿಯ ಇದರ ರಜತ ಮಹೋತ್ಸವ ಮಂಡಲೋತ್ಸವವು ಗುರುಗಳಾದ ಶ್ರೀ ಸೂರ್ಯನಾರಾಯಣ ಮೂರ್ತಿ ಗುರುಸ್ವಾಮಿ ಮುಲುಂಡ್ ಅವರ ಆಶೀರ್ವಾದಗಳೊಂದಿಗೆ ಡಿ. 16 ಮತ್ತು ಡಿ. 17ರಂದು ಎರಡುದಿನಗಳ ಕಾಲ ಐರೋಲಿಯ ಶಿವ ಕಾಲನಿಯ ಛತ್ರಪತಿ ಶಿವಾಜಿ ಮಹಾರಾಜ್ ಮೈದಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯುತ್ತಿದ್ದು, ಶನಿವಾರ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಚಾಲನೆ ನೀಡಲಾಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಡಿ. 16ರಂದು ಮುಂಜಾನೆ 5.30ರಿಂದ ಗಣಹೋಮ, ಬೆಳಗ್ಗೆ 7 ರಿಂದ ರುದ್ರಾಭಿಷೇಕ, ಪೂರ್ವಾಹ್ನ 10ರಿಂದ ಶ್ರೀ ಅಯ್ಯಪ್ಪ ಸಹಸ್ರ ನಾಮಾರ್ಚನೆ, ಮಧ್ಯಾಹ್ನ 12ರಿಂದ ದೀಪಾರಾಧನೆ ಇತ್ಯಾದಿ ಪೂಜಾ ಕೈಂಕರ್ಯಗಳು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಜರಗಿತು. ಮುಂಬಯಿಯ ಭಜನ ಗಾಯಕ ಚಂದ್ರಹಾಸ ರೈ ಪುತ್ತೂರು ಮತ್ತು ಬಳಗದವರಿಂದ ಪೂರ್ವಾಹ್ನ 11 ರಿಂದ ಅಪರಾಹ್ನ 2ರವರೆಗೆ ಭಕ್ತಿ ವೈಭವ, ಅಪರಾಹ್ನ 2ರಿಂದ ಶ್ರೀ ಅಯ್ಯಪ್ಪ ಭಜನ ಮಂಡಳಿ ಐರೋಲಿ ಇವರಿಂದ ಭಜನ ಕಾರ್ಯಕ್ರಮಜರಗಿತು.
ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಅಪರಾಹ್ನ 3.30ರಿಂದ ವಿಟuಲ ರುಕ್ಮಿಣಿ ಮಹಿಳಾ ಭಜನ ಮಂಡಳಿ ಶಿವಕಾಲನಿ ಐರೋಲಿ ಮತ್ತು ಬಿಲ್ಲವ ಸಭಾ ಭವನ ಭಜನ ಮಂಡಳಿ ಥಾಣೆ ಇವರಿಂದ ಭಜನ ಕಾರ್ಯಕ್ರಮ ಜರಗಿತು. ಸಂಜೆ 5ರಿಂದ ರಜತ ಮಹೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ವೈಭವದ ಮೆರವಣಿಗೆಯು, ಸಾವಿರಾರು ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಐರೋಲಿಯ ಸೆಕ್ಟರ್ 16 ರ ಶಿವಮಂದಿರದಿಂದ ಆರಂಭಗೊಂಡು ಮಂಡಳ ಪೂಜೆಯ ಕ್ಷೇತ್ರದವರೆಗೆ ಸಾಗಿತು.
ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ಗೌರವಾಧ್ಯಕ್ಷ ರಘು ಪಡವ್, ಉಪಾಧ್ಯಕ್ಷರಾದ ಅಮರ್‌ನಾಥ್ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ವೀರೇಂದ್ರ ವಿ. ಶೆಟ್ಟಿ, ಕೋಶಾಧಿಕಾರಿ ಶ್ಯಾಮ್ ಶೆಟ್ಟಿ, ಸಮಿತಿಯ ಅಧ್ಯಕ್ಷ ಕೃಷ್ಣ ವಿ. ಶೆಟ್ಟಿ ಎಕ್ಕಾರು, ಮಾಜಿ ಅಧ್ಯಕ್ಷರಾದ ಮಧು ಎನ್. ಕೋಟ್ಯಾನ್, ಜಗನ್ನಾಥ್ ಶೆಟ್ಟಿ, ರಘು ಪಡವ್, ಗುರುಸ್ವಾಮಿಗಳಾದ ಶೇಖರ್ ಎನ್. ಶೆಟ್ಟಿ ಅವರು ಹಾಗೂ ಶಿಬಿರದ ಗುರುಸ್ವಾಮಿಗಳಾದ ಅಣ್ಣಿ ಎಚ್. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಅಯ್ಯಪ್ಪ ವ್ರತಧಾರಿಗಳ ಉಪ ಸ್ಥಿತಿಯಲ್ಲಿ ವಿವಿಧ ಪೂಜಾ ಕೈಂಕರ್ಯ ಗಳು ನೆರವೇರಿದವು. ಸ್ಥಳೀಯ ಉದ್ಯಮಿ ಗಳು, ವಿವಿಧ ಜಾತೀಯ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿ ಗಳು, ಸದಸ್ಯರು, ರಾಜಕೀಯ ಧುರೀಣರು, ಸಮಾಜ ಸೇವಕರು, ಹಿತೈಷಿಗಳು, ಅಯ್ಯಪ್ಪ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.