Advertisement
1945 ರಲ್ಲಿ ಉಡುಪಿ ತಾಲೂಕಿನ ಐರೋಡಿಯಲ್ಲಿ ಬೂದ ಭಾಗವತ ಮತ್ತು ಗೌರಿಯಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು.ಸಾಸ್ತಾನದ ಪಾಂಡೇಶ್ವರ ಶಾಲೆಯಲ್ಲಿ ಸಮರ್ಥ ಗುರು ತೋನ್ಸೆ ಕಾಂತಪ್ಪ ಮಾಸ್ಟರ್ ಮತ್ತು ಬಸವ ಮಾಸ್ಟರ್ ಅವರಿಂದ ತರಬೇತಿ ಪಡೆದು ಐದನೇ ತರಗತಿಯಲ್ಲಿ ಕರ್ಣಾರ್ಜುನ ಪ್ರಸಂಗದ ಭೀಮನ ಪಾತ್ರ ಮಾಡಿ ಹಲವರ ಮೆಚ್ಚುಗೆಗೆ ಭಾಜನರಾಗಿದ್ದರು. ಶಾಲೆಬಿಟ್ಟ ನಂತರ ಗೋಳಿಗರಡಿ ಮೇಳಕ್ಕೆ ಬಾಲ ಕಲಾವಿದರಾಗಿ ಸೇರಿಕೊಂಡರು. ಕೋಡಂಗಿ ವೇಷ, ನಿತ್ಯ ವೇಷ, ಸ್ತ್ರೀವೇಷ, ಒಡ್ಡೋಲಗ ವೇಷ ಮಾಡಿಯೇ ತಾಳ್ಮೆ ಮತ್ತು ಶ್ರಮದಿಂದಲೇ ಇವರು ಮೇರು ಕಲಾವಿದರಾಗಿ ಕಾಣಿಸಿಕೊಂಡವರು.
Related Articles
Advertisement
25 ವರ್ಷ ಗೋಳಿಗರಡಿ ಮೇಳದಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿ ಖ್ಯಾತಿ ಪಡೆದರು. 1977ರಲ್ಲಿ ಬಡಗಿನ ಡೇರೆ ಮೇಳ ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆಯಾಗಿದ್ದು ಅವರ ಕಲಾಜೀವನ ಇನ್ನಷ್ಟು ಪ್ರಜ್ವಲಿಸಲು ಕಾರಣವಾಯಿತು. ಮರವಂತೆ ನರಸಿಂಹದಾಸ ಭಾಗವತರು, ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ, ಕೆಮ್ಮಣ್ಣು ಆನಂದ, ನೆಲ್ಲೂರು ಮರಿಯಪ್ಪಾಚಾರ್ ಅವರ ಗಜಗಟ್ಟಿ ಹಿಮ್ಮೇಳ, ಶಿರಿಯಾರ ಮಂಜುನಾಯಕ್, ಮುರೂರು ದೇವರು ಹೆಗಡೆ, ನಗರ ಜಗನ್ನಾಥ ಶೆಟ್ಟಿ, ಜಲವಳ್ಲಿ ವೆಂಕಟೇಶ ರಾವ್, ಅರಾಟೆ ಮಂಜುನಾಥ ಮೊದಲಾದವರೊಂದಿಗೆ ಹಲವು ಪಾತ್ರಗಳನ್ನು ನಿರ್ವಹಿಸಿ ಅಪಾರ ಅಭಿಮಾನಿಗಳನ್ನು ಸಂಗ್ರಹಿಸಿಕೊಂಡರು. ರಾಜ ನರ್ತಕಿ ಎಂಬ ಸಾಮಾಜಿಕ ಪ್ರಸಂಗದಳ್ಳಿ ಮುಸ್ಲಿಂ ಬಾದ್ ಶಾ ಪಾತ್ರ ನಿರ್ವಹಿಸಿ ಎಲ್ಲರಲ್ಲೂ ನೆನಪುಳಿಯುವಂತೆ ಮಾಡಿದರು.
ಕರ್ಣ ಮಾತ್ರವಲ್ಲದೆ ಭೀಷ್ಮ,ಶಂತನು, ಲವಕುಶದ ವಿಭೀಷಣ,ರಾಜಾ ಯಯಾತಿ, ಮಾರ್ತಾಂಡ ತೇಜ, ವಾಲಿ, ಅರ್ಜುನ, ಜಾಂಬವ ಪಾತ್ರಗಳು ಅಪಾರ ಜನಮನ್ನಣೆ ಪಡಿದಿವೆ. ಎರಡನೇ ವೇಷಧಾರಿ ಮಾತ್ರವಲ್ಲದೇ ಪರಿಪೂರ್ಣ ಪುರುಷ ವೇಷಧಾರಿಯಾಗಿಯೂ ಪಾತ್ರಗಳಿಗೆ ನೈಜತೆಯ ಜೀವಂತಿಕೆ ತುಂಬಿದವರು.
ಪೆರ್ಡೂರು ಮೇಳಕ್ಕೆ ಸೇರ್ಪಡೆಯಾಗಿ ಪದ್ಮಪಲ್ಲವಿಯ ರುದ್ರ ನಂದನ, ಚಾರು ಚಂದ್ರಿಕೆ ಪ್ರಸಂಗದಲ್ಲೂ ಹೆಸರು ಮಾಡಿದ್ದನ್ನು ಅಭಿಮಾನಿಗಳು, ಯಕ್ಷ ಪ್ರೇಮಿಗಳು, ಒಡನಾಡಿ ಕಲಾವಿದರು ಇಂದಿಗೂ ನೆನಪಿಸಿ ಕೊಳ್ಳುತ್ತಾರೆ. ಮೂಲ್ಕಿ ಮೇಳದಲ್ಲಿ ಸೀತಾ ಪಾರಮ್ಯ, ವೃಂದಾ, ಮಾತೃ ಮೋಕ್ಷ ಪ್ರಸಂಗದ ವಿವಿಧ ಪಾತ್ರಗಳನ್ನು ಸಾಟಿಯಿಲ್ಲದೆ ನಿರ್ವಹಿಸಿದ್ದರು.
ಯಕ್ಷರಂಗದಲ್ಲಿ ಮೊದಲ ರಾಷ್ಟ್ರ ಪ್ರಶಸ್ತಿ ವಿಜೇತ ಹರಾಡಿ ರಾಮಗಾಣಿಗರ ನೆನಪನ್ನು ರಂಗದಲ್ಲಿ ತೋರಿಸುತ್ತಾರೆ ಎಂದು ಹಲವು ಹಿರಿಯ ಕಲಾವಿದರು ನೆನಪಿಸಿಕೊಳ್ಳುತ್ತಾರೆ.
ಪಾರಂಪರಿಕ ಯಕ್ಷಗಾನದ ತಾರಾ ಮೌಲ್ಯವನ್ನು ಹೆಚ್ಚಿಸಿದ ಐರೋಡಿ ಗೋವಿಂದಪ್ಪ ಅವರು ತೆಂಕು ಮತ್ತು ಬಡಗು ತಿಟ್ಟುಗಳಲ್ಲೂ ಶಿಸ್ತಿನ ಕಲಾವಿದರಾಗಿ ಗುರುತಿಸಿಕೊಂಡವರು. ಕಲಾವಿದರಿಗೆ ಜಾತಿ, ಸಮುದಾಯ, ಪಂಗಡಗಳ ಅಡ್ಡಗೋಡೆ ಸಲ್ಲದು ಎಂದು ಪ್ರತಿಪಾದಿಸಿ ವಿಭಿನ್ನವಾಗಿ ಗಮನ ಸೆಳೆದವರು. ಹೋರಾಟದ ಮನೋಭಾವ ಮೈಗೂಡಿಸಿ ಕೊಂಡವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನಗಳನ್ನು ಅರ್ಹವಾಗಿ ಪಡೆದಿದ್ದಾರೆ.
ಭಾಗವತರಾದ ಮರವಂತೆ ನರಸಿಂಹದಾಸ,ನೆಲ್ಲೂರು ಮರಿಯಪ್ಪಾಚಾರ್, ಕಾಳಿಂಗ ನಾವಡ ಅವರೊಂದಿಗೆ ಪದ್ಯ ಎತ್ತುಗಡೆ ಮಾಡಿ ಯಾವುದೇ ನ್ಯೂನತೆ ಇಲ್ಲದೆ ರಾಗ,ತಾಳಕ್ಕೆ ಧಕ್ಕೆಯಾಗದಕ್ಕೆ ಧನಿಗೂಡಿಸುವುದನ್ನು ಇಂದಿಗೂ ಹಿರಿಯ ಯಕ್ಷ ಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ.
ಯಕ್ಷಗಾನ ಹೊಸತನದ ಹಾದಿ ಹಿಡಿದು ತನ್ನತನ ಕಳೆದುಕೊಳ್ಳುತ್ತಿರುವ ಬಗೆಗೆ ಐರೋಡಿಯವರಿಗೆ ಅಪಾರವಾದ ನೋವು, ಬೇಸರವಿದೆ. ನಡು ಬಡಗು ತಿಟ್ಟು ಉಳಿಸಿ ಬೆಳೆಸುವ ಬಗ್ಗೆ ಅಪಾರ ಕಾಳಜಿಯೂ ಇದೆ. ತನ್ನಲ್ಲಿ ಕೇಳಿದವರಿಗೆ ಪರಂಪರೆಯ ಕುರಿತು ಹೇಳಿಕೊಳ್ಳುವ ಸೌಜನ್ಯವೂ ಇದೆ.